ADVERTISEMENT

ಜಮೀನು ಖರೀದಿಯಲ್ಲಿ ಅವ್ಯವಹಾರ: ಆರೋಪ

ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ

​ಪ್ರಜಾವಾಣಿ ವಾರ್ತೆ
Published 2 ಜುಲೈ 2018, 12:52 IST
Last Updated 2 ಜುಲೈ 2018, 12:52 IST

ಕಲಬುರ್ಗಿ: ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗಪ್ಪ ಹೊನ್ನಳ್ಳಿ ಅವರು ಕುಸನೂರ ಗ್ರಾಮದ ಸರ್ವೆ ನಂ. 181/1 ಮತ್ತು 181/3ರಲ್ಲಿ 25 ಎಕರೆ ಜಮೀನನ್ನು ನಿಯಮಕ್ಕೆ ವಿರುದ್ಧವಾಗಿ ಖರೀದಿ ಮಾಡಿ ಅವ್ಯವಹಾರ ಎಸಗಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ ಆರೋಪಿಸಿದ್ದಾರೆ.

ಗೃಹ ನಿರ್ಮಾಣ ಸಂಘದ ಆಡಳಿತ ಮಂಡಳಿಯಲ್ಲಿ ಕೇವಲ 5 ಜನ ಕಾರ್ಯಕಾರಿ ಸಮಿತಿ ಸದಸ್ಯರಿದ್ದು, ಜಮೀನು ಖರೀದಿ ಮಾಡುವ ಅಧಿಕಾರ ಇವರಿಗೆ ಇರುವುದಿಲ್ಲ. ಸಂಘದ ನಿಯಮಾವಳಿಯಂತೆ ಗೃಹ ನಿರ್ಮಾಣಕ್ಕಾಗಿ ಎನ್‌ಎ (ಕೃಷಿಯೇತರ) ಜಮೀನು ಖರೀದಿ ಮಾಡಲು ಮಾತ್ರ ಅವಕಾಶವಿದೆ. ಕುಸನೂರಿನಲ್ಲಿ ಸರ್ಕಾರ ನಿಗದಿಪಡಿಸಿರುವ ದರ ಎಕರೆಗೆ ₹ 7–8 ಲಕ್ಷ ಮಾತ್ರ ಇದೆ. ಹೀಗಿದ್ದರೂ ಇವರು ನಿಯಮ ಬಾಹಿರವಾಗಿ ತಮ್ಮ ಸಂಬಂಧಿಕರ ಜಮೀನುಗಳನ್ನು ಎಕರೆಗೆ ₹ 37 ಲಕ್ಷದಂತೆ ಖರೀದಿಸಿದ್ದಾರೆ ಎಂದು ದೂರಿದ್ದಾರೆ.

ಸಂಘದ ಹೆಸರಿನಲ್ಲಿ ಜಮೀನಿನ ನೋಂದಣಿ ಮತ್ತು ಪರಭಾರೆಯಾಗದೇ 550 ನೌಕರರಿಂದ 30X40 ನಿವೇಶನ ಕೊಡುವುದಾಗಿ ಹೇಳಿ  ₹ 1ರಿಂದ 3 ಲಕ್ಷದವರೆಗೆ ಮುಂಗಡ ಹಣ ಪಡೆದುಕೊಂಡು, ಜಮೀನು ಮಾಲೀಕರಿಗೆ ₹ 9.60 ಕೋಟಿ ಹಣವನ್ನು ಮೂರು ವರ್ಷಗಳ ಹಿಂದೆಯೇ ಸಂದಾಯ ಮಾಡಿದ್ದಾರೆ. ಆದರೆ, ಇದುವರೆಗೂ ನಿವೇಶನವೂ ಹಂಚಿಕೆಯಾಗಿಲ್ಲ ಎಂದು ಆರೋಪಿಸಿದ್ದಾರೆ.

ವಾಸ್ತವಾಂಶ ಹೀಗಿದ್ದರೂ ಸೆ. 20ರಂದು ಸರ್ವ ಸದಸ್ಯರ  42ನೇ ವಾರ್ಷಿಕ ಸಭೆಯನ್ನು ಕರೆದಿರುವುದು ನಿಯಮಬಾಹಿರವಾಗಿದೆ. ಲಿಂಗರಾಜ ಬಿರಾದಾರ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರು ಎಂದು ನಮೂದಿಸಿರುವುದು ಅಪರಾಧ. ಇವರು 2012–13ರಲ್ಲಿ ಕಾಂಗ್ರೆಸ್ ಸೇರಿದ್ದು, ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಇವರ ಸದಸ್ಯತ್ವ ರದ್ದಾಗಿದೆ. ಆದ್ದರಿಂದ ಸಹಕಾರ ಇಲಾಖೆಯು ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಯನ್ನು ರದ್ದುಪಡಿಸಬೇಕು ಮತ್ತು ತಕ್ಷಣ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.