ADVERTISEMENT

ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ಕಲಿಸಿ: ಬಿ.ಎಲ್‌. ಸಂತೋಷ

​ಪ್ರಜಾವಾಣಿ ವಾರ್ತೆ
Published 22 ಮೇ 2025, 13:26 IST
Last Updated 22 ಮೇ 2025, 13:26 IST
ಹಾನಗಲ್‌ ಹೊರಭಾಗದ ಮಲ್ಲಿಗಾರದ ಬಳಿ ಗುರುವಾರ ನಡೆದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿ.ಎಲ್‌. ಸಂತೋಷ ಮಾತನಾಡಿದರು
ಹಾನಗಲ್‌ ಹೊರಭಾಗದ ಮಲ್ಲಿಗಾರದ ಬಳಿ ಗುರುವಾರ ನಡೆದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿ.ಎಲ್‌. ಸಂತೋಷ ಮಾತನಾಡಿದರು   

ಹಾನಗಲ್: ‘ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳನ್ನು ಪ್ರಯೋಗಕ್ಕಾಗಿ ಸ್ಥಾಪಿಸಿದ್ದಲ್ಲ. ವಿದ್ಯಾಕೇಂದ್ರಗಳ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ಸಂಸ್ಕಾರ ಕಲಿಸುತ್ತಿರುವುದು ಸತ್ಯ ಸಂಗತಿ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ ಹೇಳಿದರು.

ಪಟ್ಟಣದ ಹೊರಭಾಗದ ಮಲ್ಲಿಗಾರದ ಬಳಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

‘ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳು ಹಲವಾರು ವರ್ಷಗಳಿಂದ ಶ್ರಮಿಸುತ್ತಿವೆ. ಶಾಲೆಯಂತೆಯೇ ಸಂಸ್ಕಾರದ ವಾತಾವರಣವನ್ನು ಮನೆಯಲ್ಲೂ ಸೃಷ್ಟಿಸುವ ಗುರುತರ ಜವಾಬ್ದಾರಿ ಪಾಲಕರ ಮೇಲಿದೆ’ ಎಂದರು.

ADVERTISEMENT

ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ದಿನೇಶ ಹೆಗಡೆ ಮಾತನಾಡಿ, ‘ಹಾನಗಲ್ ವ್ಯಾಪ್ತಿಯ ಶೈಕ್ಷಣಿಕ ಇತಿಹಾಸದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸ್ಥಾಪನೆಯು ಮೈಲಿಗಲ್ಲಾಗಿದೆ. ಈ ಶಾಲೆ ಸ್ಥಾಪನೆಗಾಗಿ 15 ವರ್ಷಗಳಿಂದ ಸಂಕಲ್ಪ ಮಾಡಲಾಗಿತ್ತು. ಇದಕ್ಕೆ ದಿ. ಸಿ.ಎಂ. ಉದಾಸಿ ಅವರ ಶ್ರಮ ಅಪಾರವಾಗಿದೆ’ ಎಂದು ತಿಳಿಸಿದರು.

ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ‘ಈ ಭಾಗದಲ್ಲಿ ಸಿಬಿಎಸ್‌ಸಿ ಶಿಕ್ಷಣ ಪದ್ಧತಿಯ ಸುಸಜ್ಜಿತ ಶಾಲೆ ಆರಂಭಗೊಂಡಿರುವುದು ಶೈಕ್ಷಣಿಕ ಉನ್ನತಿಗೆ ಮುನ್ನುಡಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ, ಆರ್‌ಇಸಿ ಬೆಂಗಳೂರ ಕಂಪನಿಯ ಸೋಮ್ಯಕಾಂತ್‌, ನಾರಾಯಣ ತಿರುಪತಿ, ಬಿದ್ಯಾನಂದ್‌ ಝಾ, ಅಣ್ಣಪ್ಪ ದೇವರಮನೆ, ಶಾಲೆಯ ಪ್ರಾಚಾರ್ಯೆ ಶ್ರೀದೇವಿ ಇದ್ದರು.

ಮೌಲ್ಯ ಕಲಿಸುವ ಶಿಕ್ಷಣ ಅಗತ್ಯ

‘ಭಾರತೀಯರ ಅಂತಃಶಕ್ತಿಯನ್ನು ತೊಡೆದುಹಾಕುವ ಪ್ರಯತ್ನವಾಗಿ ಮೆಕಾಲೆ ಶಿಕ್ಷಣ ಪದ್ಧತಿ ಜಾರಿಗೆ ಬಂದಿತ್ತು. ಸಾಕ್ಷರರಾಗುವುದಷ್ಟೇ ಸಾಧನೆ ಅಲ್ಲ. ಸಾಕ್ಷರತೆ ನೆಪದಲ್ಲಿ ರಾಕ್ಷಸರನ್ನು ಸಿದ್ಧಪಡಿಸುವ ಶಿಕ್ಷಣ ಬೇಡ. ಜೀವನದ ಮೌಲ್ಯ ಕಲಿಸುವ ಶಿಕ್ಷಣದ ಅಗತ್ಯವಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.