ರಾಣೆಬೆನ್ನೂರು: ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಕಾವೇರಿ–2 ತಂತ್ರಾಂಶದ ಮೂಲಕ ಅನಧಿಕೃತ ವ್ಯಕ್ತಿಗಳು ಸಹ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸುತ್ತಿರುವುದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಜಿಲ್ಲಾ ಮತ್ತು ತಾಲ್ಲೂಕು ಪತ್ರ ಬರಹಗಾರರು ಉಪ ನೋಂದಣಾಧಿಕಾರಿ ವಿಶ್ವನಾಥ ಸುಭೇದಾರ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.
ಹಾವೇರಿ ಜಿಲ್ಲಾ ದಸ್ತಾವೇಜು ಬರಹಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಮಾತನಾಡಿ, ‘ಹೊಸ ತಂತ್ರಾಂಶ ಮೂಲಕ ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿನ ಸೈಬರ್ ಹಾಗೂ ಡಿಟಿಪಿ ಕೇಂದ್ರಗಳಲ್ಲಿಯೇ ದಾಸ್ತಾವೇಜು ನೋಂದಣಿ ಮಾಡಿಸಲಾಗುತ್ತಿದೆ. ಪತ್ರ ಬರಹಗಾರ ಪರವಾನಗಿ ಹೊಂದಿರದವರೂ ಈ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.
‘ಕರ್ನಾಟಕ ನೋಂದಣಿ ನಿಯಮಗಳನ್ವಯ ಅಧಿಕೃತ ಪರವಾನಗಿ ಪಡೆಯದೆಯೂ, ನೋಂದಣಿಗೆ ಸಂಬಂಧಿಸಿದ ಪತ್ರಗಳನ್ನು ತಯಾರಿಸುತ್ತಿರುವುದು ಅಕ್ರಮ ಚಟುವಟಿಕೆಯಾಗಿದೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಇಂತಹವರೇ ಖುದ್ದು ಹಾಜರಾಗಿ ನೋಂದಾಣಿ ಮಾಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಅಧಿಕೃತ ಪರವಾನಗಿ ಪಡೆದಿರುವ ನಾವು, ಪ್ರತಿ ವರ್ಷ ಸರ್ಕಾರಕ್ಕೆ ಶುಲ್ಕ ಪಾವತಿಸಿ ಪರವಾನಗಿ ನವೀಕರಣ ಮಾಡಿಕೊಳ್ಳುತ್ತೇವೆ. ಸರ್ಕಾರ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ನೀಡುವ ನಿರ್ದೇಶನ ಪಾಲಿಸುತ್ತ, ಕಾನೂನುಬದ್ಧವಾಗಿ ಸಾರ್ವಜನಿಕರ ದಸ್ತಾವೇಜು ಬರೆಯುತ್ತೇವೆ. ಆದರೆ. ನಮಗೆ ಅನ್ಯಾಯವಾಗುತ್ತಿದೆ’ ಎಂದು ಹೇಳಿದರು.
ರಮೇಶ ಕುಲಕರ್ಣಿ, ಮೋಹನ ಗಾಜಿಪುರ, ಶಿವಪುತ್ರಪ್ಪ ಸಂಪಗಾವಿ, ಶಿವಣ್ಣ ಮೊಟೆಬೆನ್ನೂರ, ವಾದಿರಾಜ ಉಡುಪಿ, ಗದಿಗೆಪ್ಪ ಕಮ್ಮಾರ, ರಾಮಣ್ಣ ಮುದ್ರಿ, ವೆಂಕಣ್ಣ ಪಾಟೀಲ, ಶಿವಾನಂದ ಕುಲಕರ್ಣಿ, ಬಸವರಾಜ ಹಡಗಲಿ, ಪ್ರದೀಪ ಕುಲಕರ್ಣಿ, ವಿನಾಯಕ ಲಕ್ಷ್ನೇಶ್ವರ, ಅಬ್ದುಲ್ ರಷೀದ್ ಅತ್ತಾರ ಇದ್ದರು.
‘ನೋಂದಣಿ ಕಾಯ್ದೆ ಉಲ್ಲಂಘನೆ’ ‘ದಸ್ತಾವೇಜುಗಳನ್ನು ಕಾನೂನಾತ್ಮಕವಾಗಿ ಜಾರಿಗೊಳಿಸುವುದು ಪಕ್ಷಗಾರರ ಹಕ್ಕುಗಳ ರಕ್ಷಣೆಯಲ್ಲೂ ನಾವು ಮುಖ್ಯ ಪಾತ್ರ ವಹಿಸುತ್ತಿದ್ದೇವೆ. ದಸ್ತಾವೇಜು ಬರೆಯುವುದು ಅತ್ಯಂತ ಜವಾಬ್ದಾರಿಯುತ ಕೆಲಸವಾಗಿದೆ. ಡಿಟಿಪಿ ಕೇಂದ್ರಗಳಲ್ಲಿ ಅನಧಿಕೃತವಾಗಿ ದಸ್ತಾವೇಜು ತಯಾರಿಸುತ್ತಿರುವುದು ನೋಂದಣಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಇದನ್ನೆಲ್ಲ ಪರಿಗಣಿಸಿ ಶೀಘ್ರವೇ ಕ್ರಮ ಕೈಗೊಳ್ಳಬೇಕು’ ಎಂದು ಬಸವರಾಜ ಲಕ್ಷ್ಮೇಶ್ವರ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.