ಬ್ಯಾಡಗಿ: ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗ ಎಣಿಸಿಕೊಂಡಿರುವ ಫಾರ್ಮಸಿ ವಿಭಾಗ ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇಯಾದ ಛಾಪು ಮೂಡಿಸಿದೆ ಎಂದು ಔಷಧ ಮಾರಾಟಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಚೂರಿ ಹೇಳಿದರು.
ತಾಲ್ಲೂಕಿನ ಮೋಟಬೆನ್ನೂರು ಗ್ರಾಮದ ಬಿಆರ್‌ಇ ಸಮೂಹ ಶಿಕ್ಷಣ ಸಂಸ್ಥೆಯ ಔಷಧ ವಿಜ್ಞಾನ (ಫಾರ್ಮಸಿ) ಕಾಲೇಜಿನಲ್ಲಿ ‘ವಿಶ್ವ ಫಾರ್ಮಸಿ‘ ದಿನದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೋಗಿಗೆ ವೈದ್ಯರು ಎಷ್ಟು ಮುಖ್ಯವೋ, ಫಾರ್ಮಸಿ ವಿಭಾಗವೂ ಅಷ್ಟೇ ಮುಖ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಿ ಬಲಪಡಿಸುವಲ್ಲಿ ಫಾರ್ಮಸಿಸ್ಟ್‌ಗಳ ಪಾತ್ರ ಪ್ರಮುಖವಾಗಿದೆ ಎಂದರು.
ಪ್ರಾಚಾರ್ಯ ರೇಣುಕಾರಾಧ್ಯ ಚಿತ್ತಿ, ಬಿ.ಇಡಿ ಕಾಲೇಜು ಪ್ರಾಚಾರ್ಯ ಸುರೇಶ ಎಂ ಮಾತನಾಡಿದರು. ಶಿವರಾಜ ಚೂರಿ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಾಗೃತಿ ಜಾಥಾ: ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಫಾರ್ಮಸಿಟ್ಸ್ ದಿನದ ಅಂಗವಾಗಿ ಜಾಗೃತಿ ಜಾಥಾ ನಡೆಸಿದರು. ಕಾಲೇಜಿನಿಂದ ಬಸ್ ನಿಲ್ದಾಣದವರೆಗೆ ಸಾಗಿದ ಅವರು ಔಷಧಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.