ADVERTISEMENT

ತ್ರಿಪಿಟಕಗಳು ಬೌದ್ಧಧಮ್ಮದ ತಾತ್ವಿಕ ಸಂವಿಧಾನ: ಅಪ್ಪಗೆರೆ ಸೋಮಶೇಖರ್

ಸಿದ್ಧಾರ್ಥ ಬುದ್ಧವಿಹಾರದಲ್ಲಿ ಧಮ್ಮ ಪ್ರವಚನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 5:51 IST
Last Updated 16 ಡಿಸೆಂಬರ್ 2024, 5:51 IST
ಕಲಬುರಗಿಯ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಭಾನುವಾರ ಹುಣ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಧಮ್ಮ ಪ್ರವಚನ ಕಾರ್ಯಕ್ರಮದಲ್ಲಿ ರಾಧಾಬಾಯಿ ಖರ್ಗೆ, ಸಂಘಾನಂದ ಬಂತೆ ಅವರು ಬುದ್ಧವಂದನೆ ಸಲ್ಲಿಸಿದರು
ಕಲಬುರಗಿಯ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಭಾನುವಾರ ಹುಣ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಧಮ್ಮ ಪ್ರವಚನ ಕಾರ್ಯಕ್ರಮದಲ್ಲಿ ರಾಧಾಬಾಯಿ ಖರ್ಗೆ, ಸಂಘಾನಂದ ಬಂತೆ ಅವರು ಬುದ್ಧವಂದನೆ ಸಲ್ಲಿಸಿದರು   

ಕಲಬುರಗಿ: ‘ತ್ರಿಪಿಟಕಗಳು ಬೌದ್ಧ ಧಮ್ಮದ ತಾತ್ವಿಕ ಸಂವಿಧಾನವಾಗಿವೆ. ಒಂದರ್ಥದಲ್ಲಿ ಅವು ಬೌದ್ಧಧಮ್ಮದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಾಗಿವೆ. ಬೌದ್ಧ ಸಾಹಿತ್ಯವಾದ ತ್ರಿಪಿಟಕಗಳು ಬುದ್ಧ ಗುರು ಬೋಧಿಸಿದ ಚಿಂತನೆಗಳನ್ನು ಪರಿಚಯಿಸುತ್ತವೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ್ ಹೇಳಿದರು.

ನಗರದ ಹೊರವಲಯದಲ್ಲಿರುವ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಭಾನುವಾರ ಹುಣ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಧಮ್ಮ ಪ್ರವಚನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ತ್ರಿಪಿಟಕಗಳನ್ನು ಸಂಗ್ರಹಿಸಿ, ಮುದ್ರಿಸಿ, ಪ್ರಕಟಿಸಲು ಒಟ್ಟು ಆರು ಮಹಾ ಬೌದ್ಧ ಸಮಾವೇಶಗಳು ನಡೆದಿವೆ. ತ್ರಿಪಿಟಕಗಳನ್ನು ಮೊದಲಿಗೆ ಓಲೆಗರಿಗಳ ಮೇಲೆ, ನಂತರ ಅಮೃತಶಿಲೆಗಳ ಮೇಲೆ ಬರೆಸಿ, ಕೆತ್ತಿಸಿ ಬೌದ್ಧ ಧಮ್ಮೊಪದೇಶಗಳನ್ನು ಪ್ರಪಂಚದಾದ್ಯಂತ ಪಸರಿಸಲಾಯಿತು. ಸಾಮ್ರಾಟ್ ಅಶೋಕ ಮಹಾರಾಜನ ಪುತ್ರ ಮಹಿಂದ ಥೆರೋ ಅವರು ಲಿಖಿತ ತ್ರಿಪಿಟಕಗಳನ್ನು ತೆಗೆದುಕೊಂಡು ಹೋಗಿ ಶ್ರೀಲಂಕಾದಲ್ಲಿ ಪ್ರಚಾರ ಮಾಡಿದರು’ ಎಂದು ಹೇಳಿದರು.

ADVERTISEMENT

‘ಪಾಳಿ ಭಾಷೆಯು ಬುದ್ಧರ ಕಾಲದಲ್ಲಿ ಜನರ ಆಡುಭಾಷೆಯಾಗಿತ್ತು. ಗೌತಮ ಬುದ್ಧರು ಪಾಳಿ ಭಾಷೆಯಲ್ಲಿ ಬೋಧಿಸಿದ ಧಮ್ಮದ ಚಿಂತನೆಗಳನ್ನು ಬುದ್ಧ ವಚನ ಎಂದು ಕರೆಯಲಾಗುತ್ತದೆ. ಬುದ್ಧ ಸುಮಾರು 84 ಸಾವಿರ ಧಮ್ಮೊಪದೇಶಗಳನ್ನು ಬೋಧಿಸಿದ್ದಾರೆ’ ಎಂದರು.

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಸಂಘಾನಂದ ಭಂತೇ ತ್ರಿಸರಣ ಪಠಿಸಿ, ಬುದ್ಧವಂದನೆ ಸಲ್ಲಿಸಿದರು. ಬಳಿಕ ರಾಧಾಬಾಯಿ ಖರ್ಗೆ ಅವರು ಪೂಜೆ ಸಲ್ಲಿಸುವ ಮೂಲಕ ಪ್ರವಚನಕ್ಕೆ ಚಾಲನೆ ನೀಡಿದರು‌.

ಮುಖಂಡರಾದ ಮಹಾಂತಪ್ಪ ಸಂಗಾವಿ, ಭೀಮರಾವ್ ಟಿ.ಟಿ., ಚಂದ್ರಶೇಖರ ದೊಡ್ಡಮನಿ, ಸಿದ್ಧಾರ್ಥ ಬುದ್ಧವಿಹಾರ ಟ್ರಸ್ಟ್ ಆಡಳಿತಾಧಿಕಾರಿ ರಮೇಶ್ ಕೆ. ಬೇಗಾರ, ಈಶ್ವರ ಇಂಗನ್, ಅನಿಲ್ ಕುಮಾರ್ ಸುಗಂಧಿ, ಕೆ.ಎಲ್.ಕಾಂಬಳೆ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.