ಹಾವೇರಿ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಕ್ಷದ ಪ್ರಮುಖರ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಮಾತನಾಡಿದರು
ಹಾವೇರಿ: ‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ರೂಪಿಸಿದ್ದ ನದಿ ಜೋಡಣೆಗಳ ಯೋಜನೆ ವ್ಯಾಪ್ತಿಯಲ್ಲಿ ವರದಾ–ಬೇಡ್ತಿ ಹಾಗೂ ವರದಾ–ಧರ್ಮಾ–ಬೇಡ್ತಿ ನದಿ ಜೋಡಣೆ ಯೋಜನೆಗಳನ್ನು ಸೇರಿಸಿಕಕೊಳ್ಳಲಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾವೇರಿಯಲ್ಲಿ ಆಗಸ್ಟ್ 10ರಂದು ಸರ್ವಪಕ್ಷ ಹಾಗೂ ಸರ್ವ ಜನರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡೂ ನದಿ ಜೋಡಿಸಬೇಕೆಂಬುದು ಹಾವೇರಿ ಹಾಗೂ ಗದಗ ಜಿಲ್ಲೆಯ ಜನರ ಕನಸಾಗಿದೆ. ಈ ಯೋಜನೆ ಜಾರಿಯಾದೆ, ಕುಡಿಯುವ ನೀರು ಹಾಗೂ ಕೃಷಿಗೆ ನೀರಾವರಿ ಸೌಲಭ್ಯವಾಗಲಿದೆ’ ಎಂದರು.
‘ನದಿಗಳ ಜೋಡಣೆಗೆ 1995ರಲ್ಲಿ ಪ್ರಸ್ತಾಪವಿತ್ತು. 2008–09ರಲ್ಲಿ ಯೋಜನೆ ಜಾರಿಗೆ ಪ್ರಕ್ರಿಯೆ ಆರಂಭಿಸಿದಾಗ, ಪರಿಸರಕ್ಕೆ ಧಕ್ಕೆಯಾಗುವುದಾಗಿ ವಿರೋಧ ಬಂದಿತ್ತು. ನಾನು ಮುಖ್ಯಮಂತ್ರಿ ಆದಾಗ, ಪರಿಸರಕ್ಕೆ ಸಣ್ಣದೊಂದು ಧಕ್ಕೆಯಾಗದಂತೆ ಯೋಜನೆ ಅನುಷ್ಠಾನಗೊಳಿಸುವಂತೆ ಮಾರ್ಪಾಡು ಮಾಡಿದೆ. ಇದೇ ಮಾರ್ಪಾಡು ಆಧರಿಸಿ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯು (ಎನ್‌ಡಬ್ಲ್ಯುಡಿಎ) ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿ ಬಗ್ಗೆ ಚರ್ಚಿಸಲು ಜಲ ಸಂಪನ್ಮೂಲ ಸಚಿವರ ಸಮಯ ಕೇಳಿದ್ದು, ಅವಕಾಶ ಸಿಕ್ಕ ಕೂಡಲೇ ಅವರನ್ನು ಭೇಟಿಯಾಗಿ ಚರ್ಚಿಸುವೆ’ ಎಂದರು.
‘ವರದಾ–ಬೇಡ್ತಿ ನದಿ ಮಾತ್ರವಲ್ಲದೇ, ವರದಾ–ಧರ್ಮಾ–ಬೇಡ್ತಿ ನದಿಗಳ ಜೋಡಣೆಯನ್ನೂ ಕೈಗೆತ್ತಿಕೊಳ್ಳಲು ಅವಕಾಶವಿದೆ. ವರದಾ–ಬೇಡ್ತಿ ನದಿ ಜೋಡಣೆಯಿಂದ 10.6 ಟಿಎಂಸಿ ನೀರು ಹಾಗೂ ವರದಾ–ಧರ್ಮಾ–ಬೇಡ್ತಿ ನದಿ ಜೋಡಣೆಯಿಂದ 7.84 ಟಿಎಂಸಿ ನೀರು ಸಿಗುತ್ತದೆ. ಆದರೆ, ಇಷ್ಟು ಪ್ರಮಾಣದ ನೀರನ್ನು ಎಲ್ಲಿ ಸಂಗ್ರಹಿಸಬೇಕೆಂಬ ಪ್ರಶ್ನೆ ಬರುತ್ತದೆ. ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿಕೊಂಡಿದ್ದು, ಅಲ್ಲಿ ಸಾಧ್ಯವಿಲ್ಲವೆಂದು ಎನ್‌ಡಬ್ಲ್ಯುಡಿಎ ತಿಳಿಸಿದರ. ಅದರ ಬದಲು, ಶಿರಹಟ್ಟಿ ತಾಲ್ಲೂಕಿನ ಹಿರೇವಡ್ಡಟ್ಟಿ ನೀರು ಸಂಗ್ರಹಿಸಬಹುದೆಂದು ಅಭಿಪ್ರಾಯಪಟ್ಟಿದೆ’ ಎಂದು ಹೇಳಿದರು.
‘ಎನ್‌ಡಬ್ಲ್ಯುಡಿಎ ಅವರ ವರದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುತ್ತಿದ್ದಂತೆ, ರಾಜ್ಯ ಸರ್ಕಾರದಿಂದ ಡಿಪಿಆರ್ ಸಲ್ಲಿಸಬೇಕಾಗುತ್ತದೆ. ಅದಾದ ಬಳಿಕವೇ ಯೋಜನೆ ಜಾರಿಯ ಪ್ರಕ್ರಿಯೆಗಳು ನಡೆಯಲಿವೆ. ಈ ಯೋಜನೆಗಳ ಜಾರಿಗೆ ಸರ್ವಪಕ್ಷದವರು ಹಾಗೂ ಜನರ ಸಹಕಾರ ಅಗತ್ಯವಿದೆ. ಇದೇ ಕಾರಣಕ್ಕೆ ಹಾವೇರಿಯಲ್ಲಿ ಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ. ಗದಗನಲ್ಲೂ ಸಭೆ ಮಾಡಲಾಗುವುದು’ ಎಂದು ತಿಳಿಸಿದರು.
ಕುಡಿಯುವ ನೀರಿಗೆ ಅನುಕೂಲ: ‘ಹಾವೇರಿ, ಗದಗ, ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು ಹಾಗೂ ಇತರೆಡೆ ಕುಡಿಯುವ ನೀರಿನ ಸಮಸ್ಯೆಯಿದೆ. ಈ ಎರಡೂ ಯೋಜನೆಗಳು ಜಾರಿಯಾದರೆ, ಕುಡಿಯಲು ನೀರು ಸಿಗಲಿದೆ’ ಎಂದು ಬೊಮ್ಮಾಯಿ ಹೇಳಿದರು.
‘ಜಿಲ್ಲೆಯ ರೈತರಿಗೆ ₹ 32.67 ಕೋಟಿ’:
‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ಹಾವೇರಿ ಜಿಲ್ಲೆಯ 1.56 ಲಕ್ಷ ರೈತರಿಗೆ ₹ 32.67 ಕೋಟಿ ಹಣ 20ನೇ ಕಂತಿನ ರೂಪದಲ್ಲಿ ಬಿಡುಗಡೆಯಾಗಿದೆ’ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. ‘ಗದಗ ಜಿಲ್ಲೆಯ 1.7 ಲಕ್ಷ ರೈತರಿಗೆ ₹ 22.74 ಕೋಟಿ ಬಂದಿದೆ. ರಾಜ್ಯದ 13 ಲಕ್ಷ ರೈತರಿಗೆ ₹ 880 ಕೋಟಿ ಬಂದಿದೆ. ಎಲ್ಲ ಹಣ ರೈತರ ಖಾತೆಗೆ ನೇರವಾಗಿ ಜಮೆ ಆಗಿದೆ. ಈ ವಿಷಯ ರೈತರಿಗೆ ಮೊಬೈಲ್ ಸಂದೇಶದ ಮೂಲಕ ಗೊತ್ತಾಗುತ್ತದೆ. ಆದರೆ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಾಗಬೇಕು’ ಎಂದು ಹೇಳಿದರು.
'ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ’:
'ರಾಜ್ಯದಲ್ಲಿ ಜನರ ಪಾಲಿಗೆ ಕಾಂಗ್ರೆಸ್ ಸರ್ಕಾರ ಸತ್ತಿದೆ. ಈ ಸರ್ಕಾರದ ದುರಾಡಳಿತ ನೋಡಿದರೆ ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಕಾಗಿನೆಲೆ ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಗಂಗಮ್ಮ ಎಸ್. ಬೊಮ್ಮಾಯಿ ಟ್ರಸ್ಟ್ ಸಮಾರಂಭದ ಪೂರ್ವ ಸಿದ್ಧತಾ ಸಭೆ ಹಾಗೂ ಪಕ್ಷದ ಪ್ರಮುಖರ ಸಭೆ’ಯಲ್ಲಿ ಅವರು ಮಾತನಾಡಿದರು. ‘ಹಾವೇರಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಕಟ್ಟಬೇಕೆಂಬ ತೀರ್ಮಾನ ಮಾಡಿದ್ದೇವೆ. ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಭ್ರಷ್ಟಾಚಾರ ಮಿತಿಮೀರಿದೆ. ಇಂತಹ ಸಂದರ್ಭದಲ್ಲಿ ಜನರ ಪರವಾಗಿ ಹೋರಾಟ ಮಾಡಿದರೆ ಜನರು ನಮ್ಮ ಜೊತೆಗೆ ನಿಲ್ಲುತ್ತಾರೆ. ಜನರು ಕೇವಲ ಆಡಳಿತ ಪಕ್ಷವನ್ನಷ್ಟೇ ಅಲ್ಲ ವಿರೋಧ ಪಕ್ಷವನ್ನು ಪ್ರಶ್ನಿಸುತ್ತಾರೆ. ಹೀಗಾಗಿ ನಾವು ಸಂಘಟಿತರಾಗಿ ಕೆಲಸ ಮಾಡಬೇಕು’ ಎಂದರು. ‘ರೈತರಿಗೆ ಬೀಜ ಗೊಬ್ಬರ ಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಎರಡು ವರ್ಷದಿಂದ ಬೆಳೆ ನಾಶವಾದರೂ ರೈತರಿಗೆ ಪರಿಹಾರ ನೀಡಿಲ್ಲ’ ಎಂದು ಆಕ್ರೋಶ ಹೊರಹಾಕಿದರು.ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮುಖಂಡ ಅರುಣಕುಮಾರ ಪೂಜಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.