ರಾಣೆಬೆನ್ನೂರು: ಯೂರಿಯಾ ಗೊಬ್ಬರ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ರೈತರು ಮತ್ತು ವಿತರಕರ ಮಧ್ಯೆ ಗಲಾಟೆ ಉಂಟಾ ಕಾರಣ ಕೃಷಿ ಅಧಿಕಾರಿಗಳು ಶುಕ್ರವಾರ ತಾತ್ಕಾಲಿಕವಾಗಿ ಗೊಬ್ಬರ ವಿತರಣೆಯನ್ನು ಸ್ಥಗಿತಗೊಳಿಸಿದ ಘಟನೆ ತಾಲ್ಲೂಕಿನ ಹರನಗಿರಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ.
ಗೊಬ್ಬರಕ್ಕಾಗಿ ಬೆಳಿಗ್ಗೆಯಿಂದಲೇ ರೈತರು ಸರದಿಯಲ್ಲಿ ನಿಂತಿದ್ದರು. ಗೊಬ್ಬರ ಕೊರತೆಯ ಕಾರಣ ಒಬ್ಬರಿಗೆ ಒಂದು ಬ್ಯಾಗ್ ಯೂರಿಯಾ ವಿತರಣೆ ಎಂದ ಕೂಡಲೇ ನೂಕು ನುಗ್ಗಲು ಆರಂಭವಾಯಿತು. ರೈತರು ಮತ್ತು ವಿತರಕರ ನಡುವೆ ಕೆಲ ಕಾಲ ಮಾತಿನ ಚಕಮಿಕಿ ನಡೆಯಿತು.
ತಾಲ್ಲೂಕಿನಾದ್ಯಂತ ಎರಡು ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮುಂಗಾರು ಬಿತ್ತನೆ ಮಾಡಿದ ಬೆಳೆಗಳಿಗೆ ಮೇಲು ಗೊಬ್ಬರವಾಗಿ ಕೊಡಲು ಯೂರಿಯಾ ಅವಶ್ಯಕತೆ ಹೆಚ್ಚಾಗಿದೆ. ಸರ್ಕಾರ ಹೆಚ್ಚಿನ ಗೊಬ್ಬರ ಪೂರೈಕೆ ಮಾಡಬೇಕೆಂದು ರೈತರು ಒತ್ತಾಯಿಸಿದರು. ಕೆಲ ರೈತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಸೊಸೈಟಿಯ ಹೊರಗೆ ರೈತರು ಸರದಿಯಲ್ಲಿ ನಿಂತಾಗ ಮಳೆ ಬಂದ ಕಾರಣ ಕೆಲ ರೈತರು ಸೊಸೈಟಿಯ ಒಳಗೆ ಪ್ರವೇಶ ಮಾಡಿದರು. ಆಗ ರೈತರು ಮತ್ತು ವಿತರಕರ ನಡುವೆ ವಾಗ್ವಾದ ನಡೆಯಿತು. ಹಡಗಲಿ ತಾಲ್ಲೂಕಿನ ರೈತರು ಸೇರಿದಂತೆ ಯತ್ತಿನಹಳ್ಳಿ, ಚಿಕ್ಕಕುರುವತ್ತಿ, ಕುದರಿಹಾಳ, ಹರನಗಿರಿ ಸುತ್ತಮುತ್ತಲಿನ ಗ್ರಾಮಗಳಿಂದ ರೈತರು ಗೊಬ್ಬರ ಪಡೆಯಲು ಆಗಮಿಸಿದ್ದರು. ರೈತರು ಸೊಸೈಟಿ ಒಳಗಡೆ ನುಗ್ಗಿದ ತಕ್ಷಣ ಪೊಲೀಸರು ಮಧ್ಯೆ ಪ್ರವೇಶಿಸಿ ಗದ್ದಲ ತಿಳಿಗೊಳಿಸಿದರು.
ಘಟನಾ ಸ್ಥಳಕ್ಕೆ ಆಗಮಿಸಿದ ಸಹಾಯಕ ಕೃಷಿ ಅಧಿಕಾರಿ ಶಾಂತಮಣಿ ಜಿ. ಪರಿಶೀಲಿಸಿದಾಗ 15 ಟನ್ ಯೂರಿಯಾ ಗೊಬ್ಬರ ಇತ್ತು. ಗಲಾಟೆ ನಡೆದ ಕಾರಣ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಕ್ಕೆ ಆದೇಶಿಸಿದರು. ‘ಈಗ 15 ಟನ್ ಯೂರಿಯಾ ಇದೆ. ರಾತ್ರಿ 15 ಟನ್ ಯೂರಿಯಾ ಬರಲಿದೆ. ಒಟ್ಟು 30 ಟನ್ ಯೂರಿಯಾ ಗೊಬ್ಬರ ದಾಸ್ತಾನು ಇದ್ದು ಶನಿವಾರ ಪೊಲೀಸರ ಸಹಾಯ ಪಡೆದ ಗೊಬ್ಬರ ವಿತರಣೆ ಮಾಡಲಾಗುವುದು. ಎಲ್ಲ ರೈತರಿಗೆ ಗೊಬ್ಬರ ಸಿಗಲಿದೆ. ರೈತರು ಸಹಕರಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.