ADVERTISEMENT

ರಾಣೆಬೆನ್ನೂರು | ಶೂನ್ಯ ದಾಖಲಾತಿ: ಬಾಗಿಲು ಮುಚ್ಚಿದ ಸರ್ಕಾರಿ ಕನ್ನಡ ಶಾಲೆ

ಕರ್ಲಗೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂದ್

ಪ್ರಜಾವಾಣಿ ವಿಶೇಷ
Published 15 ಡಿಸೆಂಬರ್ 2025, 2:19 IST
Last Updated 15 ಡಿಸೆಂಬರ್ 2025, 2:19 IST
ರಾಣೆಬೆನ್ನೂರು ತಾಲ್ಲೂಕಿನ ಕರ್ಲಗೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಲ್ಲದೇ ಪ್ರಸಕ್ತ ಸಾಲಿನಿಂದ ಸ್ಥಗಿತಗೊಂಡಿದ್ದು, ಅದೇ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ
ರಾಣೆಬೆನ್ನೂರು ತಾಲ್ಲೂಕಿನ ಕರ್ಲಗೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಲ್ಲದೇ ಪ್ರಸಕ್ತ ಸಾಲಿನಿಂದ ಸ್ಥಗಿತಗೊಂಡಿದ್ದು, ಅದೇ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ   

ರಾಣೆಬೆನ್ನೂರು: ರಾಜ್ಯದಾದ್ಯಂತ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸುವುದಾಗಿ ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಇದರ ನಡುವೆಯೇ, ಶೂನ್ಯ ದಾಖಲಾತಿ ಕಾರಣಕ್ಕೆ ತಾಲ್ಲೂಕಿನ ಕರ್ಲಗೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂದ್ ಆಗಿದೆ.

ಸುಮಾರು 70 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದ ಶಾಲೆ, ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಬಾಗಿಲು ಮುಚ್ಚಿದೆ. ಮಕ್ಕಳ ದಾಖಲಾತಿ ಹಾಗೂ ಶಿಕ್ಷಕರ ಕೊರತೆಯಿಂದಾಗಿ ಶಾಲೆಗೆ ಈ ಸ್ಥಿತಿ ಬಂದಿರುವ ಬಗ್ಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕರ್ಲಗೇರಿಯ ಶಾಲೆಯಲ್ಲಿ 1ನೇ ತರಗತಿಯಿಂದ 5 ನೇ ತರಗತಿವರೆಗೆ ವಿದ್ಯಾಭ್ಯಾಸಕ್ಕೆ ಅವಕಾಶವಿತ್ತು. ಇಬ್ಬರು ಶಿಕ್ಷಕರು ಕೆಲಸ ಮಾಡುತ್ತಿದ್ದರು. ವರ್ಷದಿಂದ ವರ್ಷಕ್ಕೆ ದಾಖಲಾತಿ ಕೊರತೆಯಾಗಿದ್ದರಿಂದ, ಒಬ್ಬ ಶಿಕ್ಷಕರನ್ನು ಬೇರೆಡೆ ವರ್ಗಾಯಿಸಲಾಗಗಿತ್ತು. ನಂತರ, ಒಬ್ಬರೇ ಶಿಕ್ಷಕರು ಉಳಿದುಕೊಂಡಿದ್ದರು. ಶಾಲೆ ಬಂದ್ ಆಗಿರುವುದರಿಂದ, ಒಬ್ಬ ಶಿಕ್ಷಕರನ್ನು ಇದೀಗ ಬೇರೆ ಶಾಲೆಗೆ ನಿಯೋಜಿಸಲಾಗಿದೆ.

ADVERTISEMENT

ಶಾಲೆ ಬಂದ್ ಆಗಿರುವುದರಿಂದ, ಅದೇ ಕಟ್ಟಡವನ್ನು ಅಂಗನವಾಡಿಗೆ ಬಿಟ್ಟುಕೊಡಲಾಗಿದೆ. ಶಾಲೆ ಆರಂಭವಾದಾಗಿನ ದಿನದಂದು ಅಂದವಾಗಿದ್ದ ಗೋಡೆಗಳು, ಈಗ ಅಂದ ಕಳೆದುಕೊಂಡಿವೆ. ಶಾಲೆಯಲ್ಲಿ ಕಲಿತಿರುವ ಗ್ರಾಮದ ಹಳೇ ವಿದ್ಯಾರ್ಥಿಗಳು, ಶಾಲೆ ನೆನೆದು ಮರುಕಪಡುತ್ತಿದ್ದಾರೆ.

‘ಶಾಲಾ ಆವರಣದ ಗೋಡೆ ಹಾಗೂ ಕಟ್ಟಡಕ್ಕೆ ಬಣ್ಣ ಹಚ್ಚಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಶಾಲೆ ಉಳಿಸಲು ಎಲ್ಲ ಪ್ರಯತ್ನ ಮಾಡಿದೆವು. ಆದರೆ, ವಿದ್ಯಾರ್ಥಿಗಳ ಪ್ರವೇಶ ಆಗದಿದ್ದರಿಂದ ಶಾಲೆಯನ್ನೇ ಮುಚ್ಚುವ ಪರಿಸ್ಥಿತಿ ಬಂತು’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಬುರಡೀಕಟ್ಟಿ ತಿಳಿಸಿದರು.

‘ಗ್ರಾಮದ ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮನವಿ ಮಾಡಿದೆವು. ಆದರೆ, ಯಾರೊಬ್ಬರೂ ಸೇರಿಸಲಿಲ್ಲ. ಶಿಕ್ಷಣದ ವ್ಯವಸ್ಥೆ ಸರಿ ಇಲ್ಲವೆಂದು ಗ್ರಾಮಸ್ಥರು ಹೇಳಿದರು. ಈಗ ಗ್ರಾಮದಲ್ಲಿರುವ ಸುಮಾರು 40 ಮಕ್ಕಳು, ಖಾಸಗಿ ಶಾಲೆಯತ್ತ ಮುಖ ಮಾಡಿದ್ದಾರೆ. ಕೆಲವರು, ಮಾಕನೂರಿನಲ್ಲಿರುವ ಶಾಲೆಗೆ ಹೋಗುತ್ತಿದ್ದಾರೆ’ ಎಂದು ಹೇಳಿದರು.

‘ನಾನೂ ಇದೇ ಶಾಲೆಯಲ್ಲಿ ಓದಿದ್ದೇನೆ. ಇದೇ ಶಾಲೆಯ ವಿದ್ಯಾರ್ಥಿಯಾದ ನನ್ನ ತಮ್ಮ, ಇಂದು ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ನಮ್ಮ ಕಣ್ಣೆದುರೇ ಶಾಲೆ ಮುಚ್ಚಿರುವುದನ್ನು ನೋಡಿ ದುಃಖವಾಗುತ್ತಿದೆ. ಹಳೇ ವಿದ್ಯಾರ್ಥಿಗಳ ಸಹಾಯದಿಂದ ಶಾಲೆ ಅಭಿವೃದ್ಧಿಪಡಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ರಾಣೆಬೆನ್ನೂರು ತಾಲ್ಲೂಕಿನ ಕರ್ಲಗೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಲ್ಲದೇ ಬಾಗಿಲು ಮುಚ್ಚಿದ ಶಾಲೆಯ ಹಿಂಭಾಗದ ನೋಟ.. 

ಶಾಲೆ ಉಳಿಸಲು ಮಗನ ಸೇರ್ಪಡೆ

ಕರ್ಲಗೇರಿ ಗ್ರಾಮದ ಎಲ್ಲ ಮಕ್ಕಳು ಎರಡು ವರ್ಷಗಳ ಹಿಂದೆಯೇ ಬೇರೆ ಶಾಲೆಗಳಿಗೆ ಹೋದರು. ಅಂದೇ ಶಾಲೆ ಮುಚ್ಚುವ ಬಗ್ಗೆ ಚರ್ಚೆ ನಡೆದಿತ್ತು. ಶಾಲೆ ಉಳಿಸಿಕೊಳ್ಳಲು ಮುಂದಾಗಿದ್ದ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಬುರಡೀಕಟ್ಟಿ ತಮ್ಮ ಮಗನನ್ನು ಅದೇ ಶಾಲೆಯಲ್ಲಿ ಉಳಿಸಿದ್ದರು. ಒಬ್ಬ ವಿದ್ಯಾರ್ಥಿ ಇರುವ ಕಾರಣಕ್ಕೆ ಶಾಲೆ ಉಳಿಯುತ್ತದೆ ಎಂದು ಭಾವಿಸಿದ್ದರು. ಎರಡು ವರ್ಷ ಒಬ್ಬ ಶಿಕ್ಷಕ ಹಾಗೂ ಒಬ್ಬ ವಿದ್ಯಾರ್ಥಿ ಮಾತ್ರ ಇದ್ದರು. ಯಾರಾದರೂ ಒಬ್ಬರು ರಜೆ ಹಾಕಿದರೆ ಇಡೀ ಶಾಲೆ ಬಂದ್ ಆಗುತ್ತಿತ್ತು. ಜೊತೆಗೆ ಅಧ್ಯಕ್ಷರ ಮಗನಿಗೆ ಶಾಲೆಯಲ್ಲಿ ಸ್ನೇಹಿತರು ಇರಲಿಲ್ಲ. ಒಂಟಿಯಾಗಿಯೇ ಆಟ ಆಡಬೇಕಿತ್ತು. ಪಾಠ ಕೇಳಬೇಕಿತ್ತು. ಹೀಗಾಗಿ ಮಗನನ್ನು ಬೇರೆ ಶಾಲೆಗೆ ಸೇರಿಸಿದ್ದಾರೆ. ಅಂದಿನಿಂದ ಶಾಲೆಗೆ ಯಾರೊಬ್ಬರೂ ಮಕ್ಕಳನ್ನು ಸೇರಿಸಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು. 

ತಾಲ್ಲೂಕಿನ ಕರ್ಲಗೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ದಾಖಲಾತಿ ಕಾರಣಕ್ಕಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ದಾಖಲಾತಿಗಾಗಿ ಎರಡು ವರ್ಷ ಕಾಯುತ್ತೇವೆ.
–ಶಾಮಸುಂದರ ಅಡಿಗ, ಕ್ಷೇತ್ರ ಶಿಕ್ಷಣಾಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.