
ಹಾವೇರಿ: ‘ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆಯನ್ನು ಬದಲಾವಣೆ ಮಾಡಿ, ಹೊಸದಾಗಿ ರೂಪಿಸಿರುವ ‘ವಿಬಿ– ಜಿ ರಾಮ್ ಜಿ’ ಕಾಯ್ದೆಯನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಸತ್ಯಾಗ್ರಹ ನಡೆಸಿದರು.
ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಕುಳಿತಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲೆಯ ಶಾಸಕರ ಸಮ್ಮುಖದಲ್ಲಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
‘ವಿಬಿ– ಜಿ ರಾಮ್ ಜಿ’ ಕಾಯ್ದೆ ಗ್ರಾಮಗಳ ಅಭಿವೃದ್ಧಿಗೆ ಮಾರಕವಾಗಿದೆ’ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ದೇಶವ್ಯಾಪಿ ಹೋರಾಟಕ್ಕೆ ಕರೆ ನೀಡಿದೆ. ‘ಮನರೇಗಾ ಉಳಿಸಿ ಆಂದೋಲನ’ ಆರಂಭಿಸಿದೆ. ಇದರ ಭಾಗವಾಗಿ ಹಾವೇರಿಯಲ್ಲಿಯೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸತ್ಯಾಗ್ರಹ ನಡೆಸಿ, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ, ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಮನರೇಗಾ ಯೋಜನೆ ರೂಪಿಸಿತ್ತು. ಆದರೆ, ಈಗ ಬಿಜೆಪಿ ಅದನ್ನು ಬದಲಾವಣೆ ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರ ಉದ್ಯೋಗದ ಹಕ್ಕು ಕಸಿದುಕೊಂಡಿದೆ. ಜನರಿಗೆ ಮಾರಕವಾಗಿರುವ ಈ ಕಾಯ್ದೆ ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಿಸಿ ಈ ಸತ್ಯಾಗ್ರಹ ನಡೆಸಲಾಗುತ್ತಿದೆ’ ಎಂದರು.
ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ‘ಬಿಜೆಪಿಯವರಿಗೆ ಗಾಂಧೀಜಿ ಎಂದರೆ ವಿಶ್ವಾಸವಿಲ್ಲ. ಇದೇ ಕಾರಣಕ್ಕೆ ಅವರ ಹೆಸರು ಬದಲಾವಣೆ ಮಾಡಿದ್ದಾರೆ. ನಾಥೂರಾಮ್ ಗೂಡ್ಸೆ, ಗಾಂಧೀಜಿಯವರನ್ನು ಕೊಂದರು. ಆದರೆ, ಇಂದಿನ ಬಿಜೆಪಿಯವರು ಗಾಂಧೀಜಿಯವರ ತತ್ವಗಳನ್ನು ಕೊಲ್ಲುತ್ತಿದ್ದಾರೆ. ಗಾಂಧೀಜಿಯವರ ಪುತ್ಥಳಿ ಎದುರು ಕುಳಿತು ಪ್ರತಿಭಟನೆ ಮಾಡುವ ನೈತಿಕತೆಯೂ ಬಿಜೆಪಿಗಿಲ್ಲ. ಅವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಆಕ್ರೋಶ ಹೊರಹಾಕಿದರು.
‘ಮನರೇಗಾ ಬದಲಾವಣೆ ಮಾಡಿರುವುದರಿಂದ, ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಲಿವೆ. ಗ್ರಾಮಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ, ಮನರೇಗಾ ಯೋಜನೆ ರೂಪಿಸಿತ್ತು. ಜನರಿಗೆ ಉದ್ಯೋಗ ಹಕ್ಕು ನೀಡಿತ್ತು. ಆದರೆ, ಇಂದಿನ ಬಿಜೆಪಿ ಹಕ್ಕನ್ನು ಕಸಿದುಕೊಂಡಿದೆ. ಜನರನ್ನು ಜೀತದಾಳುಗಳಂತೆ ಕಾಣುವ ಮನಸ್ಥಿತಿ ಬಿಜೆಪಿಯದ್ದಾಗಿದೆ. ಇಂಥ ಬಿಜೆಪಿಯ ಎಲ್ಲ ಜನವಿರೋಧಿ ಧೋರಣೆಗಳನ್ನು ಜನರ ಮುಂದಿಡುತ್ತೇವೆ’ ಎಂದರು.
‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದೇಶವ್ಯಾಪಿ ಆಂದೋಲನ ನಡೆಯುತ್ತಿದೆ. ಈಗ ಹಾವೇರಿಯಲ್ಲಿ ಜಿಲ್ಲಾಮಟ್ಟದಲ್ಲಿ ಮೊದಲ ಸತ್ಯಾಗ್ರಹ ನಡೆದಿದೆ. ಗ್ರಾಮ, ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ಪ್ರತಿಭಟನೆಗಳು ನಿರಂತರವಾಗಿ ನಡೆಯಲಿವೆ’ ಎಂದು ಹೇಳಿದರು.
ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಮನವಿ ಸಲ್ಲಿಸಲಾಯಿತು.
ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಪ್ರಕಾಶ ಕೋಳಿವಾಡ, ಯಾಸೀರ ಅಹ್ಮದ್ ಖಾನ್ ಪಠಾಣ, ಯು.ಬಿ. ಬಣಕಾರ, ಮುಖಂಡರಾದ ಸೈಯದ್ ಅಜ್ಜಂಪೀರ ಖಾದ್ರಿ, ಸೋಮಣ್ಣ ಬೇವಿನಮರದ, ಎಸ್.ಎಫ್.ಎನ್. ಗಾಜೀಗೌಡ್ರ, ಮೋಹನ ಲಿಂಬಿಕಾಯಿ, ಪ್ರೇಮಾ ಪಾಟೀಲ ಹಾಗೂ ಇತರರು ಇದ್ದರು.
‘ಐದು ಕಿ.ಮೀ. ಕಾಲ್ನಡಿಗೆ’
‘2006ರಲ್ಲಿ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರು ಗ್ರಾಮೀಣ ಪ್ರದೇಶದ ಕುಟುಂಬಗಳ ಆರ್ಥಿಕ ಭದ್ರತೆಗಾಗಿ 100 ದಿನಗಳ ಉದ್ಯೋಗ ಖಾತರಿ ಭರವಸೆ ನೀಡಿ ಮನರೇಗಾ ಜಾರಿಗೊಳಿಸಿದ್ದರು. ಇಂತಹ ಯೋಜನೆಯನ್ನು ಬಿಜೆಪಿ ಸರ್ಕಾರ ಬದಲಾವಣೆ ಮಾಡಿರುವುದು ಖಂಡನೀಯ’ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು. ‘ಆರ್‌ಎಸ್ಎಸ್ ಮನಸ್ಥಿತಿಯ ಬಿಜೆಪಿ ಸರ್ಕಾರ ಮನರೇಗಾ ಹೆಸರು ಬದಲಾವಣೆ ಮಾಡಿ ಬೇರೆ ಹೆಸರು ಇರಿಸಿದೆ. ಇದವರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ಜಿಲ್ಲಾ ತಾಲ್ಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಐದು ಕಿ.ಮೀ. ಕಾಲ್ನಡಿಗೆ ನಡೆಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.