ADVERTISEMENT

ರಟ್ಟೀಹಳ್ಳಿ: ಸೌಕರ್ಯವಿಲ್ಲದೆ ಬಳಲುತ್ತಿದೆ ಆಸ್ಪತ್ರೆ

ಪ್ರದೀಪ ಕುಲಕರ್ಣಿ
Published 14 ಏಪ್ರಿಲ್ 2025, 5:20 IST
Last Updated 14 ಏಪ್ರಿಲ್ 2025, 5:20 IST
<div class="paragraphs"><p>ತಡಕನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವಸತಿಗೃಹ ಪಾಳು ಬಿದ್ದಿದೆ</p></div>

ತಡಕನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವಸತಿಗೃಹ ಪಾಳು ಬಿದ್ದಿದೆ

   

ರಟ್ಟೀಹಳ್ಳಿ: ತಾಲ್ಲೂಕಿನ ತಡಕನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನರಿಗೆ ಸಕಾಲಕ್ಕೆ ವೈದ್ಯಕೀಯ ಉಪಚಾರ ದೊರೆಯುತ್ತಿಲ್ಲ. ಸಮರ್ಪಕ ಆರೋಗ್ಯ ಸೇವೆ ಸಿಗದೆ ಜನರು ಪರದಾಡುವಂತಾಗಿದೆ.

ತಡಕನಹಳ‍್ಳಿ ಗ್ರಾಮದಲ್ಲಿ 1,100 ಜನಸಂಖ್ಯೆಯಿದ್ದು, ಸುತ್ತಲಿನ ಗ್ರಾಮಗಳಾದ ಹೊಸಕಟ್ಟಿ, ನಾಗವಂದ, ಅಣಜಿ, ಗುಡ್ಡದಮಾದಾಪುರ, ಹಳಿಯಾಳ, ಅಂಗರಗಟ್ಟಿ, ಕೆಂಚಾಯಿಕೊಪ್ಪ, ಹಿರೇಕಬ್ಬಾರದ ಜನರು ವೈದ್ಯಕೀಯ ಸೇವೆಗಾಗಿ ತಡಕನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ.

ADVERTISEMENT

‘ಗ್ರಾಮದಲ್ಲಿ ಬಹುತೇಕ ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಈ ವೇಳೆ ಏನಾದರೂ ಸಮಸ್ಯೆಯಾದರೆ, ವಿಷಜಂತುಗಳ ಕಡಿದರೆ ತಕ್ಷಣ ಆಸ್ಪತ್ರೆಗೆ ಬರಬೇಕಿದೆ. ಆದರೆ, ‘ಆಸ್ಪತ್ರೆ ಸೇವೆ 24X7’ ಎಂಬುದು ನಾಮಫಲಕದಲ್ಲಿ ಮಾತ್ರ ಎನ್ನುವಂತಾಗಿದೆ. ಸಂಜೆಯಾಗುತ್ತಲೇ ಆಸ್ಪತ್ರೆ ಬಾಗಿಲು ಹಾಕಿರುತ್ತದೆ. ರಾತ್ರಿ ಯಾವ ವೈದ್ಯರೂ ತುರ್ತು ಚಿಕಿತ್ಸೆಗೆ ಲಭ್ಯ ಇರುವುದಿಲ್ಲ. ಬೆಳಿಗ್ಗೆಯೂ, ಸಿಬ್ಬಂದಿ ಕೊರತೆಯಿಂದಾಗಿ ಚಿಕಿತ್ಸೆ ಸಿಗುತ್ತಿಲ್ಲ. ಆಂಬುಲೆನ್ಸ್ ಸೇವೆಯೂ ಅಗತ್ಯವಿದೆ’ ಎಂದು ಗ್ರಾಮಸ್ಥರು ತಿಳಿಸಿದರು.

‘ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ರಸ್ತೆಯಿಂದ ತಗ್ಗಿನಲ್ಲಿದ್ದು, ಮಳೆಗಾಲದಲ್ಲಿ ಕೇಂದ್ರದ ಸುತ್ತ ಮಳೆ ನೀರು ನಿಲ್ಲುತ್ತದೆ. ನೀರಿನ ಗುಂಡಿಯಲ್ಲೇ ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳು ಓಡಾಡಬೇಕಾಗುತ್ತದೆ. ಕಟ್ಟಡವೂ ಅತ್ಯಂತ ಚಿಕ್ಕದಾಗಿದೆ’ ಎಂದು ಗ್ರಾಮಸ್ಥ ಶಿವಾನಂದ ಯಾಲಕ್ಕಿ ದೂರಿದರು.

‘ತಡಕನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಟ್ಟು 12 ಮಂಜೂರಾದ ಹುದ್ದೆಗಳಿದ್ದು, ಸದ್ಯ ಸೇವೆಯಲ್ಲಿ ಇರುವವರು ಐವರು ಮಾತ್ರ. ಇಬ್ಬರು ಮಹಿಳೆ, ಇಬ್ಬರು ಪುರುಷ ಸಿಬ್ಬಂದಿ ಹಾಗೂ ಒಬ್ಬ ಫಾರ್ಮಸಿಸ್ಟ್‌ ಅಗತ್ಯವಿದೆ’ ಎಂದು ಕೇಂದ್ರದ ವೈದ್ಯಾಧಿಕಾರಿ ಲೋಕೇಶ ತಿಳಿಸಿದರು.

‘ವಸತಿ ಗೃಹಗಳು ಸುಸ್ಥಿತಿಯಲ್ಲಿದ್ದರೆ ವೈದ್ಯರು ಹಾಗೂ ಸಿಬ್ಬಂದಿ ಅಲ್ಲಿಯೇ ಇದ್ದು ಸೇವೆ ಸಲ್ಲಿಸಬಹುದು. ನಾನು ಈ ಕೇಂದ್ರದ ಜೊತೆಗೆ ಹೆಚ್ಚುವರಿಯಾಗಿ ರಟ್ಟೀಹಳ್ಳಿ

ಆರೋಗ್ಯ ಕೇಂದ್ರದಲ್ಲೂ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಇದರಿಂದ

ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಾಸವಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.