ADVERTISEMENT

ಈದ್ ಉಲ್ ಫಿತ್ರ್ ಸಂಭ್ರಮ

ಶ್ರದ್ಧಾ ಭಕ್ತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 8:03 IST
Last Updated 17 ಜೂನ್ 2018, 8:03 IST

ಕಲಬುರ್ಗಿ: ಈದ್ ಉಲ್ ಫಿತ್ರ್ ಹಬ್ಬದ ಅಂಗವಾಗಿ ನಗರದ ಸೇಡಂ ರಸ್ತೆ ಹಾಗೂ ತಾಲ್ಲೂಕಿನ ಹಾಗರಗಾ ಗ್ರಾಮದಲ್ಲಿರುವ ಈದ್ಗಾ ಮೈದಾನದಲ್ಲಿ ಶನಿವಾರ ಬೆಳಿಗ್ಗೆ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಬೆಳಿಗ್ಗೆ ಶ್ವೇತವಸ್ತ್ರಗಳನ್ನು ಧರಿಸಿಕೊಂಡು ಈದ್ಗಾ ಮೈದಾನದಲ್ಲಿ ಜಮಾವಣೆಗೊಂಡರು. ಧಾರ್ಮಿಕ ಗುರುಗಳು ಕುರಾನ್ ಪಠಿಸಿದರು. ಇದಾದ ಬಳಿಕ ಎಲ್ಲರೂ ಶ್ರದ್ಧಾ ಭಕ್ತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ತಮ್ಮ ಕೈಲಾದಷ್ಟು ದಾನ ಮಾಡಿದರು. ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ತಮ್ಮ ಓರಗೆಯವರಿಗೆ ಶುಭಾಶಯ ಕೋರಿದರು.

ರಂಜಾನ್ ಹಬ್ಬದ ಅಂಗವಾಗಿ ಒಂದು ತಿಂಗಳು ರೋಜಾ (ಉಪವಾಸ) ಕೈಗೊಂಡಿದ್ದರು. ಈದ್ ಉಲ್ ಫಿತ್ರ್ ಮುನ್ನಾ ದಿನವಾದ ಶುಕ್ರವಾರ ಚಂದ್ರ ದರ್ಶನದೊಂದಿಗೆ ಉಪವಾಸ ಮುಕ್ತಾಯಗೊಳಿಸಿದರು. ಮಹಿಳೆಯರು ತಮ್ಮ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿ, ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ಹಬ್ಬದ ಅಂಗವಾಗಿ ಚಿಕ್ಕ ಮಕ್ಕಳು ಸೇರಿದಂತೆ ಎಲ್ಲರೂ ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು.

ADVERTISEMENT

ಇದಾದ ಬಳಿಕ ಬಂಧು ಬಾಂಧವರು, ಸ್ನೇಹಿತರನ್ನು ಮನೆಗಳಿಗೆ ಆಹ್ವಾನಿಸಿ ಅವರೊಂದಿಗೆ ಊಟ ಸವಿದರು. ಸಂಜೆ ಮನೆ ಮನೆಗಳಿಗೆ ತೆರಳಿ ಶೀರ್‌ಕುರ್ಮಾ (ಸುರಕುಂಬಾ) ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.