ADVERTISEMENT

ಖರೀದಿ ಕೇಂದ್ರ ಸ್ಥಗಿತ: ರೈತರ ಪರದಾಟ

ಜಿಲ್ಲಾಡಳಿತ ವಿಫಲ: ನಾಕೇದಾರ ಆರೋಪ

ಶಿವಾನಂದ ಹಸರಗುಂಡಗಿ
Published 7 ಮಾರ್ಚ್ 2018, 10:47 IST
Last Updated 7 ಮಾರ್ಚ್ 2018, 10:47 IST
–ಸೂರ್ಯಕಾಂತ ನಾಕೇದಾರ, ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ
–ಸೂರ್ಯಕಾಂತ ನಾಕೇದಾರ, ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ   

ಅಫಜಲಪುರ: ತಾಲ್ಲೂಕಿನಲ್ಲಿ 20ಕ್ಕೂ ಹೆಚ್ಚು ತೊಗರಿ ಖರೀದಿ ಕೇಂದ್ರಗಳು ಆರಂಭಿಸಲಾಗಿದೆ. ಆದರೆ, ಒಂದಿಲ್ಲ ಒಂದು ಕಾರಣದಿಂದ ಕಳೆದ ತಿಂಗಳಿಂದ ತೊಗರಿ ಖರೀದಿ ಕೇಂದ್ರಗಳು ಸ್ಥಗಿತವಾಗಿದ್ದು, ರೈತರು ತೊಗರಿ ಮಾರಾಟಕ್ಕಾಗಿ ತೊಗರಿ ಸಮೇತ ಖರೀದಿ ಕೇಂದ್ರದ ಮುಂದೆ ಬಿಡಾರ ಹೂಡಿದ್ದಾರೆ.

ತೊಗರಿ ಖರೀದಿ ಕೇಂದ್ರಗಳು ಅದ್ಧೂರಿಯಾಗಿ ಆರಂಭವಾದವು. ಆದರೆ, ಅವು ಸ್ಥಗಿತವಾಗಿದ್ದು, ರೈತರು ತೊಗರಿ ಮಾರಾಟಕ್ಕಾಗಿ ಪರದಾಡುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಕ್ವಿಂಟಲ್‌ ತೊಗರಿಗೆ ₹3,900 ಇದ್ದು, ಖರೀದಿ ಕೇಂದ್ರದಲ್ಲಿ ಕ್ವಿಂಟಲ್‌ ತೊಗರಿಗೆ ₹6 ಸಾವಿರವಿದೆ. ಹೀಗಾಗಿ ರೈತರು ಖರೀದಿ ಕೇಂದ್ರಗಳಲ್ಲಿ ತೊಗರಿ ಮಾರಾಟ ಮಾಡಲು ಮುಗಿಬಿದ್ದಿದ್ದಾರೆ.

ಅವರು ತೊಗರಿ ಖರೀದಿ ಕೇಂದ್ರದ ಅವ್ಯವಸ್ಥೆ ಬಗ್ಗೆ ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸೂರ್ಯಕಾಂತ ನಾಕೇದಾರ ಮಾತನಾಡಿ, ‘ಸರ್ಕಾರಕ್ಕೆ ಕಳೆದ ವರ್ಷ ಎಷ್ಟು ಟನ್‌ ತೊಗರಿ ಖರೀದಿ ಮಾಡಲಾಗಿದೆ ಮತ್ತು ಪ್ರಸ್ತುತ ವರ್ಷ ರೈತರು ಎಷ್ಟು ಟನ್ ತೊಗರಿ ಬೆಳೆದಿದ್ದಾರೆ ಎಂಬ ಮಾಹಿತಿಯಿದೆ. ಆ ಪ್ರಕಾರವಾಗಿ ಜಿಲ್ಲಾಡಳಿತ ಪೂರ್ವ ತಯಾರಿ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ತೊಗರಿ ಖರೀದಿ ಕೇಂದ್ರದಲ್ಲಿ ಎಲ್ಲವೂ ಸರಿಯಿಲ್ಲ. ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿದ ರೈತರ ತೊಗರಿ ಖರೀದಿಯಾಗುತ್ತಿಲ್ಲ. ಕೆಲವು ಕಡೆ ಖಾಲಿ ಚೀಲಗಳ ಅಭಾವ ಕಾಡುತ್ತಿದ್ದು, ಪಕ್ಷಪಾತ ಮಾಡುತ್ತಿರುವು ದರಿಂದ ತೊಗರಿ ಖರೀದಿಯಾಗುತ್ತಿಲ್ಲ’ ಎಂದು ದೂರಿದರು.

ಈ ಕುರಿತು ತೊಗರಿ ಕೇಂದ್ರದಲ್ಲಿ ತೊಗರಿ ಮಾರಾಟಕ್ಕೆ ತಂದಿರುವ ಅಫಜಲಪುರ ಚಂದ್ರಶೇಖರ ಎನ್‌.ಕರಜಗಿ, ವಿಜಯಕುಮಾರ ಪಾಟೀಲ ಮಾಹಿತಿ ನೀಡಿ, ‘ನಾವು ತಿಂಗಳಿಂದ ತೊಗರಿ ಮಾರಾಟಕ್ಕೆ ಖರೀದಿ ಕೇಂದ್ರದ ಮುಂದೆ ಚೀಲ ಇಟ್ಟು ಕಾಯುತ್ತಿದ್ದೇವೆ. ಇನ್ನೂವರೆಗೂ ನಮ್ಮ ತೊಗರಿ ಖರೀದಿ ಮಾಡುತ್ತಿಲ್ಲ. ಯಾರನ್ನೂ ಕೇಳಿದರೂ ಏನೂ ಹೇಳುತ್ತಿಲ್ಲ. ಸಾಕಷ್ಟು ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ಅವರಿಗೆ ಸಾಲ ತೀರಿಸಬೇಕಾಗಿದೆ. ಬಡ್ಡಿ ಬೆಳೆಯುತ್ತಿದೆ’ ಎಂದು ಅಲವತ್ತುಕೊಂಡರು.

**

ತೊಗರಿ ಖರೀದಿ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ತಿಂಗಳಿಂದ ಖರೀದಿ ಸ್ಥಗಿತವಾಗಿದೆ. ರೈತರ ಗೋಳನ್ನು ಯಾರೂ ಕೇಳುತ್ತಿಲ್ಲ.

–ಸೂರ್ಯಕಾಂತ ನಾಕೇದಾರ, ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.