ADVERTISEMENT

ಜ. 1 ರಿಂದ ಇಂದಿರಾ ಕ್ಯಾಂಟೀನ್ ಆರಂಭ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 7:08 IST
Last Updated 27 ಅಕ್ಟೋಬರ್ 2017, 7:08 IST
ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಇಂದಿರಾ ಕ್ಯಾಂಟೀನ್‌ ಆರಂಭಿಸುವ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಯಿತು
ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಇಂದಿರಾ ಕ್ಯಾಂಟೀನ್‌ ಆರಂಭಿಸುವ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಯಿತು   

ಕಲಬುರ್ಗಿ: ಜಿಲ್ಲೆಯಲ್ಲೂ 13 ಇಂದಿರಾ ಕ್ಯಾಂಟೀನ್‌ಗಳು ಪ್ರಾರಂಭವಾಗಲಿವೆ. ಜನವರಿ 1ರಿಂದ ಈ ಕ್ಯಾಂಟೀನ್‌ಗಳಲ್ಲಿ ಉಪಾಹಾರ ಹಾಗೂ ಭೋಜನ ಸವಿಯಬಹುದು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಇಂದಿರಾ ಕ್ಯಾಂಟೀನ್‌ಗಳ ಅನುಷ್ಠಾನ, ಕಾರ್ಯನಿರ್ವಹಣೆ ಮತ್ತು ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಈ ಮಾಹಿತಿ ನೀಡಿದರು.

‘ಕಲಬುರ್ಗಿ ಪಾಲಿಕೆ ವ್ಯಾಪ್ತಿಯಲ್ಲಿ 7 ಹಾಗೂ ಪ್ರತಿ ತಾಲ್ಲೂಕಿನಲ್ಲಿ ಒಂದು ಕ್ಯಾಂಟೀನ್‌ ಸ್ಥಾಪನೆ ಆಗಲಿವೆ. ಇದಕ್ಕಾಗಿ ಸೂಕ್ತ ಸ್ಥಳ ಗುರುತಿಸಬೇಕು ಹಾಗೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ನಗರದಲ್ಲಿ ಈಗಾಗಲೇ ನಾಲ್ಕು ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಕೇಂದ್ರ ಬಸ್ ನಿಲ್ದಾಣ, ಜಿಲ್ಲಾಸ್ಪತ್ರೆ, ನೆಹರೂ ಗಂಜ್ ಹಾಗೂ ಸೂಪರ್ ಮಾರ್ಕೆಟ್‌ನ ನಗರ ಬಸ್‌ ನಿಲ್ದಾಣದಲ್ಲಿ ಕ್ಯಾಂಟಿನ್ ಪ್ರಾರಂಭಿಸಲಾಗುವುದು. ಉಳಿದ ಮೂರು ಸ್ಥಳಗಳನ್ನು ಗುರುತಿಸಬೇಕಾಗಿದೆ. ಹೆಚ್ಚು ಬಡವರಿರುವ ಪ್ರದೇಶಗಳನ್ನು ಗುರುತಿಸಿ ವರದಿ ನೀಡಬೇಕು’ ಎಂದು ಅವರು ತಿಳಿಸಿದರು.

ADVERTISEMENT

‘ಆಳಂದದಲ್ಲಿ ಶ್ರೀರಾಮ ಮಾರುಕಟ್ಟೆ, ಅಫಜಲಪುರದಲ್ಲಿ ಪೊಲೀಸ್ ಇಲಾಖೆಯ ವಸತಿ ಗೃಹ, ಚಿತ್ತಾಪುರದಲ್ಲಿ ಎ.ಪಿ.ಎಂ.ಸಿ. ಸಮೀಪ, ಚಿಂಚೋಳಿಯಲ್ಲಿ ಬಸ್‌ ನಿಲ್ದಾಣ ಎದುರು, ಜೇವರ್ಗಿಯಲ್ಲಿ ಹಳೆಯ ತಹಶೀಲ್ದಾರ್‌ ಕಚೇರಿ ಸಮೀಪ ಹಾಗೂ ಸೇಡಂನಲ್ಲಿ ಲೋಕೋಪಯೋಗಿ ಕಾರ್ಯಾಲಯದ ಎದುರು ಇಂದಿರಾ ಕ್ಯಾಂಟೀನ್ ಸ್ಥಾಪನೆ ಆಗಲಿವೆ’ ಎಂದರು.

‘ಕ್ಯಾಂಟೀನ್ ಸ್ಥಾಪನೆಗೆ ಗುರುತಿಸಿರುವ ಸ್ಥಳಗಳಿಗೆ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಬೇಕು. ಕ್ಯಾಂಟೀನ್‌ನಲ್ಲಿ ಸ್ಥಳಾವಕಾಶ, ವಾಹನ ನಿಲುಗಡೆ ವ್ಯವಸ್ಥೆ, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯ ಪರಿಶೀಲನೆ ನಡೆಸಬೇಕು. ನಗರ ನೀರು ಸರಬರಾಜು ಮಂಡಳಿ ಮತ್ತು ಜೆಸ್ಕಾಂ ಶುಲ್ಕ ಪಡೆಯದೆ ನೀರು ಮತ್ತು ವಿದ್ಯುತ್ ಒದಗಿಸಬೇಕು’ ಎಂದು ಹೇಳಿದರು.

‘ಊಟ ತಯಾರಿಗೆ ತಗಲುವ ವೆಚ್ಚದ ಶೇ70ರಷ್ಟು ಪಾಲು ಪಾಲಿಕೆ ಹಾಗೂ ಶೇ30ರಷ್ಟು ಕಾರ್ಮಿಕ ಇಲಾಖೆ ಭರಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾರಂಭಿಸುವ ಏಳು ಇಂದಿರಾ ಕ್ಯಾಂಟೀನ್‌ಗಳಿಗೆ ತಿಂಡಿ ಮತ್ತು ಊಟ ಸರಬರಾಜು ಮಾಡಲು ಕೇಂದ್ರೀಕೃತವಾದ ಒಂದೇ ಅಡುಗೆ ಕೋಣೆ ಇರಲಿದೆ. ಅಲ್ಲಿಂದಲೇ ತಿಂಡಿ, ಊಟದ ಸರಬರಾಜು ಆಗಲಿದೆ. ಇದಕ್ಕೆ ಕಾರ್ಮಿಕ ಇಲಾಖೆ ವಾಹನ ಒದಗಿಸಬೇಕು’ ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಸಾಜೀದ ಅಹ್ಮದ್ ಮುಲ್ಲಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಅರುಣಕುಮಾರ ಸಂಗಾವಿ, ಪಾಲಿಕೆಯ ಪರಿಸರ ಎಂಜಿನಿಯರ್ ಮುಜಾಮಿಲ್ ಆಲಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.