ADVERTISEMENT

‘ವಸತಿಯುತ ಕಾಲೇಜು ಬಡಮಕ್ಕಳ ಆಶಾಕಿರಣ’

ಶಾಸಕ ನೆಹರು ಓಲೇಕಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 15:46 IST
Last Updated 10 ಜುಲೈ 2020, 15:46 IST
ಹಾವೇರಿ ತಾಲ್ಲೂಕು ಕಳ್ಳಿಹಾಳ ಗ್ರಾಮದಲ್ಲಿ ಶುಕ್ರವಾರ ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು’ ನಿರ್ಮಾಣದ ಭೂಮಿಪೂಜೆಯನ್ನು ಶಾಸಕ ನೆಹರು ಓಲೇಕಾರ ನೆರವೇರಿಸಿದರು 
ಹಾವೇರಿ ತಾಲ್ಲೂಕು ಕಳ್ಳಿಹಾಳ ಗ್ರಾಮದಲ್ಲಿ ಶುಕ್ರವಾರ ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು’ ನಿರ್ಮಾಣದ ಭೂಮಿಪೂಜೆಯನ್ನು ಶಾಸಕ ನೆಹರು ಓಲೇಕಾರ ನೆರವೇರಿಸಿದರು    

ಹಾವೇರಿ: ‘ಜಿಲ್ಲೆಗೆ ಈ ವಸತಿಯುತ ಕಾಲೇಜು ಮಂಜೂರಾಗಿರುವುದು, ನೂರಾರು ಬಡ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದ ಮಕ್ಕಳ ಶೈಕ್ಷಣಿಕ ಕನಸನ್ನು ನನಸು ಮಾಡಲಿದೆ’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ತಾಲ್ಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಭಾಗಗಳಲ್ಲಿನ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಸರ್ಕಾರ ಗ್ರಾಮೀಣ ಭಾಗದಲ್ಲಿ ವಸತಿಯುತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ’ ಎಂದು ಹೇಳಿದರು.

ADVERTISEMENT

ಈ ವಸತಿಯುತ ಕಾಲೇಜ‌ನ್ನು ₹23 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಪ್ರತಿ ವರ್ಷ 120 ವಿದ್ಯಾರ್ಥಿಗಳಂತೆ ಮೂರು ವರ್ಷಗಳ ತರಗತಿಯಲ್ಲಿ ಒಟ್ಟು 360 ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಲಾಗುವುದು. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಶೇ 60 ಹಾಗೂ ಇತರೆ ಸಮುದಾಯದ ವಿದ್ಯಾರ್ಥಿಗಳಿಗೆ ಶೇ 40ರಷ್ಟು ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.

ಇದಕ್ಕೂ ಮುನ್ನ ಸವಣೂರ ತಾಲ್ಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ₹22 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಇಂದಿರಾಗಾಂಧಿ ಮೊರಾರ್ಜಿ ವಸತಿ ಶಾಲೆಯ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಕಡಕೋಳ ಗ್ರಾಮದಲ್ಲಿ ₹47 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ‘ಪಶು ಚಿಕಿತ್ಸಾ ಕೇಂದ್ರ‌’ವನ್ನು ಉದ್ಘಾಟಿಸಿದರು.

ಸವಣೂರು ತಾ.ಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಚೈತ್ರಾ, ಹಾವೇರಿ ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷೆ ಸುವರ್ಣಾ ಬ.ಸುಕಳಿ, ಸಿ.ಬಿ.ಪಾಟೀಲ, ನಗರ ಸಭೆ ಸದಸ್ಯರಾದ ಗಿರೀಶ ತುಪ್ಪದ, ಜಗದೀಶ ಮಲಗೌಡ, ಮಲ್ಲಣ್ಣ ಅಗಡಿ, ಶ್ರೀಧರ ಆನವಟ್ಟಿ ಸಿ.ಡಿ.ಸಿ. ಸದಸ್ಯರು,ಕೃಷ್ಣ ಸುಣಗಾರ, ಸಿದ್ದಪ್ಪ ಗುಂಜಾಳ, ಮಲ್ಲಿಕೇರಿ, ವಿ.ಆರ್.ಪಾಟೀಲ, ಬಸವರಾಜ ಡೊಂಕಣ್ಣನವರ, ನಾಗರಾಜ ಬಸಣ್ಣಿಯವರು, ಉಡಚಪ್ಪ ತಳವಾರ, ಸುರೇಶ್ ಗುಜರಿ, ಭಗವಂತಗೌಡ ಪಾಟೀಲ, ಶಂಕ್ರಪ್ಪ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.