ADVERTISEMENT

ಚಿತ್ರಕಲಾ ಶಿಕ್ಷಕರಿಂದ ‘ವರ್ಲಿ’ ಚಿತ್ತಾರ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 14:06 IST
Last Updated 5 ಸೆಪ್ಟೆಂಬರ್ 2020, 14:06 IST
ಹಾವೇರಿಯ ಜಿಲ್ಲಾಡಳಿತ ಭವನದ ಡಿಡಿಪಿಯು ಕಟ್ಟಡದ ಹೊರಭಾಗದಲ್ಲಿ ವರ್ಲಿ ಕಲೆ ಮತ್ತು ಸರ್ಕಾರಿ ಕಾರ್ಯಕ್ರಮಗಳ ಚಿತ್ತಾರ ಗಮನಸೆಳೆಯುತ್ತಿದೆ 
ಹಾವೇರಿಯ ಜಿಲ್ಲಾಡಳಿತ ಭವನದ ಡಿಡಿಪಿಯು ಕಟ್ಟಡದ ಹೊರಭಾಗದಲ್ಲಿ ವರ್ಲಿ ಕಲೆ ಮತ್ತು ಸರ್ಕಾರಿ ಕಾರ್ಯಕ್ರಮಗಳ ಚಿತ್ತಾರ ಗಮನಸೆಳೆಯುತ್ತಿದೆ    

ಹಾವೇರಿ: ದೇವಗಿರಿ ಸಮೀಪದ ಜಿಲ್ಲಾಡಳಿತ ಭವನದ ಮಹಡಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಟ್ಟಡ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಸಾಂಪ್ರದಾಯಿಕ ವರ್ಲಿ ಕಲೆಯ ಚಿತ್ತಾರಗಳಿಂದ ಕಂಗೊಳಿಸುತ್ತಿದೆ.

ಮಾಸಿದ ಸುಣ್ಣ-ಬಣ್ಣಗಳ ಬದಲಿಗೆ ವರ್ಲಿ ಕಲೆಯ ರಂಗು ಅನಾವರಣಗೊಂಡಿದೆ. ಶೈಕ್ಷಣಿಕ ಯೋಜನೆಗಳ ಮಾಹಿತಿಯ ಪ್ಲಾಸ್ಟಿಕ್ ಫ್ಲೆಕ್ಸ್‌ ಫಲಕಗಳ ಬದಲಿಗೆ ಪರಿಸರಸ್ನೇಹಿ ಗೋಡೆ ಬರಹಗಳ ಮಾಹಿತಿ ಆಕರ್ಷಣೀಯವಾಗಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅಧಿಕಾರಿಗಳ ಮನಸೆಳೆಯುತ್ತಿದೆ.

ಒಂದು ತಿಂಗಳಿನಿಂದ 25 ಶಿಕ್ಷಕರು ಕಾರ್ಯನಿರ್ವಹಿಸಿ ಡಿಡಿಪಿಐ ಕಚೇರಿಯ ಹೊರ ಆವರಣದ ಗೋಡೆಗಳಿಗೆ ವರ್ಲಿ ಕಲೆಯ ಪೇಂಟಿಂಗ್ ಮಾಡಿದ್ದಾರೆ. ಕಲಾ ಶಿಕ್ಷಕರ ಆಸಕ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಬೆನ್ನೆಲುಬಾಗಿ ನಿಂತರು. ಸುಣ್ಣದಿಂದ ಢಾಳಾಗಿ ಕಾಣುತ್ತಿರುವ ಗೋಡೆಗಳಿಗೆ ಅಲಂಕಾರದ ಜೊತೆಗೆ ಶೈಕ್ಷಣಿಕ ಚಟುವಟಿಕೆಗಳ ಕುರಿತಂತೆ ಕಲಾ ಮಾಧ್ಯಮದಲ್ಲಿ ಮಾಹಿತಿಯ ಹೂರಣವನ್ನು ಜನರಿಗೆ ತಲುಪಿಸಲು ಯಶಸ್ವಿಯಾಗಿದ್ದಾರೆ.

ADVERTISEMENT

ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲಿ ಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ತಮ್ಮ ಕೈಚಳಕದಿಂದ ಗೋಡೆಯ ಕೆಳಭಾಗದಲ್ಲಿ ವರ್ಲಿ ಕಲೆಯ ಚಿತ್ರಗಳು ಮೇಲ್ಭಾಗದಲ್ಲಿ ಶಿಕ್ಷಣ ಇಲಾಖೆಯ ಯೋಜನೆಗಳಾದ ಉಚಿತ ಪಠ್ಯಪುಸ್ತಕ ವಿತರಣೆ, ಉಚಿತ ಸೈಕಲ್ ವಿತರಣೆ, ಶೂ ಮತ್ತು ಸಾಕ್ಸ್ ವಿತರಣೆ, ಸಮವಸ್ತ್ರ ವಿತರಣೆ, ಅಕ್ಷರದಾಸೋಹ, ಕ್ಷೀರಭಾಗ್ಯ, ಅಂಗವಿಕಲ ಮಕ್ಕಳಿಗೆ ವ್ಯಾಯಾಮ, ವಿಟಮಿನ್ ಮಾತ್ರೆಗಳ ವಿತರಣೆ, ಪರಿಸರ ಜಾಗೃತಿ ಚಿತ್ತಾರಗಳು ಗಮನ ಸೆಳೆಯುತ್ತಿವೆ.

‘ವಿಜ್ಞಾನ ವಿವಿಧ ಮಾದರಿಗಳ ಪ್ರದರ್ಶನ ಹಾಗೂ ಅಟಲ್ ಟಿಂಕರಿಂಗ್‌ ಪ್ರಯೋಗಾಲಯ, ಮಕ್ಕಳ ಗುಂಪು ಅಧ್ಯಯನ, ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಕೊಡುಗೆ, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಒಳಗೊಂಡಂತೆ ಹಲವು ಶೈಕ್ಷಣಿಕ ಯೋಜನೆಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸ್ಫೂರ್ತಿದಾಯಕ ಚಿತ್ರಗಳು ವರ್ಣಗಳಲ್ಲಿ ಮೈದಾಳಿವೆ. ಈ ಚಿತ್ರಗಳಿಗೆ ವರ್ಲಿಯ ಚಿತ್ರಗಳು ಇಂಬು ನೀಡಿವೆ’ ಎಂದು ಡಿ.ಡಿ.ಪಿ.ಐ ಅಂದಾನೆಪ್ಪ ವಡಗೇರಿ ಮಾಹಿತಿ ನೀಡಿದರು.

ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ವರ್ಲಿ ಕಲೆಯ ಮೂಲಕ ಶೈಕ್ಷಣಿಕ ಜಾಗೃತಿ ಸಂದೇಶಗಳ ಜೊತೆಗೆ ಶಾಲಾ ಗೋಡೆಗಳಿಗೂ ಚಿತ್ತಾರ ಬಿಡಿಸುವ ಮೂಲಕ ಮಕ್ಕಳಲ್ಲಿ ಪಾರಂಪರಿಕ ಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಉದ್ದೇಶಿಸಲಾಗಿದೆ. ಆಸಕ್ತಿ ತೋರುವ ಸರ್ಕಾರಿ ಕಚೇರಿ ಕಟ್ಟಡಗಳಿಗೂ ವರ್ಲಿ ಕಲೆಯ ಚಿತ್ತಾರಕ್ಕೆ ಚಿತ್ರಕಲಾ ಶಿಕ್ಷಕರ ತಂಡ ಸಿದ್ಧವಿದೆ. ಪ್ಲೆಕ್ಸ್, ಪ್ಲಾಸ್ಟಿಕ್ ಫಲಕಗಳ ಬದಲಿಗೆ ವರ್ಲಿ ಕಲೆಯ ಚಿತ್ರಗಳಿಗೆ ಅವಕಾಶ ಕಲ್ಪಿಸಿದರೆ ಪರಿಸರ ರಕ್ಷಣೆಯ ಜೊತೆಗೆ ಪಾರಂಪರಿಕ ಕಲೆಗಳಿಗೆ, ಕಲಾವಿದರಿಗೆ ಪ್ರೋತ್ಸಾಹ ದೊರಕುತ್ತದೆ ಎಂಬುದು ಚಿತ್ರಕಲಾ ಶಿಕ್ಷಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.