ಸಾವು (ಪ್ರಾತಿನಿಧಿಕ ಚಿತ್ರ)
ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಹಂಸಬಾವಿ ಬಳಿಯ ಚಿಕ್ಕನಜಿ ಕ್ರಾಸ್‌ನಲ್ಲಿರುವ (ತಿಳವಳ್ಳಿ ಕ್ರಾಸ್) ಕೆರೆಯಲ್ಲಿ ಬಿದ್ದು ಎರಡೂವರೆ ವರ್ಷದ ಬಾಲಕಿ ಪೂಜಾ ನಾಗಪ್ಪ ದುರಮುರಗಿ ಮೃತಪಟ್ಟಿದ್ದಾಳೆ.
ಬ್ಯಾಡಗಿ ತಾಲ್ಲೂಕಿನ ಹಿರಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಜಿ ಕ್ರಾಸ್‌ನಲ್ಲಿ ಬುಧವಾರ ಈ ಅವಘಡ ಸಂಭವಿಸಿದೆ. ಬಾಲಕಿಯ ಸಾವಿಗೆ ಸಂಬಂಧಪಟ್ಟಂತೆ ಕಾಗಿನೆಲೆ ಪೊಲೀಸರು, ಅಸಹಜ ಸಾವು (ಯುಡಿಆರ್) ಪ‍್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
‘ಕೆರೆಗೆ ಸಮೀಪದಲ್ಲಿರುವ ಜಾಗದಲ್ಲಿ ಅಲೆಮಾರಿ ಸಿಂಧೋಳು ಸಮುದಾಯದವರು, ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದಾರೆ. ಅವರಿಗೆ ಕನಿಷ್ಠ ಸೌಲಭ್ಯವೂ ಇಲ್ಲ. ಇದೇ ಸ್ಥಳಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಇತ್ತೀಚೆಗೆ ಭೇಟಿ ನೀಡಿದ್ದರು. ಸೌಲಭ್ಯ ಕಲ್ಪಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದರು. ಇದರ ನಡುವೆಯೇ ಈಗ ಬಾಲಕಿ ಮೃತಪಟ್ಟಿದ್ದಾಳೆ. ಇದಕ್ಕೆ ಅಧಿಕಾರಿಗಳೇ ಹೊಣೆ’ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.
‘ಬಾಲಕಿ ಪೂಜಾಳ ಪೋಷಕರು ಬುಧವಾರ ಕೆಲಸಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಪೂಜಾ ಗುಡಿಸಲಿನಲ್ಲಿ ಇದ್ದಳು. ಆಟವಾಡಲೆಂದು ಮನೆಯಿಂದ ಹೊರಗೆ ಬಂದಿದ್ದಳು. ಆಟವಾಡುತ್ತ, ಗುಡಿಸಲು ಸಮೀಪದಲ್ಲಿರುವ ಕೆರೆ ಬಳಿ ಹೋಗಿದ್ದಳು. ಅಲ್ಲಿಯೇ ಆಯತಪ್ಪಿ ಕೆರೆಗೆ ಬಿದ್ದಿದ್ದಳು. ನೀರಿನಲ್ಲಿ ಮುಳುಗಿದ್ದಳು. ಕೆಲ ನಿಮಿಷಗಳಲ್ಲಿ ಬಾಲಕಿಯನ್ನು ನೋಡಿದ್ದ ಕೆಲವರು, ಸಮೀಪದಲ್ಲಿದ್ದ ಹಂಸಬಾವಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಮಾರ್ಗಮಧ್ಯೆಯೇ ಬಾಲಕಿ ಮೃತಪಟ್ಟಿದ್ದಾಗಿ ಗೊತ್ತಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.