ಹಾವೇರಿ: ಹಾವೇರಿ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಬಿಡುವು ನೀಡುತ್ತಲೇ ಮಳೆ ಸುರಿಯುತ್ತಿದ್ದು, ಸೋಮವಾರ ಸಂಜೆ ಸಿಡಿಲಿನ ಹೊಡೆತಕ್ಕೆ ವೃದ್ಧೆ ಸೇರಿ ಮೂವರು ಮೃತಪಟ್ಟಿದ್ದಾರೆ.
ಹಿರೇಕೆರೂರು ತಾಲ್ಲೂಕಿನ ಡಮ್ಮಳ್ಳಿಯ ನಾಗಪ್ಪ ಬಸವಣೆಪ್ಪ ಕಣಸೋಗಿ (65), ರಟ್ಟೀಹಳ್ಳಿ ತಾಲ್ಲೂಕಿನ ಕುಡುಪಲಿ ಸುನೀಲ್ ಕಾಳೇರ (29) ಹಾಗೂ ಗದಗ ಜಿಲ್ಲೆಯ ಬಸಾಪುರದ ಮರಿಯವ್ವ ನಾಯ್ಕರ್ (60) ಮೃತರು. ಇವರ ಸಾವಿನ ಬಗ್ಗೆ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
‘ನಾಗಪ್ಪ ಅವರು ಜಮೀನಿನಲ್ಲಿ ಎತ್ತು ಮೇಯಿಸುವಾಗ ಸಿಡಿಲು ಬಡಿದಿದೆ. ಸುನೀಲ್ ಅವರು ಹೊಲದ ಕೆಲಸ ಮುಗಿಸಿಕೊಂಡು ಮನೆಯತ್ತ ಹೊರಟಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ವೃದ್ಧೆ ಮರಿಯಮ್ಮ, ಹಾನಗಲ್ ತಾಲ್ಲೂಕಿನ ಕೊಂಡೋಜಿ ಗ್ರಾಮದ ಮಾವಿನ ತೋಟದ ಮನೆಯಲ್ಲಿ ಕೆಲಸಕ್ಕಿದ್ದರು. ಅದೇ ಸ್ಥಳದಲ್ಲಿಯೇ ಅವರಿಗೆ ಸಿಡಿಲು ಬಡಿದಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಮೂವರ ಸಾವಿನ ಬಗ್ಗೆ ಪ್ರಕಟಣೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ‘ಮೂವರ ಕುಟುಂಬಕ್ಕೂ ತ್ವರಿತವಾಗಿ ಪರಿಹಾರ ಕೊಡಿಸಲಾಗುವುದು. ಮಳೆ ಸಂದರ್ಭದಲ್ಲಿ ಸಿಡಿಲಿನ ಮಾಹಿತಿ ನೀಡುವ ಆ್ಯಪ್‌ಗಳಿವೆ. ಅದನ್ನು ಜನರು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಸಿಡಿಲು ಬರುವ ಸಂದರ್ಭದಲ್ಲಿ ಎಚ್ಚರಿಕೆ ಬರುತ್ತಿದ್ದಂತೆ, ಸುರಕ್ಷಿತ ಸ್ಥಳಕ್ಕೆ ಹೋಗಬೇಕು’ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.