ADVERTISEMENT

ಹಾನಗಲ್‌ಗೆ ರೈಲು ಮಾರ್ಗ: ಹೋರಾಟಕ್ಕೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 14:36 IST
Last Updated 24 ಸೆಪ್ಟೆಂಬರ್ 2024, 14:36 IST
ಸೋಮಶೇಖರ ಕೊತಂಬರಿ
ಸೋಮಶೇಖರ ಕೊತಂಬರಿ   

ಹಾನಗಲ್:  ಪ್ರಾಥಮಿಕ ಸಮೀಕ್ಷೆ ಪೂರ್ಣಗೊಂಡಿರುವ ನೂತನ ರೈಲ್ವೆ ಮಾರ್ಗದಲ್ಲಿ ಹಾನಗಲ್ ಸೇರ್ಪಡೆಗೆ ಒತ್ತಾಯಿಸಿ ಜನಾಂದೋಲನ ರೂಪಿಸುವ ಅಂಗವಾಗಿ ಸೆ. 26 ರಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಂಘಟನೆ ಸಭೆ ಆಯೋಜಿಸಲಾಗಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೊತಂಬರಿ ಹೇಳಿದರು.

167 ಕಿ.ಮೀ ಉದ್ದದ ತಾಳಗುಪ್ಪ–ಶಿರಸಿ–ಹುಬ್ಬಳ್ಳಿ ರೈಲು ಮಾರ್ಗದಲ್ಲಿ ಹಾನಗಲ್ ಸೇರ್ಪಡೆ ಸಾಧು ಎನ್ನಿಸಲಿದೆ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಅಭಿಪ್ರಾಯಪಟ್ಟರು.

ಸುಮಾರು 2.70 ಲಕ್ಷ ಜನಸಂಖ್ಯೆಯ ಹಾನಗಲ್ ತಾಲ್ಲೂಕಿನಲ್ಲಿ ಪ್ರೇಕ್ಷಣಿಕ ಧಾರ್ಮಿಕ ಸ್ಥಳಗಳಿವೆ. ಉತ್ಕೃಷ್ಟ ರುಚಿಯ ಮಾವಿನಹಣ್ಣು ಮತ್ತು ವಿವಿಧ ವಾಣಿಜ್ಯ ಬೆಳೆ ಇಲ್ಲಿವೆ. ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ ಮತ್ತು ವ್ಯಾಪಾರದ ಉದ್ದೇಶದಿಂದ ಹಾನಗಲ್ ರೈಲು ಮಾರ್ಗದಲ್ಲಿ ಒಳಗೊಳ್ಳಬೇಕು ಎಂದರು.

ADVERTISEMENT

ಹಾನಗಲ್ ಪಟ್ಟಣ ಸಮೀಪದ ಮುಂಡಗೋಡ ತಾಲ್ಲೂಕಿನ ಪಾಳಾ ಹಾಯ್ದು ನೂತನ ರೈಲ್ವೆ ಮಾರ್ಗ ರಚನೆಗೊಳ್ಳುತ್ತಿದೆ. ಹಾನಗಲ್ ಪಟ್ಟಣದಲ್ಲಿ ರೈಲು ನಿಲ್ದಾಣ ಸ್ಥಾಪಿಸುವ ಮೂಲಕ ಈ ಭಾಗದ ಬಹುದಿನಗಳ ಬೇಡಿಕೆಯನ್ನು ಈಡೇರಿಸುವುದು ಸಾಧ್ಯವಾಗಲಿದೆ ಎಂದರು.

‘ಈ ಬಗ್ಗೆ ಗಮನ ಸೆಳೆಯಲು ರೈಲ್ವೆ ಸಚಿವ ವಿ.ಸೋಮಣ್ಣ ಅವರನ್ನು ಹೋರಾಟ ಸಮಿತಿಯವರು ಸದ್ಯದಲ್ಲಿ ಭೇಟಿಯಾಗಲಿದ್ದೇವೆ. ರೈಲ್ವೆ ಮಾರ್ಗ ಹಾನಗಲ್ ಒಳಪಡುವ ಪ್ರಾಮುಖ್ಯತೆಯನ್ನು ತಿಳಿಸಲಾಗುತ್ತದೆ’ ಎಂದು ಕೊತಂಬರಿ ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಸವರಾಜ ಹಾದಿಮನಿ, ನಿಂಗಪ್ಪ ಪೂಜಾರ, ರೈತ ಸಂಘದ ಅಡಿವೆಪ್ಪ ಆಲದಕಟ್ಟಿ, ಸದಾಗೌಡ ಪಾಟೀಲ, ಉತ್ತರ ಕರ್ನಾಟಕ ಹೋರಾಟ ಸಮಿತಿಯ ರವಿಬಾಬು ಪೂಜಾರ, ಶ್ರೀಕಾಂತ ಹಾದಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.