ತಡಸ: ತಡಸ ಸುತ್ತಮುತ್ತಲಿನ ಗ್ರಾಮಗಳ ಹಾಗೂ ಕಲಘಟಗಿ, ಕುಂದಗೋಳ ತಾಲ್ಲೂಕಿನ ಮಕ್ಕಳ ಉನ್ನತ ಶಿಕ್ಷಣ ಕೇಂದ್ರವಾಗಿರುವ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.
ಗ್ರಾಮದಲ್ಲಿ ಕಾಲೇಜು 2006 ಮಂಜೂರಾಗಿದ್ದು 2007 ಸಾಲಿನಲ್ಲಿ ಸ್ಥಾಪನೆಯಾಗಿರುವ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಹಲವು ಬಡ ಮಕ್ಕಳ ಶಿಕ್ಷಣ ಕೇಂದ್ರವಾಗಿದೆ ಸರಿಯಾದ ಸೌಕರ್ಯ ಹಾಗೂ ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವಲ್ಲಿ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರ ಆರೋಪವಾಗಿದೆ.
ಕಾಲೇಜು ಸುತ್ತಲೂ ಕಾಂಪೌಂಡ್ ಇಲ್ಲ
ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಸ್ಥಾಪನೆಯಾಗಿ 18 ವರ್ಷ ಕಳೆದರೂ ಇನ್ನೂವರೆಗೆ ಸುತ್ತಲು ಕಾಂಪೌಂಡ್ ವ್ಯವಸ್ಥೆ ಇಲ್ಲದೆ ಹುಬ್ಬಳ್ಳಿ–ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಓಡಾಡುವಂತ ವಾಹನ ಶಬ್ದಕ್ಕೆ ಮಕ್ಕಳ ಕಲಿಕೆ ಅಡ್ಡಿಯಾಗುತ್ತಿದೆ. ಕೆಲ ಪುಡಾಡಿ ಯುವಕರು ಬೇಕಂತಲೇ ಹೆಚ್ಚು ಶಬ್ದವಿರುವ ಬೈಕ್ ಅನ್ನು ಕಾಲೇಜಿನ ಮುಂದೆ ಹಾರ್ನ್ ಹಾಕುತ್ತಾ ಓಡಿಸುವ ಕೆಲಸ ಮಾಡುತ್ತಾರೆ ಎಂದು ಕಾಲೇಜಿನ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ದನ ಮೇಯಿಸುವ ಮೈದಾನ: ಕಾಲೇಜಿಗೆ ಸುತ್ತಲೂ ಸೂಕ್ತ ಕಾಂಪೌಂಡ್ ವ್ಯವಸ್ಥೆಯಿಲ್ಲದೆ ಗ್ರಾಮದ ದನ, ಕರುಗಳು ಹಾಗೂ ಆಡು ಮೇಯಿಸುವವರು ಮೈದಾನದಲ್ಲಿ ಬೆಳೆದಿರುವ ಹುಲ್ಲನ್ನು ಮೇಯಿಸುವ ಜೊತೆಗೆ ಮೈದಾನದಲ್ಲಿ ಖಾಸಗಿ ವಾಹನಗಳು ನಿಲ್ಲಿಸುವುದು ನಡೆದಿದೆ.
ರಾತ್ರಿ ಸಮಯ ಕುಡುಕರ ತಾಣ: ಸೂಕ್ತ ಕಂಪೌಂಡ್ ವ್ಯವಸ್ಥೆ ಇಲ್ಲದೆ ರಾತ್ರಿ ಸಮಯ ಕಾಲೇಜಿನ ಮೈದಾನದಲ್ಲಿ ಕಾಲೇಜಿನ ಒಳ ಹಾಲಿನಲ್ಲಿ ಕುಡುಕರು ಕುಳಿತುಕೊಂಡು ತಮ್ಮ ಚಟವನ್ನು ಮುಗಿಸಿಕೊಂಡು ಬಾಟಲಿ ಸಿಗರೇಟ್ ಮುಂತಾದ ಮಧ್ಯಪಾನ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗುವ ಪರಿ ನಿರ್ಮಾಣವಾಗಿದೆ ಎಂದು ಗ್ರಾಮದ ಶಿವರಾಜ ಹೇಳುತ್ತಾರೆ.
ಕಾಲೇಜು ಸ್ಥಾಪನೆ ಮಾಡಿ ಹಲವು ವರ್ಷಗಳು ಕಳೆದಿವೆ. ಆದರೆ ಸಮರ್ಪಕ ಸೌಕರ್ಯ ನೀಡುವಲ್ಲಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳು ಮೀನ ಮೇಷ ಮಾಡುತ್ತಿದ್ದು, ಮುಂದಿನ ದಿನಮಾನದಲ್ಲಿ ವ್ಯವಸ್ಥೆ ಕಲ್ಪಿಸಿ ಕೊಡದಿದ್ದಲ್ಲಿ ಹಳೇ ವಿದ್ಯಾರ್ಥಿಗಳ ಹಾಗೂ ಪ್ರಸ್ತುತ ಕಲಿಯುತ್ತಿರುವ ವಿದ್ಯಾರ್ಥಿಗಳು ಸೇರಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಕಾಲೇಜಿನ ಸುತ್ತಲೂ ಕಾಂಪೌಂಡ್ ನಿರ್ಮಿಸುವಂತೆ ಮೇಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿದ್ದು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಮೇಲಾಧಿಕಾರಿ ಗಮನಕ್ಕೆ ತರಲಾಗಿದೆ
–ಪಾರ್ವತಿ ಜೋಶಿ ಪ್ರಭಾರ ಪ್ರಾಚಾರ್ಯ
ಸೌಕರ್ಯ ಕೊರತೆ
ಕಾಲೇಜಿನಲ್ಲಿ ಸಮತಟ್ಟಾದ ಮೈದಾನ ಇಲ್ಲದೆ ಆಟ ಆಡಲು ಆಗುತ್ತಿಲ್ಲ ಸ್ವಚ್ಛತಗಾರರು ಇಲ್ಲದಿರುವುದರಿಂದ ಶೌಚಾಲಯಗಳು ದುರ್ವಾಸನೆ ಬೀರುತ್ತಿದೆ. ಇದರಿಂದ ಗಂಡು ಮಕ್ಕಳು ಹೊರವಲಯದಲ್ಲಿ ಶೌಚ ಮಾಡಿಕೊಂಡು ಬರುವಂತಹ ಸ್ಥಿತಿ ಇದೆ ಎಂದು ಕಾಲೇಜಿನ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಒಬ್ಬಬ್ಬರೇ ಕಾಯಂ ಉಪನ್ಯಾಸಕರು ಇದ್ದು ಉಳಿದೆಲ್ಲ ಅರೆಕಾಲಿಕ ಉಪನ್ಯಾಸಕರಿದ್ದಾರೆ. ಮಕ್ಕಳಿಗೆ ಸೂಕ್ತ ಕಲಿಕೆ ಸಿಗುತ್ತಿಲ್ಲ ಅಧಿಕಾರಿಗಳು ಮಕ್ಕಳ ಶೈಕ್ಷಣಿಕ ಮಟ್ಟ ಕುಸಿಯಲು ನೇರೆ ಹೊಣೆ ಆಗಿದ್ದಾರೆ ಎಂದು ಪಾಲಕರ ಆಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.