ADVERTISEMENT

ಓದಿನಲ್ಲಿ ಮುಂದೆ, ಕ್ರೀಡೆಯಲ್ಲಿ ಪ್ರಾಬಲ್ಯ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2016, 11:25 IST
Last Updated 17 ಆಗಸ್ಟ್ 2016, 11:25 IST
ಓದಿನಲ್ಲಿ ಮುಂದೆ, ಕ್ರೀಡೆಯಲ್ಲಿ ಪ್ರಾಬಲ್ಯ
ಓದಿನಲ್ಲಿ ಮುಂದೆ, ಕ್ರೀಡೆಯಲ್ಲಿ ಪ್ರಾಬಲ್ಯ   

ಬಸವಕಲ್ಯಾಣ: ತಾಲ್ಲೂಕಿನ ಮುಡ­ಬಿಯ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಕ್ರೀಡೆಯಲ್ಲಿ ದಶಕದಿಂದ ಸತತವಾಗಿ ರಾಜ್ಯಮಟ್ಟಕ್ಕೆ ಆಯ್ಕೆ ಆಗುತ್ತಿದ್ದಾರೆ. ಆವರಣದಲ್ಲಿ ಗಿಡ, ಹುಲ್ಲು, ಬಳ್ಳಿ ಬೆಳೆಸಿದ್ದರಿಂದ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದ್ದು ಇದಕ್ಕಾಗಿ ಜಿಲ್ಲಾ ಮಟ್ಟದ ಪ್ರಶಸ್ತಿ ದೊರೆತಿದೆ.

ಆಟದಲ್ಲಿ ಉತ್ತಮ ಪ್ರದರ್ಶನ ತೋರುವುದರೊಂದಿಗೆ ವಿದ್ಯಾಭ್ಯಾಸದ­ಲ್ಲಿಯೂ ಇಲ್ಲಿನ ಮಕ್ಕಳು ಮುಂದಿದ್ದಾರೆ. ಶಾಲಾ ಪರಿಸರವೂ ಉತ್ತಮವಾಗಿದೆ ಎಂದು ಶಿಕ್ಷಣ ಸಂಯೋಜಕ ರವೀಂದ್ರ ಬಿರಾದಾರ ಶ್ಲಾಘಿಸಿದ್ದಾರೆ.

ತಾಲ್ಲೂಕಿನಲ್ಲಿಯೇ ಮೊದಲು ಆರಂಭವಾದ ಶಾಲೆಯಿದು. ಗ್ರಾಮದ ಗೋಪಾಲರಾವ ಪಾಟೀಲ ಅವರು ಶಾಸಕರಾಗಿದ್ದಾಗ 60 ವರ್ಷಗಳ ಹಿಂದೆ ಪ್ರೌಢಶಾಲೆ ಸ್ಥಾಪಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 130ರಲ್ಲಿ 114 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ 87.7 ರಷ್ಟು ಫಲಿತಾಂಶ ಬಂದಿದೆ. ಮಂಜುನಾಥ ಶೇ 92.16 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.

ಏಳು ವಿದ್ಯಾರ್ಥಿಗಳು ಅಗ್ರಶ್ರೇಣಿ ಮತ್ತು 63 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ­ದ್ದಾರೆ. ಇಲ್ಲಿನ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರೀಯ ಪ್ರತಿಭಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿಷ್ಯವೇತನ ಪಡೆದಿದ್ದಾರೆ. ಕ್ವಿಜ್‌ನಲ್ಲಿ ವಿನಾಯಕ ವಿಠಲ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದರು ಎಂದು ಮುಖ್ಯ ಶಿಕ್ಷಕ ಬಸವರಾಜ ರೋಹಿಲೆ ತಿಳಿಸಿದ್ದಾರೆ.

ಒಟ್ಟು 12 ಕೋಣೆಗಳಿದ್ದು, 370 ವಿದ್ಯಾರ್ಥಿಗಳಿದ್ದಾರೆ. ತರಗತಿಗಳನ್ನು ಎ ಮತ್ತು ಬಿ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಗಣಿತ ಮತ್ತು ಕನ್ನಡ ಶಿಕ್ಷಕರ ಕೊರತೆಯಿದೆ. ಕಲಿಸುವವ­ರಿಲ್ಲದೆ ಕಂಪ್ಯೂಟರ್ ಹಾಳಾಗಿವೆ. ಬಿಸಿಯೂಟದ ವ್ಯವಸ್ಥೆ ಇದೆ. ಆದರೆ ಕುಡಿಯುವ ನೀರಿನ ಸೌಲಭ್ಯ ಇಲ್ಲದೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.

‘ಭಾರತ ಸೇವಾದಳ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳಿವೆ. ಒಟ್ಟು 33 ವಿದ್ಯಾರ್ಥಿಗಳು ಇದರ ಸದಸ್ಯರಾಗಿ­ದ್ದಾರೆ. ಅವರಿಗೆ ತರಬೇತಿ ನೀಡುವುದ­ರಿಂದ ಮಕ್ಕಳು ಯಾವಾಗಲೂ ಶಿಸ್ತಿನಿಂದ ಇರಲು ಸಾಧ್ಯ’ ಎಂದು ಶಿಕ್ಷಕ ಜಿ.ಎಸ್.ಮಾಲಿಬಿರಾದಾರ ಹೇಳುತ್ತಾರೆ.

ಶಾಲಾ ಆವರಣದಲ್ಲಿನ ಕೈತೋಟದಲ್ಲಿ 20ಕ್ಕೂ ಹೆಚ್ಚು ಔಷಧಿ ಸಸ್ಯಗಳಿವೆ. 60 ವಿವಿಧ ಜಾತಿಯ ಗಿಡಗಳಿವೆ. ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ್ದ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನದಲ್ಲಿ ಎರಡು ಬಾತಿ ಪ್ರಥಮ ಪುರಸ್ಕಾರ ದೊರೆತಿದೆ. ಒಂದು ಸಲ ರಾಜ್ಯಮಟ್ಟದಲ್ಲಿ ಸಮಾಧಾನಕರ ಬಹುಮಾನ ನೀಡಲಾಗಿದೆ. ಪ್ರತಿಭಾ ಕಾರಂಜಿಯಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಪಲ್ಲವಿ ವಿಜಯಕುಮಾರ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದರು ಎನ್ನುತ್ತಾರೆ ಅವರು.

2006 ರಿಂದ ಪ್ರತಿವರ್ಷ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಜ್ಯ­ಮಟ್ಟಕ್ಕೆ ಆಯ್ಕೆಯಾಗುತ್ತಿದ್ದಾರೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಶಿವಪುತ್ರ ಬೀರಗೊಂಡ ತಿಳಿಸಿದರು. ರಾಮ­ಮೋಹನಚಂದ್ರ ಕೊಕ್ಕೊದಲ್ಲಿ, 5 ಕಿ.ಮೀ ನಡಿಗೆಯಲ್ಲಿ ರಮೇಶ ಉಮೇಶ ಐದು ಬಾರಿ ರಾಜ್ಯಮಟ್ಟಕ್ಕೆ ಆಯ್ಕೆ­ಗೊಂಡಿದ್ದರು. ನಂತರದಲ್ಲಿ ಗುಂಡು ಎಸೆತದಲ್ಲಿ ಸಂತೋಷ ಪಾಂಡುರಂಗ, ಉದ್ದ ಜಿಗಿತದಲ್ಲಿ ಶ್ರಾವಣ ಬಸವರಾಜ, ಸುನಿತಾ, ಓಟ, ಕುಸ್ತಿಯಲ್ಲಿ ಲೋಕೇಶ ಗೋರಖನಾಥ, ರಮೇಶ ಕುಪ್ಪಣ್ಣ, ವಿಕಾಸ ಮೋತಿರಾಮ, ಆನಂದ ಮಾಣಿಕಪ್ಪ, ಶಿವಕುಮಾರ ಷಣ್ಮುಖಪ್ಪ, ನಾಗೇಂದ್ರ ಬಾಬುರಾವ, ಅಂಬಣ್ಣ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದರು ಎಂದಿದ್ದಾರೆ.

ಇಲ್ಲಿನ ಆವರಣಗೋಡೆಗೆ ಗೇಟ್ ಇಲ್ಲದ್ದರಿಂದ ಹಂದಿ, ನಾಯಿ ಒಳನುಗ್ಗುತ್ತಿವೆ. ಸಂಬಂಧಿತರು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರು ಆಗ್ರಹ.
- ಮಾಣಿಕ ಆರ್.ಭುರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.