ADVERTISEMENT

ಲಂಚ ಮುಕ್ತ ಕರ್ನಾಟಕಕ್ಕಾಗಿ ಯಾತ್ರೆ: ರವಿಕೃಷ್ಣಾ ರೆಡ್ಡಿ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 16:28 IST
Last Updated 17 ಜುಲೈ 2022, 16:28 IST
ರಾಣೆಬೆನ್ನೂರಿನಿಂದ ಆರಂಭವಾದ ಕೆಆರ್‌ಎಸ್‌ ಪಕ್ಷದ ಕರ್ನಾಟಕ ನವ ಚೈತನ್ಯ ಯಾತ್ರೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೆಜ್ಜೆ ಹಾಕಿದರು
ರಾಣೆಬೆನ್ನೂರಿನಿಂದ ಆರಂಭವಾದ ಕೆಆರ್‌ಎಸ್‌ ಪಕ್ಷದ ಕರ್ನಾಟಕ ನವ ಚೈತನ್ಯ ಯಾತ್ರೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೆಜ್ಜೆ ಹಾಕಿದರು   

ರಾಣೆಬೆನ್ನೂರು: ‘ಕರ್ನಾಟಕವನ್ನು ಕೇಂದ್ರವಾಗಿಸಿಕೊಂಡು ಒಕ್ಕೂಟ ವ್ಯವಸ್ಥೆ ಬಲಪಡಿಸುವುದು, ಕರ್ನಾಟಕದ ಅಸ್ಮಿತೆಯ ಹಿತಾಸಕ್ತಿ ಕಾಪಾಡುವುದೇ ಕೆಆರ್‌ಎಸ್‌ ಪಕ್ಷದ ಮುಖ್ಯ ಉದ್ದೇಶ. ಅರ್ಹ ಪ್ರಾಮಾಣಿಕ, ವಿದ್ಯಾವಂತ, ಸಾಮಾನ್ಯ ವ್ಯಕ್ತಿಗಳಿಗೆ ಪಕ್ಷದ ಟಿಕೆಟ್‌ ನೀಡಲಾಗುವುದು’ ಎಂದುಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನುಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ರಾಜ್ಯದಾದ್ಯಂತ ಲಂಚ ಮುಕ್ತ ಕರ್ನಾಟಕ ಮಾಡಲು 2019ರಲ್ಲಿ ಕರ್ನಾಟಕರ ರಾಷ್ಟ್ರ ಸಮಿತಿ ಪಕ್ಷ ಉದಯವಾಯಿತು. ಭ್ರಷ್ಟಾಚಾರದ ರಾಜಕಾರಣ ಕೊನೆಗೊಳಿಸಲು ಕೆಆರ್‌ಎಸ್‌ ಪಕ್ಷ ಎರಡನೇ ಹಂತದ ಕರ್ನಾಟಕ ನವ ಚೈತನ್ಯ ಯಾತ್ರೆ ಹಮ್ಮಿಕೊಂಡಿದೆ’ ಎಂದರು.

ADVERTISEMENT

‘ಕರ್ನಾಟಕ ರಾಜ್ಯ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹಿಂದೆಂದೂ ಕಾಣದ ಅಧೋಗತಿಯನ್ನು ತಲುಪಿದೆ. ಕಳೆದ ಎರಡು ದಶಕಗಳಿಂದ ಆಡಳಿತ ನಡೆಸಿದ ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಪಕ್ಷಗಳ ಅನೀತಿಯಿಂದ ಭ್ರಷ್ಟಾಚಾರ, ದುರಾಡಳಿತ ಮತ್ತು ಅಕ್ರಮಗಳ ಕಾರಣ ಎದುರಾದ ಸ್ಥಿತಿ ಇದಾಗಿದೆ. ಬಿಜೆಪಿ ಸರ್ಕಾರ ಹಿಂದಿನ ಎಲ್ಲ ಸರ್ಕಾರಗಳನ್ನು ಮೀರಿಸಿದೆ’ ಎಂದು ಟೀಕಿಸಿದರು.

‘ಕಾಮಗಾರಿಗಳಲ್ಲಿ ಅವ್ಯವಹಾರ, ಪಿಎಸ್‌ಐ ಹುದ್ದೆ ಸೇರಿದಂತೆ ಎಲ್ಲ ಸರ್ಕಾರಿ ನೌಕರರ ನೇಮಕಾತಿಯಲ್ಲಿ ಅಕ್ರಮಗಳು, ಕೋವಿಡ್‌ ನಿಯಂತ್ರಣದ ಹೆಸರಿನಲ್ಲಿ ಲೂಟಿ, ಸರ್ಕಾರಿ ಕಚೇರಿಗಳಲ್ಲಿ ಚಿತ್ರ, ವಿ‌ಡಿಯೊ ಮಾಡಬಾರದು, ಪತ್ರಕರ್ತರೂ ಸರ್ಕಾರಿ ಕಚೇರಿ ಒಳಗೆ ಹೋಗಬಾರದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದ್ದು ಹಾಸ್ಯಾಸ್ಪದ’ ಎಂದು ವ್ಯಂಗ್ಯವಾಡಿದರು.

‘ರಾಜಕೀಯ ಪಕ್ಷಗಳು ಮತದಾರರ ಹಿಡಿತದಲ್ಲಿರಬೇಕು. ರಾಜಕಾರಣ ಪರಮ ಪವಿತ್ರವಾದುದು. ಈಗಾಗಲೇ 50 ವಿಧಾನಸಭಾ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮುಂದಿನ ಚುನಾವಣೆಯಲ್ಲಿ ರಾಜ್ಯದ ರಾಜಕಾರಣವನ್ನು ಸರಿಯಾದ ದಾರಿಗೆ ತಿರುಗಿಸುವ ಸಂಕಲ್ಪ ತೊಟ್ಟು ಪಕ್ಷದ ಒಳಿತಿಗೆ ದುಡಿಯುತ್ತಿದ್ದಾರೆ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಉಜಣೆಪ್ಪ ಕೋಡಿಹಳ್ಳಿ, ರಾಜ್ಯ ಕಾರ್ಯದರ್ಶಿ ಅರವಿಂದ ಜಾಣಗೆರೆ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗಂಗಾ ಕೋರೆ, ತಾಲ್ಲೂಕು ಘಟಕದ ಅಧ್ಯಕ್ಷ ಅಮರನಾಥ ಭೂತೆ, ಹೊಳಗುಂದಿಮಠ ಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.