ಸವಣೂರು: ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರು ರೈತಾಪಿ ವರ್ಗ ಇರುವುದರಿಂದ ಚಿಲ್ಲೂರಬಡ್ನಿ ಗ್ರಾಮದಲ್ಲಿ ಗುರುವಾರ ವಾರದ ಸಂತೆ ಆರಂಭವಾಗಿರುವುದು ಸಂತಸ ತಂದಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾರವ್ವ ಬಸಪ್ಪ ಹರಿಜನ ಹೇಳಿದರು.
ತಾಲ್ಲೂಕಿನ ಚಿಲ್ಲೂರಬಡ್ನಿ ಗ್ರಾಮದಲ್ಲಿ ನೂತನವಾಗಿ ಗುರುವಾರ ವಾರದ ಸಂತೆಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ತಾಲ್ಲೂಕು ಕೇಂದ್ರದಲ್ಲಿ ಶುಕ್ರವಾರ ನಡೆಯುವ ಸಂತೆ ಸುಮಾರು 12 ಕಿ.ಮಿ ದೂರ ಆಗುವದರಿಂದ ರೈತರಿಗೆ ದುಡಿದು ಬಂದು ಸಂಜೆ ಸಂತೆಯಲ್ಲಿ ದಿನಬಳಕೆ ವಸ್ತುಗಳ ಖರೀದಿಗೆ ತೊಂದರೆಯಾಗುತ್ತದೆ ಎನ್ನುವ ಉದ್ದೇಶದಿಂದ ರೈತರ ಅನುಕೂಲಕ್ಕಾಗಿ ಪ್ರತಿ ಗುರುವಾರ ಮದ್ಯಾಹ್ನ 1 ಗಂಟೆಯಿಂದ ಸಂಜೆ 6 ಗಂಟೆವರೆಗೂ ಗ್ರಾಮದ ಶ್ರೀ ಬೀರದೇವರ ದೇವಸ್ಥಾನ ಹಿಂದಿನ ಆವರಣದಲ್ಲಿ ಸಂತೆಯನ್ನು ನಡೆಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ನಾಗಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಯಲ್ಲಪ್ಪ ಶ್ಯಾಗೋಟಿ, ಭೀಮಣ್ಣ ಲಮಾಣಿ, ಮಾಬೂಸಾಬ ನದಾಫ, ಪಿಡಿಓ ಶಂಭುಲಿಂಗ ನಾಡರ, ಪ್ರಮುಖರಾದ ಬಸವರಾಜ ಗೌಳೇರ, ಬಸಪ್ಪ ಹರಿಜನ, ಗುರಪ್ಪ ಲಮಾಣಿ, ನಿಂಗಪ್ಪ ವಗ್ಗನವರ, ಸೋನಿಯಾ ಮೇಟಿ, ರಾಮಣ್ಣ ಗೋಣಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.