ADVERTISEMENT

ಗ್ರಾಮಸ್ಥರಿಂದ ಕಂಪೆನಿಯ ಭದ್ರತಾ ಕೊಠಡಿಗೆ ಬೆಂಕಿ, ಲಾಠಿ ಪ್ರಹಾರ

ಒರಿಯಂಟ್ ಕಂಪೆನಿಯಲ್ಲಿ ವಿದ್ಯುತ್ ತಗುಲಿ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 10:16 IST
Last Updated 12 ಅಕ್ಟೋಬರ್ 2017, 10:16 IST

ಚಿತ್ತಾಪುರ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಇಟಗಾ ಗ್ರಾಮದ ಬಳಿ ಇರುವ ಒರಿಯೆಂಟ್ ಸಿಮೆಂಟ್ ಕಂಪೆನಿಯಲ್ಲಿ ಬುಧವಾರ ವಿದ್ಯುತ್ ತಂತಿ ತಗುಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.

ವಿಷಯ ತಿಳಿದ ಸ್ಥಳೀಯರು ಕಂಪೆನಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರಿಂದ ಪೊಲೀಸರು ಲಾಠಿ ಪ್ರಹಾರ ಮಾಡಿದರು. ಇದಕ್ಕೆ ಪ್ರತಿಯಾಗಿ ಗ್ರಾಮಸ್ಥರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ನಂತರ ಕಂಪೆನಿಯ ರಕ್ಷಣಾ ಗೇಟ್‌ ಬಳಿಯ ಭದ್ರತಾ ಸಿಬ್ಬಂದಿಯ ಕೊಠಡಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತವಾರಣ ನಿರ್ಮಾಣಗೊಂಡಿದೆ.

ಕಂಪೆನಿಯ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯ ಮೋನಪ್ಪ ಹಣಮಂತ ಡಿಗ್ಗಿ (33), ಮಹೇಶ ಹಣಮಂತ ಬಟಗಿರಿ (20) ಮೃತಪಟ್ಟವರು. ಬಂಕ್‌ ಪಕ್ಕದ ಟ್ಯಾಂಕ್‌ನಲ್ಲಿನ ನೀರು ಹೊರ ಚೆಲ್ಲಲು ಇವರಿಬ್ಬರೂ ಇಳಿದಾಗ ವಿದ್ಯುತ್ ತಂತಿ ತಗುಲಿದೆ.

ADVERTISEMENT

ಕಾರ್ಮಿಕರು ಮೃತಪಟ್ಟಿರುವ ಸುದ್ದಿ ತಿಳಿದ ಇಟಗಾ ಹಾಗೂ ಅಕ್ಕಪಕ್ಕದ ಗ್ರಾಮಗಳ ಜನರು ಕೆಲಸದಲ್ಲಿ ನಿರತರಾಗಿದ್ದ ಕೆಲವು ಅಧಿಕಾರಿಗಳನ್ನು ಥಳಿಸಿದರು. ಬಳಿಕ ಗ್ರಾಮದ ಹನುಮಾನ ಮಂದಿರದಲ್ಲಿ 15 ಜನರನ್ನು ಕೂಡಿ ಹಾಕಿದರು. ಆಗ ಸ್ಥಳದಲ್ಲಿದ್ದ ಪೊಲೀಸರು ಮತ್ತೆ ಲಾಠಿ ಪ್ರಹಾರ ಮಾಡಿದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಕಂಪೆನಿಯ ರಕ್ಷಣಾ ಗೇಟ್ ಬಳಿಯ ಭದ್ರತಾ ಸಿಬ್ಬಂದಿ ಕೊಠಡಿಗೆ ಬೆಂಕಿ ಹಚ್ಚಿದರು. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, ವಾಹನಗಳತ್ತ ಮನಬಂದಂತೆ ಕಲ್ಲು ತೂರಾಟ ನಡೆಸಿದರು.

ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.