ADVERTISEMENT

ಚಿಂಚೋಳಿ: 66 ಸೂಕ್ಷ್ಮ ಮತಗಟ್ಟೆ

​ಪ್ರಜಾವಾಣಿ ವಾರ್ತೆ
Published 12 ಮೇ 2018, 5:25 IST
Last Updated 12 ಮೇ 2018, 5:25 IST

ಚಿಂಚೋಳಿ: ಇಲ್ಲಿನ ಚಂದಾಪುರದ ಸರ್ಕಾರಿ ಪಿಯು ಕಾಲೇಜಿನ ಮಸ್ಟರಿಂಗ್‌ ಕೇಂದ್ರದಿಂದ ಸಿಬ್ಬಂದಿ ಶುಕ್ರವಾರ ಮತಗಟ್ಟೆಗಳಿಗೆ  ತೆರಳಿದರು.

ಚುನಾವಣೆ ಸಾಮಗ್ರಿ, ಮತಯಂತ್ರ ಮತ್ತು ವಿವಿಪ್ಯಾಟ್‌, ಸೂಚನಾ ಫಲಕದೊಂದಿಗೆ ಚುನಾವಣಾ ಸಿಬ್ಬಂದಿ ತೆರಳಿದರು. ಪ್ರತಿಗಟ್ಟೆಗೆ ಚುನಾವಣೆ ಕಾರ್ಯಕ್ಕೆ 6 ಜನರಂತೆ ಸಿಬ್ಬಂದಿ ನಿಯೋಜಿಸಲಾಗಿದೆ. ಬಂದೋಬಸ್ತ್‌ಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಚುನಾವಣಾಧಿಕಾರಿ ಸಂತೋಷ ಸಪ್ಪಂಡಿ ತಿಳಿಸಿದರು.

ಕ್ಷೇತ್ರದಲ್ಲಿ ಒಟ್ಟು 1,93590 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 241 ಮತಗಟ್ಟೆಗಳಲ್ಲಿ 66 ಸೂಕ್ಷ್ಮ, 35 ಅತಿ ಸೂಕ್ಷ್ಮ , ಹಾಗೂ 140 ಸಾಮಾನ್ಯ ಮತಗಟ್ಟೆಗಳಿವೆ. ರಾಜಕೀಯವಾಗಿ ಅಹಿತಕರ
ಘಟನೆ ನಡೆದ 4 ಮತಗಟ್ಟೆ ಹಾಗೂ ಒಂದೇ ಅಭ್ಯರ್ಥಿಗೆ  ಶೇ 75ಕ್ಕಿಂತ ಅಧಿಕ ಮತಗಳು ಲಭಿಸಿದ 40 ಮತಗಟ್ಟೆಗಳನ್ನು ಕ್ರಿಟಿಕಲ್ ಎಂದು ಗುರುತಿಸಲಾಗಿದೆ ಎಂದು ಡಿವೈಎಸ್ಪಿ ಯು.ಶರಣಪ್ಪ ತಿಳಿಸಿದರು.

ADVERTISEMENT

ಇಲ್ಲಿನ ಮಸ್ಟರಿಂಗ್‌ ಕಟ್ಟಡದಲ್ಲಿಯೇ ಇರುವ ಪಿಂಕ್‌ ಮತಗಟ್ಟೆಗೆ ಜಿಲ್ಲಾಧಿಕಾರಿ ವೆಂಕಟೇಶಕುಮಾರ ಭೇಟಿ ನೀಡಿ ಪರಿಶೀಲಿಸಿದರು. ಚುನಾವಣಾಧಿಕಾರಿ ಸಂತೋಷ ಸಪ್ಪಂಡಿ, ಸಹಾಯಕ ಚುನಾವಣಾಧಿಕಾರಿ ಪರಿಮಳಾ ದೇಶಪಾಂಡೆ, ಉಪವಿಭಾಗಾಧಿಕಾರಿ ಬಲರಾಮ, ಮಲ್ಲಿಕಾರ್ಜುನ ಪಾಲಾಮೂರ ಇದ್ದರು.

ಸುಟ್ಟು ಹೋದ ಶಾಮಿಯಾನ: ಇಲ್ಲಿನ ಮಸ್ಟರಿಂಗ್‌ ಕೇಂದ್ರದಲ್ಲಿ ಶುಕ್ರವಾರ ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿಹೊತ್ತಿಕೊಂಡು ಶಾಮಿಯಾನ ಸುಟ್ಟಿದೆ. ಶಾಮಿಯಾನದ ಕಟ್ಟಿಗೆಗಳು ಹಾಗೂ ಕೆಲವು ಡೆಸ್ಕ್‌ಗಳು ಸುಟ್ಟಿವೆ. ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ಬೆಂಕಿ ನಂದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.