ADVERTISEMENT

ಅಭ್ಯರ್ಥಿಗಳ ಪ್ರತಿನಿಧಿಗಳಿಗೆ ‘ಜಲ ನಿರೋಧಕ’ ಶೆಡ್!

‘ಸ್ಟ್ರಾಂಗ್‌ ರೂಂ’ ಮೇಲೆ ಕಣ್ಗಾವಲಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2014, 19:30 IST
Last Updated 10 ಏಪ್ರಿಲ್ 2014, 19:30 IST

ಗುಲ್ಬರ್ಗ: ಚುನಾವಣೆ ಮುಗಿದ ಬಳಿಕ ಮತ ಪೆಟ್ಟಿಗೆಗಳನ್ನು ಇರಿಸುವ ‘ಸ್ಟ್ರಾಂಗ್ ರೂಂ’ ಮೇಲೆ ಚುನಾವಣಾ ಕಣದಲ್ಲಿ­ರುವ ಅಭ್ಯರ್ಥಿಗಳ ಪ್ರತಿ­ನಿಧಿ­ಗಳು ಈ ಬಾರಿ 28 ದಿನ ಕಣ್ಗಾವಲು ಇಡಬೇಕಾಗಿದೆ!

ಮತ ಎಣಿಕೆಗೆ ಅವಧಿ ಸುದೀರ್ಘ­ವಾದ್ದರಿಂದ ಈ ಸಂದರ್ಭದಲ್ಲಿ ಪ್ರತಿನಿಧಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ‘ಸ್ಟ್ರಾಂಗ್ ರೂಂ’ ಸಮೀಪದಲ್ಲೇ ಜಲ­ನಿರೋಧಕ ಶೆಡ್ (ವಾಟರ್ ಪ್ರೂಫ್), ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಸ್ಟ್ರಾಂಗ್ ರೂಂ ದೂರವಿದ್ದರೆ ಅಥವಾ ಕಾಣದಂತಿದ್ದರೆ ಸಿ.ಸಿ ಟಿ.ವಿ ಮೂಲಕ ಸ್ಟ್ರಾಂಗ್‌ ರೂಂನ ಮುಖ್ಯ ದ್ವಾರವನ್ನು ವೀಕ್ಷಿಸುವ ವ್ಯವಸ್ಥೆಯನ್ನು ಒದಗಿಸಲು  ಚುನಾವಣಾ ಆಯೋಗ ತೀರ್ಮಾನಿಸಿದೆ.

ಮತದಾನ ಮುಗಿದ ಬಳಿಕ ಮತ ಪೆಟ್ಟಿಗೆಗಳನ್ನು ‘ಸ್ಟ್ರಾಂಗ್ ರೂಂ’ನಲ್ಲಿ ಇರಿಸಲಾಗುತ್ತಿದ್ದು, ಭದ್ರತೆ ದೃಷ್ಟಿಯಿಂದ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸ­ಲಾಗುತ್ತದೆ. ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳು­ವವ­ರೆಗೆ ಮತಪೆಟ್ಟಿಗಳ ಮೇಲೆ ಅಭ್ಯರ್ಥಿಗಳ ಪ್ರತಿನಿಧಿಗಳು ಕಣ್ಣಿಡಬಹುದು.

ಏನಿದು ಸ್ಟ್ರಾಂಗ್‌ ರೂಂ: ಚುನಾವಣೆ ಮುಗಿದ ಬಳಿಕ ವಿದ್ಯುನ್ಮಾನ ಮತಯಂತ್ರಗಳನ್ನು ಇರಿಸುವ ಕೊಠಡಿಯೇ ಸ್ಟ್ರಾಂಗ್ ರೂಂ. ಇದಕ್ಕೆ ಭಾರಿ ಭದ್ರತೆ ಒದಗಿಸಲಾ­ಗುತ್ತದೆ. 2013ರ ವಿಧಾನಸಭೆ ಚುನಾ­ವಣೆಯಿಂದ ಅಭ್ಯರ್ಥಿಗಳ ಪ್ರತಿನಿಧಿಗಳಿಗೆ ಅಥವಾ ಅವರು ಸೂಚಿಸುವವರಿಗೆ ಸ್ಟ್ರಾಂಗ್‌ ರೂಂನ ಸಮೀಪ­ದಲ್ಲೇ ಶೆಡ್ ನಿರ್ಮಿಸಿ ಕೊಡಲಾಗುತ್ತಿದೆ.

‘ಸ್ಟ್ರಾಂಗ್ ರೂಂಗೆ ಒಂದೇ ಬಾಗಿಲು ಇರಬೇಕು. ಬೆಂಕಿ, ಪ್ರವಾಹದಂತಹ ಪ್ರಕೃತಿ ವಿಕೋಪಗಳಿಂದ ತೊಂದರೆ ಆಗದಂತಿರುವ ಸ್ಥಳವನ್ನೇ ಆಯ್ಕೆ ಮಾಡಿ­ಕೊಳ್ಳ­ಬೇಕು. 24X7 ಗಂಟೆ ಕಾರ್ಯನಿರ್ವಹಿ­ಸುವ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಬೇಕು. 24X7 ಭದ್ರತೆ­ಗಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿ­ಎಫ್) ಸಿಬ್ಬಂದಿಯನ್ನು ನಿಯೋಜಿಸಬೇಕು’ ಎಂದು ಭಾರತೀಯ ಚುನಾವಣಾ ಆಯೋಗದ ಕಾರ್ಯ­ದರ್ಶಿ  ಸುಮಿತ್ ಮುಖರ್ಜಿ ಏ. 5 ರಂದು ಹೊರಡಿಸಿ­ರುವ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

‘ಸ್ಟ್ರಾಂಗ್ ರೂಂ ಮೇಲೆ ನಿಗಾ ಇಡಲು ಪ್ರತಿನಿಧಿ­ಗಳ ಹೆಸರು ಸೂಚಿಸು­ವಂತೆ ಚುನಾವಣಾ ಕಣದಲ್ಲಿ­ರುವ ಎಲ್ಲ ಅಭ್ಯರ್ಥಿಗಳಿಗೆ ಮೊದಲೇ ಸೂಚಿಸ­ಲಾಗು­ತ್ತದೆ. ಸ್ಟ್ರಾಂಗ್ ರೂಂನ ಪ್ರವೇಶ ದ್ವಾರ ಕಾಣುವ ಹಾಗೆ ಶೆಡ್‌ಗಳನ್ನು ನಿರ್ಮಿಸಲಾಗುತ್ತದೆ. ಅಲ್ಲದೇ, ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ­ನಿರ್ವಾಹಕ ಅಧಿಕಾರಿ, ರಿಟರ್ನಿಂಗ್ ಆಫೀಸರ್‌ ಸೇರಿದಂತೆ ಪ್ರಮುಖ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನು ಅಭ್ಯರ್ಥಿಗಳು ಹಾಗೂ ಅವರು ಸೂಚಿಸಿರುವ ಪ್ರತಿನಿಧಿಗಳಿಗೆ ನೀಡಲಾಗು­ತ್ತದೆ. ಯಾವುದೇ ಸಂದರ್ಭದಲ್ಲಿ ಅವರು ಅಧಿಕಾರಿ­ಗಳಿಗೆ ದೂರು ನೀಡಬಹುದಾಗಿದೆ’ ಎಂದಿದ್ದಾರೆ.

ಮೇ 16ರಂದು ಎಣಿಕೆ: ಏ. 17 ರಂದು ಬೆಳಿಗ್ಗೆ 7 ರಿಂದ ಸಂಜೆ 6ರ ವರೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 16ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಅಲ್ಲಿಯವ­ರೆಗೂ ಪ್ರತಿನಿಧಿಗಳು ‘ಸ್ಟ್ರಾಂಗ್‌ ರೂಂ’ ಮೇಲೆ ಕಣ್ಗಾವಲು ಇರಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.