ಹಾವೇರಿ: ನೆರೆ ಸಂತ್ರಸ್ತರ ವಸತಿ ಯೋಜನೆಯಡಿ ಬಿಲ್ ಪಡೆಯಲು ಸಂತ್ರಸ್ತರೊಬ್ಬರು ಪತ್ನಿಯ ಮಾಂಗಲ್ಯ ಸರವನ್ನು ಅಡವಿಟ್ಟು ಸರ್ಕಾರಿ ನೌಕರನಿಗೆ ₹ 20 ಸಾವಿರ ಲಂಚ ನೀಡಿರುವ ಆರೋಪ ವ್ಯಕ್ತವಾಗಿದ್ದು, ಈ ಬಗ್ಗೆ ಹಾವೇರಿ ತಹಶೀಲ್ದಾರ್ ಶರಣಮ್ಮ ತನಿಖೆ ಆರಂಭಿಸಿದ್ದಾರೆ.
ತಹಶೀಲ್ದಾರ್ ಶರಣಮ್ಮ ಅವರನ್ನು ಮಂಗಳವಾರ ಭೇಟಿಯಾಗಿ ಅಳಲು ತೋಡಿಕೊಂಡ ಮಹಾಂತೇಶ, ‘ಸಾಲ ಮಾಡಿ ಮನೆ ಕಟ್ಟಿದ್ದರಿಂದ ಬಿಲ್ ಅನಿವಾರ್ಯವಾಗಿತ್ತು. ನನ್ನ ಪತ್ನಿಯ ಮಾಂಗಲ್ಯ ಸರವನ್ನು ಅಡವಿಟ್ಟು ಕಚೇರಿ ಕ್ಯಾಂಟೀನ್‌ನಲ್ಲಿ ನೌಕರ ಮದನ್ ಮೋಹನ್‌ಗೆ ₹ 20 ಸಾವಿರ ಲಂಚ ನೀಡಿದ್ದೇನೆ. ಆದರೆ, ಇದುವರೆಗೂ ಬಿಲ್ ಮಂಜೂರಾಗಿಲ್ಲ’ ಎಂದು ದೂರಿದರು.
ಸಂತ್ರಸ್ತನ ದೂರಿಗೆ ಸ್ಪಂದಿಸಿದ ತಹಶೀಲ್ದಾರ್, ‘ಹಣ ನೀಡಿರುವ ದಾಖಲೆಗಳನ್ನು ನನಗೆ ನೀಡಿ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ನೌಕರನ ವಿರುದ್ಧ ಕಠಿಣ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡುತ್ತೇನೆ’ ಎಂದು ಹೇಳಿದ್ದಾರೆ.
ತಾಲ್ಲೂಕಿನ ಬೆಳವಗಿ ಗ್ರಾಮದ ಮಹಾಂತೇಶ ಬಡಿಗೇರ ಅವರ ಮನೆ ನೆರೆ ಸಂದರ್ಭದಲ್ಲಿ ಕುಸಿದು ಬಿದ್ದಿತ್ತು. ನೆರೆ ಸಂತ್ರಸ್ತರ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಮಂಜೂರಾತಿ ಸಿಕ್ಕಿತ್ತು. ಮಹಾಂತೇಶ ಅವರು ಸಾಲ ಮಾಡಿ ಮನೆ ನಿರ್ಮಾಣ ಆರಂಭಿಸಿದ್ದರು. ಆದರೆ, ಬ್ಯಾಂಕ್ ಖಾತೆಗೆ ಯಾವುದೇ ಬಿಲ್ ಬಂದಿರಲಿಲ್ಲ.
ಬಿಲ್‌ಗಾಗಿ ಹಾವೇರಿ ತಹಶೀಲ್ದಾರ್ ಕಚೇರಿಗೆ ಹಲವು ವರ್ಷಗಳಿಂದ ಅಲೆದಾಡುತ್ತಿದ್ದರು. ಬಿಲ್ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದ್ದ ಮಹಾಂತೇಶ, ಕಚೇರಿಯ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಮದನ್ ಮೋಹನ್ ಅವರನ್ನು ಸಂಪರ್ಕಿಸಿದ್ದರು. ‘ಬಿಲ್ ಮಂಜೂರು ಮಾಡಲು ಉಳಿದ ಸಂತ್ರಸ್ತರು ಹಣ ನೀಡಿದ್ದಾರೆ. ನೀನು ಸಹ ₹20 ಸಾವಿರ ಲಂಚ ನೀಡಬೇಕು’ ಎಂದು ನೌಕರ ಬೇಡಿಕೆ ಇರಿಸಿದ್ದರೆಂದು ಆರೋಪಿಸಲಾಗಿದೆ. ಇದಾದ ನಂತರ ಕಚೇರಿಯ ಕ್ಯಾಂಟೀನ್‌ನಲ್ಲಿ ನೌಕರನಿಗೆ ₹ 20 ಸಾವಿರ ನೀಡಿರುವುದಾಗಿ ಸಂತ್ರಸ್ತ ಮಹಾಂತೇಶ ಆರೋಪಿಸಿದ್ದಾರೆ.
ಕೆಆರ್‌ಎಸ್ ಪಕ್ಷದ ಹೋರಾಟ:
ಸಂತ್ರಸ್ತ ಮಹಾಂತೇಶ ಬಡಿಗೇರ ಅವರಿಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ಆರಂಭಿಸಿರುವ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು, ‘ಲಂಚದ ಪುರಾವೆ ನೀಡುತ್ತೇವೆ. ನೌಕರನನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.
ಸಂತ್ರಸ್ತನ ಜೊತೆ ತಹಶೀಲ್ದಾರ್ ಅವರನ್ನು ಭೇಟಿಯಾದ ಕಾರ್ಯಕರ್ತರು, ‘ಈಗಾಗಲೇ ಹಲವರಿಂದ ₹ 15 ಸಾವಿರ ಲಂಚ ಪಡೆದು ಬಿಲ್ ಮಂಜೂರು ಮಾಡಿರುವ ಆರೋಪವಿದೆ. ಈಗ ಮಹಾಂತೇಶ ಬಳಿಯೂ ₹ 20 ಸಾವಿರ ಲಂಚ ಪಡೆದಿದ್ದಾರೆ. ನೆರೆಯಿಂದ ತತ್ತರಿಸಿದ್ದ ಬಡವರಿಂದಲೇ ಲಂಚ ಪಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ’ ಎಂದು ಆಕ್ರೋಶ ಹೊರಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.