ADVERTISEMENT

ಹಾವೇರಿ | ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಜಟಾಪಟಿ

ಹಾವೇರಿ ನಗರಸಭೆ ವಿಶೇಷ ಸಾಧಾರಣಾ ಸಭೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 2:45 IST
Last Updated 30 ಅಕ್ಟೋಬರ್ 2025, 2:45 IST
ಹಾವೇರಿ ನಗರಸಭೆ ಸಭಾಂಗಣದಲ್ಲಿ ಶಾಸಕ ರುದ್ರಪ್ಪ ಲಮಾಣಿ ಸಮ್ಮುಖದಲ್ಲಿ ಬುಧವಾರ  ‘ವಿಶೇಷ ಸುಧಾರಣಾ ಸಭೆ’ ಜರುಗಿತು
ಹಾವೇರಿ ನಗರಸಭೆ ಸಭಾಂಗಣದಲ್ಲಿ ಶಾಸಕ ರುದ್ರಪ್ಪ ಲಮಾಣಿ ಸಮ್ಮುಖದಲ್ಲಿ ಬುಧವಾರ  ‘ವಿಶೇಷ ಸುಧಾರಣಾ ಸಭೆ’ ಜರುಗಿತು   

ಹಾವೇರಿ: ಇಲ್ಲಿಯ ನಗರಸಭೆ ಸಭಾಂಗಣದಲ್ಲಿ ಬುಧವಾರ ಜರುಗಿದ ‘ವಿಶೇಷ ಸುಧಾರಣಾ ಸಭೆ’ಯಲ್ಲಿ ವಾರ್ಡ್‌ಗಳ ಅನುದಾನ ಹಂಚಿಕೆ ಸಂಬಂಧ ಸದಸ್ಯ ಹಾಗೂ ಅಧ್ಯಕ್ಷರ ನಡುವೆ ಜಟಾಪಟಿ ನಡೆಯಿತು.

ನಗರಸಭೆಯ ಆಡಳಿತ ಮಂಡಳಿಯ ಅಧಿಕಾರದ ಅವಧಿ ನಿಯಮಗಳ ಪ್ರಕಾರ ಇದೇ 31ಕ್ಕೆ ಕೊನೆಯಾಗಲಿದೆ. ಹೀಗಾಗಿ, ಕೆಲ ಕೆಲಸಗಳ ಬಗ್ಗೆ ದೃಢೀಕರಣ ಪಡೆಯಲು ವಿಶೇಷ ಸುಧಾರಣಾ ಸಭೆ ಕರೆಯಲಾಗಿತ್ತು. ಆದರೆ, ವಿಷಯಗಳ ಪ್ರಸ್ತಾಪ ಹಾಗೂ ಠರಾವು ಮಾಡಲು ವಿಶೇಷ ಸುಧಾರಣಾ ಸಭೆಯಲ್ಲಿ ಅವಕಾಶವಿಲ್ಲವೆಂದು ಸದಸ್ಯರು ಹೇಳಿದರು.

ಶಾಸಕ ರುದ್ರಪ್ಪ ಲಮಾಣಿ ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ಹಾಜರಾತಿ ಸಹಿ ಮಾಡಲು ಹಲವು ಸದಸ್ಯರು ನಿರಾಕರಿಸಿದರು. ಹೀಗಾಗಿ, ಕೆಲ ವಿಷಯಗಳ ಚರ್ಚೆ ನಡೆಸುವ ಮೂಲಕ ಸಭೆಯನ್ನು ಅಂತ್ಯಗೊಳಿಸಲಾಯಿತು.

ADVERTISEMENT

ವಾರ್ಡ್‌ಗಳ ಅನುದಾನ ಹಂಚಿಕೆ ಸಂಬಂಧ ವಿಷಯ ಪ್ರಸ್ತಾಪಿಸಿದ ಸದಸ್ಯ ಗಣೇಶ ಬಿಷ್ಟಣ್ಣನವರ, ‘ನಗರೋತ್ಥಾನ ಹಂತ 4 ಹಾಗೂ 15ನೇ ಹಣಕಾಸು ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ. ನಾನು ಸೇರಿದಂತೆ ಹಲವು ಸದಸ್ಯರಿಗೆ ನೋವಾಗಿದೆ. ಅಧ್ಯಕ್ಷರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ದೂರಿದರು.

ಆರೋಪಕ್ಕೆ ಗರಂ ಆದ ಅಧ್ಯಕ್ಷೆ ಶಶಿಕಲಾ ಮಾಳಗಿ, ‘ನಾನು ಎಂದಿಗೂ ಯಾರಿಗೂ ಮಲತಾಯಿ ಧೋರಣೆ ಮಾಡಿಲ್ಲ. ಎಲ್ಲರ ಒಪ್ಪಿಗೆ ಪಡೆದೇ ಅನುದಾನ ಹಂಚಿಕೆ ಮಾಡಿದ್ದೇನೆ. ನಿಮ್ಮ ವಾರ್ಡ್‌ಗೆ ₹ 5 ಲಕ್ಷ ಬೇಡವೆಂದು ನೀವೇ ಹೇಳಿದ್ದೀರಾ’ ಎಂದು ಉತ್ತರ ನೀಡಿದರು.

ಎಂಜಿನಿಯರ್‌ ಅವರಿಂದ ಅನುದಾನ ಹಂಚಿಕೆ ಬಗ್ಗೆ ಮಾಹಿತಿ ತಿಳಿಸಿದ ಅಧ್ಯಕ್ಷೆ ಶಶಿಕಲಾ, ‘ಕಳೆದ ಅವಧಿಯಲ್ಲಿಯೂ ಕೆಲ ವಾರ್ಡ್‌ಗಳಿಗೆ ಮಾತ್ರ ಅನುದಾನ ನೀಡಿದ್ದಾರೆ. ಅವಾಗ ಯಾರು ಇದ್ದರೆಂಬುದು ನಿಮಗೂ ಗೊತ್ತಿದೆ. ನನ್ನ ಅವಧಿಯಲ್ಲಿ ಎಲ್ಲರನ್ನೂ ಸಮಾನವಾಗಿ ಕಂಡು, ಅನುದಾನ ಹಂಚಿಕೆ ಮಾಡಿದ್ದೇವೆ. ಅನುದಾನ ಬೇಡ ಎಂದವರಿಗೆ ಹೇಗೆ ತಾನೇ ಕೊಡುವುದು’ ಎಂದು ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಗಣೇಶ ಬಿಷ್ಟಣ್ಣನವರ, ‘ನನಗೂ ಆರೋಗ್ಯ ಸಮಸ್ಯೆ ಇತ್ತು. ಹೀಗಾಗಿ, ವಿಶ್ರಾಂತಿಯಲ್ಲಿದ್ದೆ. ಈ ಅವಧಿಯಲ್ಲಿ ನೀವೂ ಕರೆ ಮಾಡಿ ಕೇಳಿಲ್ಲ. ಅಧ್ಯಕ್ಷ ಅವಧಿ ಏನಾದರೂ ಮತ್ತೆ ಮುಂದೂಡಿದರೆ, ಅವಾಗಾದರೂ ಅನುದಾನ ನೀಡಿ’ ಎಂದು ಕೋರಿದರು.

ಲೆಕ್ಕಾಧಿಕಾರಿ ಕಚೇರಿ ಬಂದ್; ‘ವಿದ್ಯಾನಗರ ಸಿ ಬ್ಲಾಕ್‌ನ 1ನೇ ಕ್ರಾಸ್‌ನಲ್ಲಿ ಕಾಮಗಾರಿ ನಡೆದಿರುವುದಾಗಿ ಬಿಲ್ ಪಡೆಯಲಾಗಿದೆ. ಫೋಟೊಗಳೂ ಇವೆ. ಆದರೆ, ಅಲ್ಲಿ ಕಾಮಗಾರಿಯೇ ನಡೆದಿಲ್ಲ. ಸ್ಥಳ ಪರಿಶೀಲನೆ ನಡೆಸದೇ ಅಧಿಕಾರಿಗಳು ಹೇಗೆ ಬಿಲ್ ನೀಡಿದರು’ ಎಂದು ಗಣೇಶ್ ಪ್ರಶ್ನಿಸಿದರು.

ಅಧ್ಯಕ್ಷೆ ಶಶಿಕಲಾ, ‘ನನ್ನ ಸಹಿ ಇಲ್ಲದೇ ಅಧಿಕಾರಿಗಳು ಹೇಗೆ? ಬಿಲ್ ಕೊಟ್ಟಿದ್ದಾರೆ. ನಾನು ಅದನ್ನೇ ಕೇಳುತ್ತಿದ್ದೇನೆ. ಒಂದೂವರೆ ತಿಂಗಳಿನಿಂದ ಲೆಕ್ಕಾಧಿಕಾರಿ ಕೊಠಡಿಗೆ ಬೀಗ ಹಾಕಲಾಗಿತ್ತು. ಪ್ರಭಾರಿ ಲೆಕ್ಕಾಧಿಕಾರಿಯೇ ಇರಲಿಲ್ಲ. ಇಂಥ ಸ್ಥಿತಿಯಲ್ಲಿ ಹೇಗೆ ಕೆಲಸ ಮಾಡಿಸುವುದು. ಕೊನೆ ಅವಧಿಯಲ್ಲಿ ಅಧಿಕಾರಿಗಳು ಸಹ ಅಶಿಸ್ತಿನಿಂದ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಸಭೆಯ ಕೊನೆಯಲ್ಲಿ ಮಾತನಾಡಿದ ಶಶಿಕಲಾ, ‘ಅಧ್ಯಕ್ಷೆಯಾಗಿ ಕೆಲಸ ಮಾಡಲು ಶಾಸಕರು, ಸದಸ್ಯರು ಹಾಗೂ ಎಲ್ಲರೂ ಸಹಕಾರ ನೀಡಿದ್ದಾರೆ. ಅವರಿಗೂ ಧನ್ಯವಾದ ತಿಳಿಸುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.