ADVERTISEMENT

ಹಾವೇರಿ | ನದಿ ಹರಿವು ಹೆಚ್ಚಳ: ಮೂರು ಸೇತುವೆ ಮುಳುಗಡೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 3:00 IST
Last Updated 10 ಜುಲೈ 2025, 3:00 IST
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಲಕಮಾಪೂರ ಹಾಗೂ ಬಾಳಂಬೀಡ ಗ್ರಾಮದ ನಡುವಿನ ವರದಾ ನದಿ ಸೇತುವೆ ಮುಳುಗಡೆಯಾಗಿರುವುದು
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಲಕಮಾಪೂರ ಹಾಗೂ ಬಾಳಂಬೀಡ ಗ್ರಾಮದ ನಡುವಿನ ವರದಾ ನದಿ ಸೇತುವೆ ಮುಳುಗಡೆಯಾಗಿರುವುದು   

ಹಾವೇರಿ: ಜಿಲ್ಲೆಯಲ್ಲಿ ಹರಿಯುವ ವರದಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರಿನ ಮಟ್ಟ ಕ್ರಮೇಣ ಹೆಚ್ಚಳವಾಗುತ್ತಿದ್ದು, ಈಗಾಗಲೇ ಮೂರು ಸೇತುವೆಗಳು ಮುಳುಗಡೆಯಾಗಿವೆ. ಇದರಿಂದಾಗಿ ಆರು ಗ್ರಾಮಗಳ ಜನರು, ತಮ್ಮ ನಿತ್ಯದ ಕೆಲಸಕ್ಕಾಗಿ ಪರ್ಯಾಯ ರಸ್ತೆಗಳ ಮೂಲಕ ಸಂಚರಿಸುತ್ತಿದ್ದಾರೆ.

ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಅದೇ ನೀರು ವರದಾ ಹಾಗೂ ತುಂಗಭದ್ರಾ ನದಿಗಳ ಮೂಲಕ ಹಾವೇರಿಗೆ ಬರುತ್ತಿದೆ. ಹಾವೇರಿ ಜಿಲ್ಲೆಯಲ್ಲಿಯೂ ಕೆಲದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಇಲ್ಲಿ ಸಂಗ್ರಹವಾದ ನೀರು ಸಹ ನದಿಗಳಿಗೆ ಸೇರುತ್ತಿದೆ.

ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ನದಿ ನೀರಿನ ಮಟ್ಟವೂ ಹೆಚ್ಚಳವಾಗುತ್ತಿವೆ. ಇದರಿಂದಾಗಿ ಮೂರು ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರ ಸಂಪರ್ಕ ಕಡಿತಗೊಂಡಿದೆ. ನದಿ ಸುತ್ತಮುತ್ತಲಿನ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ.

ADVERTISEMENT

ಹಾವೇರಿ ತಾಲ್ಲೂಕಿನ ನಾಗನೂರು ಹಾಗೂ ಕೂಡಲ ಗ್ರಾಮದ ನಡುವಿರುವ ವರದಾ ನದಿಯ ಕಿರು ಸೇತುವೆ ಮುಳುಗಡೆಯಾಗಿದ್ದು, ಎರಡೂ ಗ್ರಾಮಗಳ ಜನರು ಪರ್ಯಾಯ ಮಾರ್ಗವನ್ನು ಬಳಸುತ್ತಿದ್ದಾರೆ.

ಸವಣೂರು ತಾಲ್ಲೂಕಿನ ಕಳಸೂರು ಗ್ರಾಮದಿಂದ ಕೋಳೂರು ಮೂಲಕ ದೇವಗಿರಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿರುವ ವರದಾ ನದಿಯ ಸೇತುವೆ ಸಹ ಮುಳುಗಡೆಯಾಗಿ ಹಲವು ದಿನಗಳಾಗಿವೆ. ಈ ಕಿರು ಸೇತುವೆ ಮೂಲಕ ಕೆಲ ನಿಮಿಷಗಳಲ್ಲಿ ಹಾವೇರಿ ತಲುಪುತ್ತಿದ್ದ ಗ್ರಾಮಸ್ಥರು, ಈಗ ಪರ್ಯಾಯ ಮಾರ್ಗದಲ್ಲಿ ಗಂಟೆಗಟ್ಟಲೇ ಪ್ರಯಾಣ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹಾನಗಲ್ ತಾಲ್ಲೂಕಿನ ಲಕಮಾಪುರ ಗ್ರಾಮದಿಂದ ಬಾಳಂಬೀಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿರುವ ವರದಾ ನದಿ ಸಹ ತುಂಬಿ ಹರಿಯುತ್ತಿದೆ. ಈ ನದಿಯಲ್ಲಿ ನಿರ್ಮಿಸಿದ್ದ ಕಿರುಸೇತುವೆ ಸಹ ಮುಳುಗಡೆಯಾಗಿದ್ದು, ಸ್ಥಳೀಯರು ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ.

2024ರಲ್ಲಿ ಪಶ್ಚಿಮ ಘಟ್ಟಗಳಲ್ಲಿ ವಿಪರೀತ ಮಳೆಯಾಗಿದ್ದರಿಂದ, ವರದಾ ಹಾಗೂ ತುಂಗಭದ್ರಾ ಎರಡೂ ನದಿಗಳು ತುಂಬಿ ಹರಿದಿದ್ದವು. ನದಿ ನೀರಲಗಿ, ಸವೂರು, ಚಿಕ್ಕ ಲಿಂಗದಹಳ್ಳಿ, ಕೋಣನತಂಬಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾಗಶಃ ನೀರು ನುಗ್ಗಿತ್ತು. ಬಂಕಾಪುರ ಬಳಿಯ ಸವೂರು ಸೇರಿದಂತೆ ಹಲವು ಗ್ರಾಮಗಳ ಜನರನ್ನು ಕಾಳಜಿ ಕೇಂದ್ರದಲ್ಲಿ ಇರಿಸಲಾಗಿತ್ತು. ಈ ವರ್ಷವೂ ಇದೇ ಪರಿಸ್ಥಿತಿ ಎದುರಾಗುವ ಮುನ್ಸೂಚನೆ ಇರುವುದಾಗಿ ನದಿ ತೀರದ ಗ್ರಾಮಗಳ ಜನರು ಹೇಳುತ್ತಿದ್ದಾರೆ.

24 ಗಂಟೆಯಲ್ಲಿ 0.77 ಸೆ.ಮೀ. ಮಳೆ: ಹಾವೇರಿ ಜಿಲ್ಲೆಯಾದ್ಯಂತ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಜುಲೈ 8ರ ಬೆಳಿಗ್ಗೆ 8.30 ಗಂಟೆಯಿಂದ ಜುಲೈ 9ರ ಬೆಳಿಗ್ಗೆ 8.30 ಗಂಟೆಯವರೆಗೆ 0.66 ಸೆಂ.ಮೀ. ವಾಡಿಕೆ ಮಳೆಯಿತ್ತು. ಆದರೆ, 0.77 ಸೆಂ.ಮೀ. ಮಳೆಯಾಗಿದೆ. ಶೇ 16.67ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವುದು ಮಾಪಕದಲ್ಲಿ ದಾಖಲಾಗಿದೆ.

ವಾಡಿಕೆಗಿಂತ ಶೇ 19.20ರಷ್ಟು ಮಳೆ ಕಡಿಮೆ: ಜಿಲ್ಲೆಯಲ್ಲಿ ಜುಲೈ 1ರಿಂದ 9ರವರೆಗಿನ ಮಳೆ ಸುರಿದ ಪ್ರಮಾಣ ಗಮನಿಸಿದರೆ, ವಾಡಿಕೆಗಿಂದ ಶೇ 19.20ರಷ್ಟು ಕಡಿಮೆ ಮಳೆಯಾಗಿದೆ.

‘ಜಿಲ್ಲೆಯಲ್ಲಿ 4.74 ಸೆಂ.ಮೀ. ಮಳೆಯಾಗಬೇಕಿತ್ತು. ಆದರೆ, ಕೇವಲ 3.83 ಸೆಂ.ಮೀ. ಮಳೆಯಾಗಿದೆ. ಶೇ 19.20ರಷ್ಟು ಮಳೆ ಕುಸಿತ ಕಂಡಿದೆ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯ ನಿರೀಕ್ಷೆಯಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಬ್ಯಾಡಗಿ, ರಾಣೆಬೆನ್ನೂರು, ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಹಾನಗಲ್, ಹಾವೇರಿ, ಹಿರೇಕೆರೂರು, ಸವಣೂರು ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ’ ಎಂದು ಹೇಳಿವೆ.

55 ಮನೆಗೆ ಹಾನಿ, 19 ಅಂಗೀಕೃತ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಹಾಗೂ ಆಗಾಗ ಬೀಸುವ ಗಾಳಿಯಿಂದಾಗಿ 55 ಮನೆಗಳಿಗೆ ಹಾನಿಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ್ದ ಜಿಲ್ಲಾಡತಳಿ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳು, 19 ಮನೆಗಳನ್ನು ಅಂಗೀಕರಿಸಿದ್ದಾರೆ. 22 ಮನೆಗಳ ಅರ್ಜಿಗಳನ್ನು ವಿವಿಧ ಕಾರಣಗಳಿಗಾಗಿ ತಿರಸ್ಕರಿಸಿದ್ದಾರೆ. 14 ಮನೆಗಳ ಅರ್ಜಿಗಳ ಪರಿಶೀಲನೆ ಬಾಕಿಯಿದೆ.

ಶಾಲೆ, ಅಂಗನವಾಡಿಯ 5 ಕಟ್ಟಡಕ್ಕೆ ಹಾನಿ: ಜಿಲ್ಲೆಯಲ್ಲಿರುವ ಶಾಲೆ ಹಾಗೂ ಅಂಗನವಾಡಿಗೆ ಸಂಬಂಧಪಟ್ಟಂತೆ 5 ಕಟ್ಟಡಗಳಿಗೆ ಹಾನಿಯಾಗಿದೆ. 2043 ವಿದ್ಯುತ್ ಕಂಬಗಳು, 24 ಟ್ರಾನ್ಸ್‌ಫಾರ್ಮರ್‌ಗಳು, 2 ವಿದ್ಯುತ್ ಹೈಟೆನ್ಶನ್ ಟವರ್‌ಗಳು, 4.39 ಕಿ.ಮೀ. ವಿದ್ಯುತ್ ತಂತಿ ಸೇರಿ ₹ 299.55 ಲಕ್ಷದಷ್ಟು ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ.

148.57 ಹೆಕ್ಟೇರ್ ಬೆಳೆ ಹಾನಿ
‘ಹಾವೇರಿ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯಿಂದಾಗಿ 148.57 ಹೆಕ್ಟೇರ್‌ ಪ್ರದೇಶದಲ್ಲಿದ್ದ ಬೆಳೆ ಹಾನಿಯಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯಕುಮಾರ ದಾನಮ್ಮನವರ ತಿಳಿಸಿದ್ದಾರೆ. ಬೆಳೆ ಹಾನಿ ಬಗ್ಗೆ ಮಾಹಿತಿ ನೀಡಿರುವ ಅವರು ‘ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆಯಿಂದ ವರದಿ ಸಿದ್ಧಪಡಿಸಲಾಗಿದೆ. 102.80 ಹೆಕ್ಟೇರ್‌ ಪ್ರದೇಶದಲ್ಲಿದ್ದ ಕೃಷಿ ಬೆಳೆ ಹಾಗೂ 45.47 ಹೆಕ್ಟೇರ್‌ ಪ್ರದೇಶದಲ್ಲಿದ್ದ ತೋಟಗಾರಿಕೆ ಬೆಳೆ ಹಾನಿಯಾಗಿದೆ’ ಎಂದಿದ್ದಾರೆ. ‘ಬೆಳೆ ಪರಿಹಾರ ತಂತ್ರಾಂಶದಲ್ಲಿ 121.17 ಹೆಕ್ಟೇರ್‌ ಪ್ರದೇಶದ ಹಾನಿಗೆ ಸಂಬಂಧಪಟ್ಟ ಮಾಹಿತಿ ದಾಖಲಿಸಲಾಗಿದೆ. ಉಳಿದ 27.40 ಹೆಕ್ಟೇರ್ ಪ್ರದೇಶದ ಹಾನಿ ಮಾಹಿತಿಯನ್ನು ಕೆಲ ಕಾರಣಗಳಿಂದಾಗಿ ನಮೂದಿಸಲು ಸಾಧ್ಯವಾಗಿಲ್ಲ. ಪರಿಹಾರ ವಿತರಣೆಯೂ ಬಾಕಿಯಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.