
ಹಾವೇರಿ: ‘ಮೋಟಾರು ವಾಹನಗಳ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ದಂಡ ಪಾವತಿಯಲ್ಲಿ ಶೇ 50ರಷ್ಟು ರಿಯಾಯಿತಿ ಘೋಷಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿರುವ ವಾಹನಗಳ ಮಾಲೀಕರು, ರಿಯಾಯಿತಿ ಸೌಲಭ್ಯದೊಂದಿಗೆ ದಂಡ ಪಾವತಿಸಬಹುದು’ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ (ಉತ್ತರ, ಧಾರವಾಡ) ಕೆ.ಟಿ. ಹಾಲಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘1991ರಿಂದ 2020ರವರೆಗಿನ ಅವಧಿಯಲ್ಲಿ ದಾಖಲಾಗಿರುವ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಯಲ್ಲಿ ಮಾತ್ರ ಶೇ 50ರಷ್ಟು ರಿಯಾಯಿತಿಯಿದೆ’ ಎಂದರು.
‘ಹಾವೇರಿ ಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿ 1991ರಿಂದ 2020ರವರೆಗಿನ ಅವಧಿಯಲ್ಲಿ ದಾಖಲಾದ 2104 ಪ್ರಕರಣಗಳಲ್ಲಿ ದಂಡ ಪಾವತಿ ಬಾಕಿಯಿದೆ. ಈ ಪ್ರಕರಣಗಳಲ್ಲಿ ವಾಹನಗಳ ಮಾಲೀಕರು, ದಂಡ ಪಾವತಿ ಮಾಡಬಹುದು. ರಾಣೆಬೆನ್ನೂರು ಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿಯೂ ಸುಮಾರು 1,500 ಪ್ರಕರಣಗಳಿವೆ’ ಎಂದರು.
‘ಸಾರಿಗೆ ಇಲಾಖೆಯ ಬೆಳಗಾವಿ ವಿಭಾಗದಲ್ಲಿ 11 ಸಾವಿರ ಪ್ರಕರಣ ಹಾಗೂ ಕಲಬುರಗಿ ವಿಭಾಗದಲ್ಲಿ 7,473 ಪ್ರಕರಣಗಳಿವೆ. ಎಲ್ಲ ಕಡೆಯೂ ಶೇ 50ರಷ್ಟು ರಿಯಾಯಿತಿ ಇರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಬಾಕಿ ದಂಡದ ಮೊತ್ತ ಪಾವತಿಸಲು ಡಿ. 12ರವರೆಗೆ ಕಾಲಾವಕಾಶ ನೀಡಲಾಗಿದೆ’ ಎಂದು ಹೇಳಿದರು.
ಬಸ್‌ಗಳ ಪರಿಶೀಲನೆಗೆ ತಂಡ: ‘ಕರ್ನೂಲು ಬಸ್ ದುರಂತ ಸಂಭವಿಸಿದ ನಂತರ, ಖಾಸಗಿ ಬಸ್‌ಗಳಲ್ಲಿರುವ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದೆ. ನಮ್ಮ ಉತ್ತರ ವಲಯ ವ್ಯಾಪ್ತಿಯಲ್ಲಿ ಬಸ್‌ಗಳ ಪರಿಶೀಲನೆಗಾಗಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ’ ಎಂದು ಹಾಲಸ್ವಾಮಿ ಹೇಳಿದರು.
‘ಖಾಸಗಿ ಬಸ್‌ಗಳಲ್ಲಿ ಕಾಯ್ದೆ ಅನ್ವಯ ಎಲ್ಲ ಸುರಕ್ಷತಾ ಕ್ರಮಗಳು ಇರಬೇಕು. ಕಿಟಕಿ, ಬಾಗಿಲು... ಹೀಗೆ ಎಲ್ಲವನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ನಿಯಮ ಮೀರಿದರೆ, ಅಂಥ ಬಸ್‌ಗಳನ್ನು ಜಪ್ತಿ ಮಾಡಲಾಗುತ್ತಿದೆ’ ಎಂದರು.
26 ಶಾಲಾ ಬಸ್‌ಗಳ ವಿರುದ್ಧ ಪ್ರಕರಣ: ‘ಹಾವೇರಿ ಆರ್‌ಟಿಒ ವ್ಯಾಪ್ತಿಯಲ್ಲಿ 170 ಶಾಲಾ ಬಸ್‌ಗಳಿವೆ. ನಿಯಮ ಉಲ್ಲಂಘಿಸಿದ ಆರೋಪದಡಿ ಈಗಾಗಲೇ 26 ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹಾಲಸ್ವಾಮಿ ಹೇಳಿದರು.
‘ಹೊರ ರಾಜ್ಯದಲ್ಲಿ ನೋಂದಣಿಯಾದ ವಾಹನಗಳು, ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಓಡಾಡುತ್ತಿವೆ. ಇಂಥ ವಾಹನಗಳನ್ನು ತಡೆದು ಪರಿಶೀಲನೆ ನಡೆಸಲಾಗುತ್ತಿದೆ. ಅಂಥ ವಾಹನಗಳಿಗೆ ದಂಡವನ್ನೂ ವಿಧಿಸಲಾಗುತ್ತಿದೆ’ ಎಂದರು.
‘ಜಿಲ್ಲೆಯಲ್ಲಿ ಶಾಲಾ ಮಕ್ಕಳ ಸುರಕ್ಷಿತ ಪ್ರಯಾಣಕ್ಕೆ ಒತ್ತು ನೀಡಲಾಗಿದೆ. ಮುಂಬರುವ ದಿನಗಳಲ್ಲಿಯೂ ಶಾಲೆಗಳ ಬಸ್‌ಗಳನ್ನು ನಿರಂತರವಾಗಿ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ’ ಎಂದರು.
ಆರ್‌ಟಿಒ ವಿನಯಾ ಕಟೋಕರ್, ಮೋಟಾರು ವಾಹನ ನಿರೀಕ್ಷಕ ಎಚ್. ಸುನೀಲಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.