ADVERTISEMENT

ಆರ್ಯನಗರ; ಸಮಸ್ಯೆಗಳ ಆಗರ

ಪಾಲಿಕೆ ನಿರ್ಲಕ್ಷ್ಯ; ಕ್ರಮಕ್ಕೆ ನಿವಾಸಿಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಮೇ 2018, 6:16 IST
Last Updated 19 ಮೇ 2018, 6:16 IST
ಕಲಬುರ್ಗಿಯ ವಾರ್ಡ್ ಸಂಖ್ಯೆ 8ರ ಆರ್ಯ ನಗರದ ರಸ್ತೆಯೊಂದರ ಮೇಲೆ ಚರಂಡಿ ನೀರು ಹರಿಯುತ್ತಿರುವುದು ಗುರುವಾರ ಕಂಡು ಬಂತು
ಕಲಬುರ್ಗಿಯ ವಾರ್ಡ್ ಸಂಖ್ಯೆ 8ರ ಆರ್ಯ ನಗರದ ರಸ್ತೆಯೊಂದರ ಮೇಲೆ ಚರಂಡಿ ನೀರು ಹರಿಯುತ್ತಿರುವುದು ಗುರುವಾರ ಕಂಡು ಬಂತು   

ಕಲಬುರ್ಗಿ: ಎಪಿಎಂಸಿ ಹಿಂಭಾಗದ ವಾರ್ಡ್‌ ಸಂಖ್ಯೆ 8ರ ಆರ್ಯ ನಗರ ಮತ್ತು ಸಂಜೀವ ನಗರಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಆ ಬಡಾವಣೆಯಲ್ಲಿನ ಸುಮಾರು 8 ಸಾವಿರಕ್ಕೂ ಅಧಿಕ ನಿವಾಸಿಗಳು ಬವಣೆ ಪಡುವಂತಾಗಿದೆ.

ಈ ಬಡಾವಣೆಯ ಬಹುತೇಕ ಕಡೆ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಮಕ್ಕಳು, ವಿದ್ಯಾರ್ಥಿಗಳು ಮತ್ತು ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

‘ನಮ್ಮ ನಗರಕ್ಕೆ ಭೀಮಾನದಿಯಿಂದ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಆದರೆ 8–10 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಇದರಿಂದ ನೀರಿಗೆ ಪ್ರತಿನಿತ್ಯ ಪರದಾಡಬೇಕಾಗಿದೆ. ಸ್ವಚ್ಛತೆ ಬಗ್ಗೆಯೂ ಪಾಲಿಕೆ ಕಾಳಜಿ ವಹಿಸುತ್ತಿಲ್ಲ. ಚರಂಡಿಗಳು ಕಸದಿಂದ ತುಂಬಿದ್ದರೂ ಪಾಲಿಕೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ’ ಎಂದು ಆರ್ಯ ನಗರ ನಿವಾಸಿ ಮಲ್ಲಮ್ಮ ಡೋಲಾರಿ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಚರಂಡಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ್ದರಿಂದ ರಸ್ತೆ ಮೇಲೆ ಹರಿಯುತ್ತಿದೆ. ಸಂಜೆ ಹೊತ್ತು ಸೊಳ್ಳೆಗಳ ಕಾಟ ಹೇಳತೀರದು. ಇದರಿಂದ ಡೆಂಗಿ, ಮಲೇರಿಯಾದಂತಹ ಕಾಯಿಲೆ ಹರಡುವ ಭೀತಿ ಎದುರಾಗಿದೆ. ಮಕ್ಕಳನ್ನು ಆಟಕ್ಕೆ ಕಳುಹಿಸಲು ಭಯಪಡುವಂತಾಗಿದೆ’ ಎಂದು ಆತಂಕದಿಂದಲೇ ಹೇಳಿದರು.

‘ನಗರದಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿಲ್ಲ. ಹೀಗಾಗಿ ಬಹಿರ್ದೆಸೆ ಅನಿವಾರ್ಯವಾಗಿದೆ. ಮಹಿಳೆಯರು ನಸುಕಿನಲ್ಲಿ ಇಲ್ಲವೆ ಕತ್ತಲಾದ ಬಳಿಕ ಶೌಚಕ್ಕೆ ಹೋಗುವ ದುಸ್ಥಿತಿ ಇದೆ. ಮಳೆಗಾಲದಲ್ಲಿ ನಮ್ಮ ಪಾಡು ಹೇಳತೀರದು’ ಎಂದು ಸಂಜೀವ ನಗರದ ನಿವಾಸಿ ಪಾರ್ವತಿ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟರು.

‘ದಿನಗೂಲಿ ನಂಬಿಕೊಂಡವರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ವಾಸವಾಗಿದ್ದಾರೆ. ಕಳೆದ ಬಾರಿ 6 ಮಕ್ಕಳು ಡೆಂಗಿ ಜ್ವರದಿಂದ ಬಳಲಿದ್ದವು. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಪಾಲಿಕೆ ಸದಸ್ಯ ರಾಜು ಕಪನೂರ ಅವರ ಗಮನಕ್ಕೆ ತಂದರು ಪ್ರಯೋಜನವಾಗಲಿಲ್ಲ’ ಎಂದು ಪ್ರಕಾಶ್ ಆರ್.ಡಿ. ನೊಂದು ಹೇಳಿದರು.

‘ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾದರೂ ನಿರೀಕ್ಷಿತ ಅಭಿವೃದ್ಧಿ ಆಗುತ್ತಿಲ್ಲ’ ಎಂದು ಅವರು ಆರೋಪಿಸಿದರು.

‘ನಮ್ಮ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಸಾರ್ವಜನಿಕ ಶೌಚಾಲಯ ನಿರ್ಮಾಣ ಸೇರಿ ಮೂಲ ಸೌಕರ್ಯ ಒದಗಿಸಬೇಕು. ರಾತ್ರಿ ಹೊತ್ತಿನಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಬೇಕು’ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

**
ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಯಾವುದೇ ಕಾರ್ಯ ಕೈಗೊಂಡಿಲ್ಲ. ಅನೇಕ ದೂರುಗಳು ಬಂದಿವೆ. ಪಾಲಿಕೆ ಸದಸ್ಯರೊಡನೆ ಎಲ್ಲ ಬಡಾವಣೆಗಳಿಗೆ ಭೇಟಿ ನೀಡುತ್ತೇನೆ
- ಶರಣು ಮೋದಿ, ಮೇಯರ್‌, ಮಹಾನಗರ ಪಾಲಿಕೆ 

ಅಕ್ಷಯ್ ಊರಮುಂದಿನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.