ADVERTISEMENT

‘ಸೌಹಾರ್ದ ಬದುಕಿಗೆ ಹಳ್ಳಿಗಳೇ ಮಾದರಿ’

‘ಸೌಹಾರ್ದ ಕರ್ನಾಟಕ’ ಕೃತಿ ಬಿಡುಗಡೆ: ಬಸವಶಾಂತಲಿಂಗ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಮೇ 2022, 10:39 IST
Last Updated 18 ಮೇ 2022, 10:39 IST
‘ಅಂಕುರ ಪ್ರಕಾಶನ’ ಹೊರತಂದಿರುವ ‘ಸೌಹಾರ್ದ ಕರ್ನಾಟಕ’ ಪುಸ್ತಕವನ್ನು ಹಾವೇರಿಯ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಬಸವಶಾಂತಲಿಂಗ ಸ್ವಾಮೀಜಿ ಬಿಡುಗಡೆ ಮಾಡಿದರು. ಕೃತಿಯ ಸಂಪಾದಕ ಚಂದ್ರಕಾಂತ ವಡ್ಡು ಇದ್ದಾರೆ  
‘ಅಂಕುರ ಪ್ರಕಾಶನ’ ಹೊರತಂದಿರುವ ‘ಸೌಹಾರ್ದ ಕರ್ನಾಟಕ’ ಪುಸ್ತಕವನ್ನು ಹಾವೇರಿಯ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಬಸವಶಾಂತಲಿಂಗ ಸ್ವಾಮೀಜಿ ಬಿಡುಗಡೆ ಮಾಡಿದರು. ಕೃತಿಯ ಸಂಪಾದಕ ಚಂದ್ರಕಾಂತ ವಡ್ಡು ಇದ್ದಾರೆ     

ಹಾವೇರಿ: ‘ವ್ಯಕ್ತಿ ವ್ಯಕ್ತಿಗಳ ನಡುವೆ ಅಷ್ಟೇ ಅಲ್ಲ, ವಸ್ತುಗಳ ನಡುವೆಯೂ ಸೌಹಾರ್ದ, ಸಾಮರಸ್ಯ ಇದ್ದಾಗಲೇ ಸಮಾಜದಲ್ಲಿ ಸಮತೋಲನ ಸಾಧ್ಯ. ನಮ್ಮ ಹಳ್ಳಿಗಳಲ್ಲಿ ಇಂತಹ ಸೌಹಾರ್ದ ಬದುಕು ಸಹಜವಾಗಿಯೇ ಅಸ್ತಿತ್ವದಲ್ಲಿದೆ’ ಎಂದು ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬೆಂಗಳೂರಿನ ‘ಅಂಕುರ ಪ್ರಕಾಶನ’ ಹೊರತಂದಿರುವ ‘ಸೌಹಾರ್ದ ಕರ್ನಾಟಕ’ ಪುಸ್ತಕವನ್ನು ಇಲ್ಲಿಯ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಕೋಮುದ್ವೇಷ ಹರಡುತ್ತಿರುವ ಈ ಹೊತ್ತಿನಲ್ಲಿ ಸಾಮರಸ್ಯ ಬದುಕಿನ ಮಹತ್ವವನ್ನು ಭಾವಾವೇಶಕ್ಕೆ ತುತ್ತಾಗಿರುವ ನಗರ ಪ್ರದೇಶಗಳ ಯುವ ಜನತೆಗೆ ಮುಟ್ಟಿಸುವ ಅಗತ್ಯವಿದೆ’ ಎಂದು ಹೇಳಿದರು.

ಕೃತಿಯ ಸಂಪಾದಕ ಚಂದ್ರಕಾಂತ ವಡ್ಡು ಪ್ರಾಸ್ತಾವಿಕವಾಗಿ ಮಾತನಾಡಿ, ‘ಸೌಹಾರ್ದ ಬದುಕಿನ ಮಾದರಿಗಳನ್ನು ಹೊಸದಾಗಿ ರೂಪಿಸುವ ಅಗತ್ಯವಿಲ್ಲ; ಅವು ಜನರ ದೈನಂದಿನ ಜೀವನದಲ್ಲಿ ತಲೆ ತಲಾಂತರದಿಂದ ಹಾಸುಹೊಕ್ಕಾಗಿವೆ. ಬೀದರ್‌ನಿಂದ ಮಡಿಕೇರಿವರೆಗೆ ನಾಡಿನುದ್ದಕ್ಕೂ ವ್ಯಾಪಿಸಿರುವ ಇಂತಹ ಮಾದರಿಗಳನ್ನು ಈ ಕೃತಿಯಲ್ಲಿ ಸೈದ್ಧಾಂತಿಕ ಭಾರವಿಲ್ಲದೇ ಯಥಾವತ್ತಾಗಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದೇನೆ’ ಎಂದು ಹೇಳಿದರು.

ADVERTISEMENT

ಲೇಖಕ ವಿಜಯಕಾಂತ ಪಾಟೀಲ ಮಾತನಾಡಿ, ‘ನಾವೆಲ್ಲರೂ ಮಕ್ಕಳ ಗುಣವನ್ನು ಅಳವಡಿಸಿಕೊಳ್ಳಬೇಕು. ಆಗ ಜಾತಿ, ಧರ್ಮ ಭೇದ ಇರುವುದಿಲ್ಲ’ ಎಂದರು.

ಸಾಮಾಜಿಕ ಕಾರ್ಯಕರ್ತ ರಮೇಶ ಜಾಲಿಹಾಳ,ಕಟ್ಟಡ ಕಾರ್ಮಿಕ ಸಂಘದ ದಾವುಲ್ ಸಾಹೇಬ ಹಿರೇಮುಗುದೂರ ಮಾತನಾಡಿದರು. ಸಮಾರಂಭದಲ್ಲಿ ಉಡಚಪ್ಪ ಮಾಳಗಿಮನಿ, ಅಮೀರಜಾನ್ ಬೇಪಾರಿ, ಸುರೇಶ ಚಲವಾದಿ, ನಜೀರಸಾಬ್ ಪಟೇಲ, ಮಹಾಂತೇಶ ಬೇವಿನಹಂಡಿ, ಪರಮೇಶಪ್ಪ ಮೇಗಳಮನಿ, ಸಂಕಮ್ಮ ಸಂಕಣ್ಣನವರ ಪಾಲ್ಗೊಂಡಿದ್ದರು.

ಸಾಹಿತಿ ಸತೀಶ ಕುಲಕರ್ಣಿ ಪುಸ್ತಕ ಪರಿಚಯಿಸಿದರು. ಪತ್ರಕರ್ತ ಮಾಲತೇಶ ಅಂಗೂರ ನಿರೂಪಿಸಿದರು. ಎನ್.ಬಿ.ಕಾಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.