ADVERTISEMENT

ಯೂಟ್ಯೂಬ್ ನೋಡಿ ಹೂಡಿಕೆ: ₹ 33.45 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 2 ಮೇ 2025, 16:33 IST
Last Updated 2 ಮೇ 2025, 16:33 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ಹಾವೇರಿ: ಯೂಟ್ಯೂಬ್‌ನಲ್ಲಿದ್ದ ವಿಡಿಯೊ ನೋಡಿ ಹಣ ಹೂಡಿಕೆ ಮಾಡಿದ್ದ ಜಿಲ್ಲೆಯ ಮಹಿಳೆಯೊಬ್ಬರು ₹ 33.45 ಲಕ್ಷ ಕಳೆದುಕೊಂಡಿದ್ದು, ಈ ಸಂಬಂಧ ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕದ್ರವ್ಯ ನಿಯಂತ್ರಣ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹಾನಗಲ್ ಪಟ್ಟಣದ 35 ವರ್ಷದ ಮಹಿಳೆಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ದಮಯಂತಿ ರಾವತ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಮಹಿಳೆಯು ತಮ್ಮ ಮೊಬೈಲ್‌ನಲ್ಲಿರುವ ಯೂಟ್ಯೂಬ್‌ನಲ್ಲಿ ವಿಡಿಯೊ ನೋಡುತ್ತಿದ್ದರು. ಮನೆಯಲ್ಲೇ ಕುಳಿತು ಕಡಿಮೆ ಹಣ ಹೂಡಿಕೆ ಮಾಡಿ ಹೆಚ್ಚು ಲಾಭ ಪಡೆಯಬಹುದೆಂಬ ವಿಡಿಯೊ ನೋಡಿದ್ದರು. ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿ ತಮ್ಮ ಮೊಬೈಲ್ ನಂಬರ್ ಹಂಚಿಕೊಂಡಿದ್ದರು. ಅದಾದ ನಂತರ ಆರೋಪಿ ದಮಯಂತಿ ರಾವತ್, ಟೆಲಿಗ್ರಾಂ ಆ್ಯಪ್‌ನಲ್ಲಿ ಲಿಂಕ್ ಕಳುಹಿಸಿದ್ದರು. ಅದನ್ನು ಕ್ಲಿಕ್ ಮಾಡುತ್ತಿದ್ದಂತೆ, ಜಾಲತಾಣದಲ್ಲಿ ಲಾಗಿನ್ ಆಗಿತ್ತು. ನಂತರ, ಕೆಲ ಟಾಸ್ಕ್‌ ನೀಡಲಾಗಿತ್ತು. ಇದಾದ ನಂತರ, ಲಾಭಾಂಶದ ನೆಪ ಹೇಳಿ ಹಂತ ಹಂತವಾಗಿ ₹ 33.45 ಲಕ್ಷ ಹೂಡಿಕೆ ಮಾಡಿಸಿಕೊಳ್ಳಲಾಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ಹಣ ಹೂಡಿಕೆ ಮಾಡಿದ ನಂತರ ಆರೋಪಿ ಯಾವುದೇ ಲಾಭಾಂಶ ನೀಡಿರಲಿಲ್ಲ. ಮೊಬೈಲ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದ ನೊಂದ ಮಹಿಳೆ, ಠಾಣೆಗೆ ದೂರು ನೀಡಿದ್ದಾರೆ. ಮನೆಯಿಂದಲೇ ಕೆಲಸ ಮಾಡಬಹುದೆಂದು ಆಮಿಷವೊಡ್ಡಿದ್ದ ವಂಚಕರು, ಮಹಿಳೆಯನ್ನು ನಂಬಿಸಿ ಹಣ ಪಡೆದಿದ್ದಾರೆ. ಹೊರ ರಾಜ್ಯದ ವ್ಯಕ್ತಿಗಳು ಕೃತ್ಯ ಎಸಗಿರುವ ಅನುಮಾನವಿದ್ದು, ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.