ADVERTISEMENT

ತುಂಗಭದ್ರಾ ನದಿ ನೀರು ಕುಡಿಯಲು ಯೋಗ್ಯವಲ್ಲ: ಪ್ರಯೋಗಾಲಯದ ವರದಿ

ಧಾರವಾಡದ ಪ್ರಾದೇಶಿಕ ಪ್ರಯೋಗಾಲಯದ ವರದಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2023, 16:02 IST
Last Updated 28 ಜುಲೈ 2023, 16:02 IST
ತುಂಗಭದ್ರಾ ನದಿ ನೀರನ್ನು ಸಂಗ್ರಹಿಸುತ್ತಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ
ತುಂಗಭದ್ರಾ ನದಿ ನೀರನ್ನು ಸಂಗ್ರಹಿಸುತ್ತಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ   

ಗುತ್ತಲ (ಹಾವೇರಿ ಜಿಲ್ಲೆ): ‘ತುಂಗಭದ್ರಾ ನದಿ ನೀರು ಕುಡಿಯಲು ಯೋಗ್ಯವಲ್ಲ, ಈ ನೀರು ‘ಡಿ’ ಕ್ಲಾಸ್‌’ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

20 ದಿನಗಳ ಹಿಂದೆ ತುಂಗಭದ್ರಾ ನದಿಯ ನೀರಿನ ಮಾದರಿಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಂಗ್ರಹಿಸಿ ಧಾರವಾಡದ ಪ್ರಾದೇಶಿಕ ಪ್ರಯೋಗಾಲಯಕ್ಕೆ ಕಳಿಸಿದ್ದರು. ಶುಕ್ರವಾರ ವರದಿ ಬಂದಿದ್ದು, ಈ ನೀರು ಕುಡಿಯಲಿಕ್ಕೆ ಯೋಗ್ಯವಲ್ಲ (‘ಡಿ’ ಕ್ಲಾಸ್‌) ಎಂದು ವರದಿಯಲ್ಲಿ ತಿಳಿಸಲಾಗಿದೆ.

‘ಮೀನುಗಾರಿಕೆಗೆ ಬಳಸಬಹುದು, ಜಾನುವಾರು ಮತ್ತು ಕಾಡು ಪ್ರಾಣಿಗಳು ಮಾತ್ರ ಈ ನೀರು ಕುಡಿಯಬಹುದು. ನದಿ ದಡದಲ್ಲಿರುವ ಗ್ರಾಮಗಳ ಜನರು ನೀರನ್ನು ನೇರವಾಗಿ ಕುಡಿಯಬಾರದು. ಕಾಯಿಸಿ ಅಥವಾ ಶುದ್ಧೀಕರಿಸಿ ಕುಡಿಯಬಹುದು. ಪಟ್ಟಣ, ಸುತ್ತಮುತ್ತಲಿನ ಹಾಗೂ ತುಂಗಭದ್ರಾ ನದಿ ನೀರು ಬಳಸುವ ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ನದಿ ನೀರನ್ನು ಶುದ್ಧೀಕರಿಸಿಯೇ ಕೊಡಬೇಕು’ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಎಂ.ಕೆ. ಸುಧಾ ತಿಳಿಸಿದ್ದಾರೆ.

ADVERTISEMENT

ಹಾವೇರಿ ತಾಲ್ಲೂಕಿನ ಪೂರ್ವ ಭಾಗದ 20ಕ್ಕೂ ಹೆಚ್ಚು ಗ್ರಾಮಗಳು ತುಂಗಭದ್ರಾ ನದಿ ನೀರನ್ನೇ ಕುಡಿಯಲು ಬಳಸುತ್ತಾರೆ. ಕ್ರಿಮಿನಾಶಕ ಸೇರಿದಂತೆ ಕಾರ್ಖಾನೆಗಳ ತ್ಯಾಜ್ಯ, ಭತ್ತ, ಕಬ್ಬಿಗೆ ಹಾಕಿದ ರಾಸಾಯನಿಕ ಗೊಬ್ಬರದ ದುರ್ವಾಸನೆಯನ್ನು ನದಿ ನೀರು ಬೀರುತ್ತಿತ್ತು. ಈ ಬಗ್ಗೆ ಸ್ಥಳೀಯರು ದೂರಿದ್ದರು. ‘ಪ್ರಜಾವಾಣಿ’ಯಲ್ಲಿ ಜುಲೈ 5ರಂದು ವರದಿ ಪ್ರಕಟವಾಗಿತ್ತು. ಬಳಿಕ ತುಂಗಭದ್ರಾ ನದಿ ನೀರನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಂಗ್ರಹಿಸಿ ಧಾರವಾಡದ ಪ್ರಾದೇಶಿಕ ಪ್ರಯೋಗಾಲಯಕ್ಕೆ ಪರಿಶೀಲನೆಗೆ ಕಳುಹಿಸಿಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.