ADVERTISEMENT

‘ಮನಸ್ಥಿತಿ ಬದಲಾದರೆ ಮಾತ್ರ ಸ್ವಚ್ಛ ಹಾವೇರಿ’

ಗ್ರಾಮೀಣ ಭಾಗಕ್ಕಿಂತ ನಗರದಲ್ಲೇ ಸ್ವಚ್ಛತೆ ಸಮಸ್ಯೆ ಹೆಚ್ಚು: ಜಿಲ್ಲಾಧಿಕಾರಿ ಬೇಸರ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 4:13 IST
Last Updated 1 ಫೆಬ್ರುವರಿ 2026, 4:13 IST
ಹಾವೇರಿಯ ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸ್ವಚ್ಛ ಭಾರತ ಮಿಷನ್ 2.0 ಯೋಜನೆಯ ಸಾಮರ್ಥ್ಯಾಭಿವೃದ್ಧಿ ಘಟಕದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ’ದಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರನ್ನು ಸನ್ಮಾನಿಸಲಾಯಿತು
ಹಾವೇರಿಯ ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸ್ವಚ್ಛ ಭಾರತ ಮಿಷನ್ 2.0 ಯೋಜನೆಯ ಸಾಮರ್ಥ್ಯಾಭಿವೃದ್ಧಿ ಘಟಕದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ’ದಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರನ್ನು ಸನ್ಮಾನಿಸಲಾಯಿತು   

ಹಾವೇರಿ: ‘ಸ್ವಚ್ಛತೆಗಾಗಿ ಸರ್ಕಾರಗಳು ಸಾಕಷ್ಟು ಕಾನೂನು ಮಾಡಿವೆ. ಯೋಜನೆಗಳನ್ನು ಜಾರಿಗೊಳಿಸಿವೆ. ಹಣಕಾಸು ಹಾಗೂ ಮಾನವ ಸಂಪನ್ಮೂಲವನ್ನೂ ನೀಡುತ್ತಿವೆ. ಅಷ್ಟಾದರೂ ಹಾವೇರಿ ಜಿಲ್ಲೆಯಲ್ಲಿ ಸ್ವಚ್ಛತೆ ಸಮರ್ಪಕವಾಗಿ ಆಗುತ್ತಿಲ್ಲ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ‘ಸ್ವಚ್ಛ ಸರ್ವೇಕ್ಷಣಾ–2025’ರ ಅಂಗವಾಗಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಸಮುದಾಯ ಚಲನಶೀಲರಿಗಾಗಿ ಶನಿವಾರ ಹಮ್ಮಿಕೊಂಡಿದ್ದ ‘ಸ್ವಚ್ಛ ಭಾರತ ಮಿಷನ್ 2.0 ಯೋಜನೆಯ ಸಾಮರ್ಥ್ಯಾಭಿವೃದ್ಧಿ ಘಟಕದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

‘ಪೌರ ಕಾರ್ಮಿಕರಿಂದ ಹಿಡಿದು ಎಲ್ಲ ಅಧಿಕಾರಿಗಳು ಹಾಗೂ ಸಾರ್ವಜನಿಕರು, ಮೊದಲು ವೈಯಕ್ತಿಕವಾಗಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಎಲ್ಲರ ಮನಸ್ಥಿತಿ ಬದಲಾದರೆ ಮಾತ್ರ ಪರಿಸರ ಸ್ವಚ್ಛವಾಗುತ್ತದೆ. ನಗರ ಹಾಗೂ ಹಳ್ಳಿಗಳೂ ಬದಲಾಗುತ್ತವೆ’ ಎಂದು ತಿಳಿಸಿದರು.

ADVERTISEMENT

‘ಹಿಮ್ಸ್ (ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಹಾಗೂ ಹೊಸ ಬಸ್ ನಿಲ್ದಾಣ ಬಿಟ್ಟರೆ, ಬೇರೆ ಏನು ಬದಲಾವಣೆ ಆಗಿಲ್ಲ. ಅಧಿಕಾರಿಗಳು, ಸಂಬಳಕ್ಕಾಗಿ ಮಾತ್ರವಲ್ಲದೇ ಆತ್ಮತೃಪ್ತಿಗಾಗಿ ಕೆಲಸ ಮಾಡಿದರೆ ಮಾತ್ರ ಹಾವೇರಿ ಬದಲಾಗುತ್ತದೆ. ಸ್ವಚ್ಛತೆ ಜವಾಬ್ದಾರಿ ನಿರ್ವಹಣೆಗಾಗಿ ನೇಮಕವಾಗಿರುವ ಸಮುದಾಯ ಚಲನಶೀಲರು, ಜನರಲ್ಲಿ ಜಾಗೃತಿ ಮೂಡಿಸಬೇಕು. ಜನರು ತಮ್ಮ ಮಾತು ಕೇಳುತ್ತಿಲ್ಲವೆಂದು ಸಮಸ್ಯೆ ಹೇಳಿಕೊಂಡೇ ಓಡಾಡುವುದಾದರೆ, ಅಂಥವರು ರಾಜೀನಾಮೆ ನೀಡಿ ಹೋಗುವುದು ಒಳ್ಳೆಯದು’ ಎಂದು ಖಡಕ್ ಎಚ್ಚರಿಕೆ ನೀಡಿದರು.

‘ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ತಿನ್ನಲು ಆಹಾರ, ಹಾಕಿಕೊಳ್ಳಲು ಬಟ್ಟೆ, ಇರಲು ಸೂರು ಜನರ ಬೇಡಿಕೆಗಳಾಗಿದ್ದವು. ಸಮಾಜ ಹಾಗೂ ದೇಶ ಅಭಿವೃದ್ಧಿಯಾದಂತೆ, ಜನರ ಬೇಡಿಕೆ ಬದಲಾದವು. ಈಗ ಜನರಿಗೆ ಶಿಕ್ಷಣ, ಆರೋಗ್ಯ ಹಾಗೂ ಕುಶಲ ಅಭಿವೃದ್ಧಿ ಬೇಕಿದೆ. ಸ್ವಚ್ಛ ಪರಿಸರ ಹೊಂದಲು ಸಂವಿಧಾನವೇ ಹಕ್ಕು ನೀಡಿದೆ. ಆದರೆ, ಪ್ರತಿ ವರ್ಷವೂ ಸ್ವಚ್ಛತೆ ನಗರ ಪಟ್ಟಿಯಲ್ಲಿ ಇಂಧೋರ್ ಪ್ರಥಮ ಸ್ಥಾನ ಪಡೆಯುತ್ತಿದೆ. ಆ ನಗರಕ್ಕೆ ಸಿಗುವ ಯೋಜನಗಳೇ ಎಲ್ಲ ನಗರಕ್ಕೂ ಸಿಗುತ್ತಿವೆ. ಅಷ್ಟಾದರೂ ಉಳಿದ ನಗರಗಳು ಏಕೆ ಪ್ರಥಮ ಸ್ಥಾನ ಪಡೆಯುತ್ತಿಲ್ಲ? ಸ್ವಚ್ಛತೆ ಜವಾಬ್ದಾರಿ ವಹಿಸಿಕೊಂಡಿರುವ ಅಧಿಕಾರಿ–ಸಿಬ್ಬಂದಿ ಬೇಜವಾಬ್ದಾರಿಯೇ ಅದಕ್ಕೆ ಕಾರಣ’ ಎಂದು ಬೇಸರ ಹೊರಹಾಕಿದರು.

‘ಹಾವೇರಿ ಜಿಲ್ಲೆಯಲ್ಲಿಯೂ ಕೇಳಿದಷ್ಟು ಸಿಬ್ಬಂದಿಯನ್ನು ನೀಡುತ್ತಿದ್ದೇವೆ. ಪೌರ ಕಾರ್ಮಿಕರಿಗೂ ತಿಂಡಿ ಹಾಗೂ ಇತರೆ ಸೌಲಭ್ಯ ನೀಡುತ್ತಿದ್ದೇವೆ. ಅಧಿಕಾರಿಗಳು ಕೇಳಿದಾಗಲೆಲ್ಲ ಪರಿಕರ, ಟ್ರ್ಯಾಕ್ಟರ್, ವಾಹನ ಕೊಡುತ್ತಿದ್ದೇವೆ. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ವ್ಯವಸ್ಥೆಯಿದೆ. ಆದರೆ, ಈ ಕೆಲಸಗಳನ್ನು ಸಂಬಂಧಪಟ್ಟವರು ಸಮರ್ಪಕವಾಗಿ ಮಾಡುತ್ತಿಲ್ಲ. ಜನರು ವಿಂಗಡಣೆ ಮಾಡದೇ ಕಸ ನೀಡುತ್ತಿದ್ದಾರೆ. ಸ್ವಚ್ಛತೆ ಇರದಿರುವುದಕ್ಕೆ ಎಲ್ಲರೂ ಕಾರಣ. ಸ್ವಚ್ಛತೆ ವಿಚಾರದಲ್ಲಿ ಎಲ್ಲರ ಮನಸ್ಥಿತಿ ಬದಲಾಗಬೇಕು’ ಎಂದು ಹೇಳಿದರು.

ನಗರದಲ್ಲೇ ಹೆಚ್ಚು ಸಮಸ್ಯೆ: ‘ನಗರೋತ್ಥಾನ ಪರಿಶೀಲನೆಗೆ ಹೋದಾಗ, ಜನರು ಕಸದ ರಾಶಿ ತೋರಿಸುತ್ತಾರೆ. ಅಲ್ಲಿಯ ವ್ಯವಸ್ಥೆ ಬಗ್ಗೆ ದೂರುತ್ತಾರೆ. ಆದರೆ, ಜನರು ಸಹ ಕಾಲುವೆಯಲ್ಲಿ ಕಸ ಹಾಕುತ್ತಾರೆ. ಅದರಿಂದ ಕಾಲುವೆಯಲ್ಲಿ ನೀರು ನಿಂತು ಗಲೀಜಾಗುತ್ತದೆ. ಇದಕ್ಕೆ ಯಾರು ಕಾರಣ ಯಾರು ? ನಮ್ಮ ಜವಾಬ್ದಾರಿ ಏನು? ಎಂಬುದನ್ನು ಅರಿತುಕೊಳ್ಳಬೇಕು’ ಎಂದು ವಿಜಯ ಮಹಾಂತೇಶ ತಿಳಿಸಿದರು.

‘ಜಿಲ್ಲೆಯಲ್ಲಿ ಸ್ವಚ್ಛತೆಯಲ್ಲಿ ಗ್ರಾಮೀಣ ಪ್ರದೇಶಗಳೇ ಮುಂದಿವೆ. ಆದರೆ, ನಗರಗಳಲ್ಲಿ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ನರೇಂದ್ರ ಮೋದಿ ಅವರು ಕಂಡಿರುವ ವಿಕಸಿತ ಭಾರತದ ಕನಸು ನನಸಾಗಬೇಕಾದರೆ, ಜನರು ಆರೋಗ್ಯವಂತರಾಗಿರಬೇಕು. ಅದಕ್ಕೆ ನಮ್ಮ ಪರಿಸರ ಸ್ವಚ್ಛವಾಗಿರಬೇಕು. ಕಾನೂನುಗಳಿವೆ. ಅದರ ಬಗ್ಗೆ ಜನರಿಗೆ ತಿಳಿಹೇಳಿ. ಇಲ್ಲದಿದ್ದರೆ, ಕಾನೂನು ಪ್ರಕಾರ ಮುಂದುವರಿಯಿರಿ. ಚೆನ್ನಾಗಿ ಕೆಲಸ ಮಾಡಿದರೆ ಜಿಲ್ಲಾಡಳಿತದಿಂದ ಸನ್ಮಾನ ಮಾಡುತ್ತೇವೆ’ ಎಂದು ಹೇಳಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಪ್ಪ, ನಗರಸಭೆ ಪೌರಾಯುಕ್ತ ಎಚ್‌. ಕಾಂತರಾಜು ಹಾಗೂ ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಜರಿದ್ದರು. ಶಿವಾನಂದ ಕ್ಯಾಲಕೊಂಡ ನಿರೂಪಿಸಿದರು.

ಚಾಲಕನ ಅಮಾನತಿಗೆ ತಿಳಿಸಿದ್ದೆ

’ ‘ಕಸ ಸಾಗಣೆ ವಾಹನಗಳ ಚಾಲಕರು ಕೈಯಲ್ಲಿ ಮೊಬೈಲ್ ಕಿವಿಯಲ್ಲಿ ಏರಪೋನ್‌ ಹಾಕಿಕೊಂಡಿರುತ್ತಾರೆ. ನನ್ನ ಮುಂದೆಯೇ ಕೆಲವರು ಈ ರೀತಿ ವರ್ತಿಸಿರುವುದನ್ನು ಕಂಡಿದ್ದೇನೆ. ಸವಣೂರಿನಲ್ಲಿ ಚಾಲಕನೊಬ್ಬ ಕಸವನ್ನು ಪ್ರವೇಶ ದ್ವಾರದಲ್ಲಿಯೇ ಹಾಕುತ್ತಿದ್ದ. ಆತನನ್ನು ಅಮಾನತು ಮಾಡುವಂತೆಯೂ ಅಲ್ಲಿಯ ಪುರಸಭೆಯ ಮುಖ್ಯಾಧಿಕಾರಿಗೆ ತಿಳಿಸಿದ್ದೆ. ಏನು ಮಾಡಿದರೂ ಗೊತ್ತಿಲ್ಲ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು. ವೇದಿಕೆಯಲ್ಲಿದ್ದ ಮುಖ್ಯಾಧಿಕಾರಿ ತಲೆಯಾಡಿಸಿ ಸುಮ್ಮನಾದರು. ‘ಮನೆಯಲ್ಲಿಯೇ ಕಸದ ವಿಂಗಡಣೆ ವೈಜ್ಞಾನಿಕ ಕಸ ವಿಲೇವಾರಿ ಸೇರಿದಂತೆ ಎಲ್ಲ ಕೆಲಸದಲ್ಲಿ ಮನಸ್ಥಿತಿ ಬದಲಾಗಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕೆಲಸವನ್ನು ಸಮರ್ಪಕವಾಗಿ ಮಾಡಬೇಕು. ಜನರಲ್ಲೂ ಸ್ವಚ್ಛತೆ ಪ್ರಜ್ಞೆ ಇರಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.