ADVERTISEMENT

ಕುಟುಂಬದ ಸಹಕಾರದಿಂದ ಯಶಸ್ಸಿನ ಸಾಕಾರ

ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಮನದಾಳದ ಮಾತು

ಸಿದ್ದು ಆರ್.ಜಿ.ಹಳ್ಳಿ
Published 8 ಮಾರ್ಚ್ 2020, 13:36 IST
Last Updated 8 ಮಾರ್ಚ್ 2020, 13:36 IST
ಅನ್ನಪೂರ್ಣ ಮುದುಕಮ್ಮನವರ
ಅನ್ನಪೂರ್ಣ ಮುದುಕಮ್ಮನವರ   

ಹಾವೇರಿ: ‘ಕುಟುಂಬ ಮತ್ತು ಉದ್ಯೋಗ ಎರಡನ್ನೂ ಸಮರ್ಪಕವಾಗಿ ನಿಭಾಯಿಸಲು ಮನೆಯಲ್ಲಿ ಉತ್ತಮ ಸಹಕಾರ ಅತ್ಯಗತ್ಯ. ನನ್ನ ಪತಿಯ ಬೆಂಬಲದಿಂದ ನಾನು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ’ ಎನ್ನುತ್ತಾರೆ ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ.

ಮಹಿಳಾ ದಿನಾಚರಣೆ ಅಂಗವಾಗಿ ‘ಪ್ರಜಾವಾಣಿ’ಯೊಂದಿಗೆ ಅವರು ವಿಶೇಷ ಮಾತುಕತೆ ನಡೆಸಿದರು.

ನನಗೆ ನಿಗದಿತ ಕರ್ತವ್ಯ ಅವಧಿ ಇರುವುದಿಲ್ಲ. ಕೆಲವೊಮ್ಮೆ ರಾತ್ರಿ 9ರವರೆಗೂ ಕೆಲಸ ಮಾಡಬೇಕಾಗುತ್ತದೆ. ಭಾನುವಾರವೂ ಕಾರ್ಯಕ್ರಮಗಳಿರುತ್ತವೆ. ಹೀಗಾಗಿಸಮಯವನ್ನು ಲೆಕ್ಕಿಸದೆ ಕೆಲಸ ಮಾಡಬೇಕು.ಅಮ್ಮನ ಕೆಲಸವನ್ನು ನೋಡಿಕೊಂಡು ಬೆಳೆದ ನನ್ನ ಮಕ್ಕಳಾದ ವರ್ಷಾ, ಶ್ರೀಶಾ ಕೂಡ ನನಗೆ ಹೊಂದಿಕೊಂಡಿದ್ದಾರೆ. ಪತಿ ಮಹೇಶಕುಮಾರ ಶಿಕ್ಷಕರಾಗಿದ್ದು, ಮನೆಯ ಜವಾಬ್ದಾರಿಗಳನ್ನು ಹಂಚಿಕೊಂಡು, ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ADVERTISEMENT

ಸರ್ಕಾರಿ ಇಲಾಖೆಯಲ್ಲಿ ಮಹಿಳೆ ಮತ್ತು ಪುರುಷ ಎಂಬ ಪ್ರಶ್ನೆಯೇ ಬರುವುದಿಲ್ಲ. ಸಮಾಜದ ಕಟ್ಟ ಕಡೆಯ ಫಲಾನುಭವಿಗೂಸರ್ಕಾರಿ ಸೌಲಭ್ಯಗಳು ದೊರೆಯಬೇಕು ಎಂಬ ಆಶಯದೊಂದಿಗೆ ಕೆಲಸ ಮಾಡುತ್ತೇನೆ. ಹಲವಾರು ರೈತರು ಹಳ್ಳಿಗಳಿಂದ ಬರುತ್ತಾರೆ. ಅವರ ಅಹವಾಲು ಆಲಿಸಿ, ಕಡಿಮೆ ಅವಧಿಯಲ್ಲಿ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ.

ಹಿಂಜರಿಕೆ, ಕೀಳರಿಮೆ ತೊರೆಯಿರಿ

ನನಗೆ ಎಲ್ಲಿಯೂ ಪುರುಷ ಅಧಿಕಾರಿಗಳಿಂದಲಿಂಗ ತಾರತಮ್ಯ, ಕಿರುಕುಳ, ಶೋಷಣೆಯಾಗಿಲ್ಲ. ಹಿರಿಯ ಅಧಿಕಾರಿಗಳಿಂದ ಉತ್ತಮ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಸಿಕ್ಕಿದೆ. ಮಹಿಳೆಯರು ಹಿಂಜರಿಕೆ, ಕೀಳರಿಮೆ ತೊರೆದು ಧೈರ್ಯದಿಂದ ಕರ್ತವ್ಯ ನಿರ್ವಹಿಸಬೇಕು ಎಂಬುದು ಅನ್ನಪೂರ್ಣ ಅವರ ಸಲಹೆ.

ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಛಾಪನ್ನು ಮೂಡಿಸಿದ್ದಾರೆ. ಅಷ್ಟೇ ಏಕೆ, ಪುರುಷರಿಗಿಂತ ಉತ್ತಮವಾಗಿ ಕೆಲಸ ಮಾಡಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಹಾವೇರಿಯಲ್ಲಿ ಇಒ ಆಗಿ ಕೆಲಸ ಮಾಡುವ ಸಂದರ್ಭ ಅನೇಕ ಗ್ರಾಮಸ್ಥರು ಕಚೇರಿಗೆ ಬಂದು ‘ನಮ್ಮ ಊರಿಗೆ ಲೇಡಿ ಪಿಡಿಒ ಕೊಡಿ, ಅವರು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಾರೆ’ ಎಂದು ಮನವಿ ಮಾಡುತ್ತಿದ್ದರು. ಒಟ್ಟಿನಲ್ಲಿ ಮಹಿಳಾ ಅಧಿಕಾರಿಗಳ ಮೇಲೆ ಜನರು ಹೆಚ್ಚು ಅಭಿಮಾನ, ಪ್ರೀತಿ ತೋರುತ್ತಾರೆ.

ಇತ್ತೀಚಿನ ದಿನಗಳಲ್ಲಿ ಹೆಣ್ಣಾಗಲಿ, ಗಂಡಾಗಲಿ ಕುಟುಂಬಕ್ಕೆ ಒಂದೇ ಮಗು ಸಾಕು ಎಂಬ ಮನೋಭಾವ ಬಹುತೇಕರಲ್ಲಿ ಬೆಳೆಯುತ್ತಿದೆ. ಕೆಲವರಿಗೆ ಮಾತ್ರ ಗಂಡು ಮಕ್ಕಳ ಮೇಲೆ ವ್ಯಾಮೋಹವಿರುತ್ತದೆ. ಅಂಥವರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ‘ಹೆಣ್ಣು ಕುಟುಂಬದ ಕಣ್ಣು’ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹೆಣ್ಣು ಮಕ್ಕಳ ಸಾಧನೆಯನ್ನು ಉತ್ತಮವಾಗಿ ಬಿಂಬಿಸುವ ಸಮೂಹ ಮಾಧ್ಯಮಗಳು ಕೂಡ ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತಿವೆ ಎನ್ನುತ್ತಾರೆ ಅನ್ನಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.