ADVERTISEMENT

ಮಹಿಳಾ ಸರ್ಕಾರಿ ನೌಕರರ ಹಿತ ಕಾಯಲು ಪ್ರತ್ಯೇಕ ಸಂಘ: ರೋಶಿನಿ ಗೌಡ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 7:22 IST
Last Updated 4 ಫೆಬ್ರುವರಿ 2026, 7:22 IST
ರೋಶಿನಿ ಗೌಡ
ರೋಶಿನಿ ಗೌಡ   

ಹಾವೇರಿ: ‘ರಾಜ್ಯದ ಸರ್ಕಾರಿ ನೌಕರರ ಪೈಕಿ ಶೇ 52ರಷ್ಟು ಮಹಿಳಾ ನೌಕರರಿದ್ದೇವೆ. ಆದರೆ, ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಯಲ್ಲಿ ಸಾಕಷ್ಟು ಅನ್ಯಾಯ ಆಗುತ್ತಿತ್ತು. ಹೀಗಾಗಿ, ಮಹಿಳಾ ನೌಕರರ ಹಿತ ಕಾಯಲು ಪ್ರತ್ಯೇಕವಾಗಿ ‘ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಸ್ಥಾಪಿಸಿದ್ದೇವೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷೆ ರೋಶಿನಿ ಗೌಡ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2023ರಲ್ಲಿ ಸ್ಥಾಪಿಸಿದ ಸಂಘಕ್ಕೆ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿರುವ ಬಾಲಭವನದ ಆವರಣದಲ್ಲಿ ಸರ್ಕಾರದಿಂದ ಕಚೇರಿ ಸಿಕ್ಕಿದೆ. ಇಡೀ ರಾಜ್ಯದಾದ್ಯಂತ ಸಂಚರಿಸಿ, ಮಹಿಳಾ ನೌಕರರ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ನಮ್ಮದು ಯಾವುದೇ ಪುರುಷ ಸಂಘಟನೆ ವಿರೋಧಿ ಸಂಘವಲ್ಲ. ಮಹಿಳಾ ನೌಕರರು ಎದುರಿಸುವ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಹಾಗೂ ಮಹಿಳಾ ನೌಕರರ ಹಿತಾಸಕ್ತಿ ಕಾಯಲು ಈ ಸಂಘ ಮಾಡಿದ್ದೇವೆ. ಹಾವೇರಿ ಜಿಲ್ಲೆಯಲ್ಲಿಯೂ ಸಂಘಟನೆ ಮಾಡುತ್ತಿದ್ದೇವೆ. ₹100 ಶುಲ್ಕದೊಂದಿಗೆ ಸದಸ್ಯತ್ವ ನೋಂದಣಿ ಮಾಡಿಕೊಳ್ಳುತ್ತಿದ್ದೇವೆ’ ಎಂದರು.

ADVERTISEMENT

ಸೆ. 13ರಂದು ದಿನಾಚರಣೆ: ‘ಸರ್ಕಾರಿ ನೌಕರರ ಏಳಿಗೆಗಾಗಿ ಕೆಲಸ ಮಾಡಿದ ಮೇರಿ ದೇವಾಸಿಯಾ ಅವರ ಜನ್ಮದಿನವಾದ ಸೆ. 13ರಂದು ಸರ್ಕಾರಿ ಮಹಿಳಾ ನೌಕರರ ದಿನಾಚರಣೆ ಮಾಡುವಂತೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲಾಗಿತ್ತು. ಇದಕ್ಕೆ ಅವರು ಒಪ್ಪಿಗೆ ನೀಡಿದ್ದು, ಈ ವರ್ಷದಿಂದಲೇ ದಿನಾಚರಣೆ ಕಾರ್ಯಕ್ರಮ ಆರಂಭಿಸುವ ಬಗ್ಗೆ ಸದ್ಯದಲ್ಲೇ ಸುತ್ತೋಲೆ ಹೊರಬೀಳಲಿದೆ’ ಎಂದು ರೋಶಿನಿ ಹೇಳಿದರು.

‘8ನೇ ವೇತನ ಆಯೋಗ ರಚನೆಯಾಗಬೇಕು. ಕೇಂದ್ರ ಸರ್ಕಾರದ ಮಾದರಿ ವೇತನ ನಮಗೂ ಜಾರಿಯಾಗಬೇಕು. ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸಿ, ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. ಮಾತೃತ್ವ ರಜೆಯನ್ನು ಒಂದು ವರ್ಷದವರೆಗೆ ವಿಸ್ತರಿಸಬೇಕು. ಗರ್ಭಿಣಿ ನೌಕರರಿಗೆ, ವೈದ್ಯಕೀಯ ಪರೀಕ್ಷಾ ತಪಾಸಣೆಗೆ ಒಂದು ದಿನ ವೇತನ ಸಹಿತ ರಜೆ ನೀಡಬೇಕು. ಹಬ್ಬದ ಮುಂಗಡ ₹ 50 ಸಾವಿರಕ್ಕೆ ಹೆಚ್ಚಿಸಬೇಕು. ಮಹಿಳಾ ಅಧಿಕಾರಿಗಳ ವಾಹನಕ್ಕೆ ಮಹಿಳಾ ಚಾಲಕರನ್ನು ನೇಮಿಸಬೇಕು. ಮಹಿಳಾ ನೌಕರರ ಸುರಕ್ಷತೆಗಾಗಿ ಪ್ರತ್ಯೇಕ ಕಾನೂನು ರಚಿಸಬೇಕು’ ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

ರಾಜ್ಯ ಘಟಕದ ಖಜಾಂಚಿ ಡಾ. ವೀಣಾ ಕೃಷ್ಣಮೂರ್ತಿ ಮಾತನಾಡಿ, ‘ಇದು ಮಹಿಳಾ ನೌಕರರು ಕಟ್ಟಿರುವ ಸ್ವತಂತ್ರ ಸಂಘ. ಯಾರ ಅಡಿಯೂ ಕೆಲಸ ಮಾಡುವುದಿಲ್ಲ. ಮಹಿಳಾ ನೌಕರರಿಗೆ ಮುಟ್ಟಿನ ರಜೆ ಕೊಡಿಸಲು ನಿರಂತರ ಹೋರಾಟ ನಡೆಸಿತ್ತು. ಮುಂಬರುವ ದಿನಗಳಲ್ಲಿಯೂ ಮಹಿಳಾ ನೌಕರರ ಪರ ಹೋರಾಟ ಮುಂದುವರಿಸಲಿದೆ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಶೈಲಾ ಕುರಹಟ್ಟಿ, ಎಂ. ಆಶಾರಾಣಿ, ಶಿವಲೀಲಾ ಗಡ್ಡದ ಪತ್ರಿಕಾಗೋಷ್ಠಿಯಲ್ಲಿದ್ದರು.

‘ಚುನಾವಣೆಗೂ ಅವಕಾಶ’

‘ರಾಜ್ಯದ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಮಹಿಳಾ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 50 ಸಾವಿರ ನೌಕರರು ನಮ್ಮ ಸಂಘದ ಸದಸ್ಯತ್ವ ಪಡೆದುಕೊಂಡಿದ್ದಾರೆ’ ಎಂದು ಅಧ್ಯಕ್ಷೆ ರೋಶಿನಿ ಗೌಡ ತಿಳಿಸಿದರು. ‘ಈಗ ಸದಸ್ಯತ್ವ ಅಭಿಯಾನವನ್ನು ಚುರುಕಿನಿಂದ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಅಧ್ಯಕ್ಷ ಹಾಗೂ ಇತರೆ ಸ್ಥಾನಕ್ಕೆ ಅಗತ್ಯಬಿದ್ದರೆ ಚುನಾವಣೆ ಸಹ ಮಾಡುತ್ತೇವೆ. ನಮ್ಮ ರೀತಿಯಲ್ಲಿ ಬೇರೆ ಯಾರಾದರೂ ಸಂಘ ಮಾಡಿದ್ದರೂ ನಮಗೆ ಖುಷಿಯಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.