ADVERTISEMENT

ನಿಯಮ ಉಲ್ಲಂಘಿಸಿದರೆ ಬರಲಿದೆ ‘ಟೈಗರ್!’

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 6:50 IST
Last Updated 30 ಅಕ್ಟೋಬರ್ 2017, 6:50 IST

ಕಲಬುರ್ಗಿ: ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಬೈಕ್‌ ನಿಲ್ಲಿಸುವ ವಾಹನ ಸವಾರರಿಗೆ ಚುರುಕು ಮುಟ್ಟಿಸಲು ಹಾಗೂ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಂಚಾರ ಪೊಲೀಸರು ‘ಟೈಗರ್’ ಮೊರೆ ಹೋಗಿದ್ದಾರೆ.

ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವ ಬೈಕ್‌ಗಳ ಮೇಲೆ ಸಂಚಾರ ಪೊಲೀಸರು ಇದೀಗ ಹದ್ದಿನ ಕಣ್ಣಿಟ್ಟಿದ್ದಾರೆ. ಸವಾರರು ಬೈಕ್ ನಿಲುಗಡೆ ಮಾಡಿ ತಮ್ಮ ಕೆಲಸ ಮುಗಿಸಿಕೊಂಡು ಬರುವಷ್ಟರಲ್ಲಿ ಪೊಲೀಸರು ಟೈಗರ್ ವಾಹನದಲ್ಲಿ ಬೈಕ್‌ಗಳನ್ನು ಎತ್ತಿಹಾಕಿಕೊಂಡು ಹೋಗುತ್ತಿದ್ದಾರೆ. ಒಂದು ಸಾರಿ ‘ಬೈಕ್’ ಟೈಗರ್‌ ವಾಹನ ಹತ್ತಿದರೆ ಸವಾರರು ದಂಡ ಪಾವತಿಸಲೇಬೇಕು. ಇನ್ನೊಂದೆಡೆ ನೋ ಪಾರ್ಕಿಂಗ್ ಜಾಗದಲ್ಲಿ ನಿಲುಗಡೆ ಮಾಡುವ ನಾಲ್ಕು ಚಕ್ರ ವಾಹನಗಳಿಗೂ ಲಾಕ್ ಅಳವಡಿಸಿ, ಮಾಲೀಕರಿಗೆ ದಂಡ ವಿಧಿಸಲಾಗುತ್ತಿದೆ.

ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಿರುವ ಬೈಕ್‌ಗಳಿಗೆ ಸದ್ಯ ₹100 ದಂಡ ವಿಧಿಸಲಾಗುತ್ತಿದೆ. ಟೈಗರ್‌ ವಾಹನದಲ್ಲಿ ಎತ್ತಿಹಾಕಿಕೊಂಡು ಹೋದರೆ ಬೈಕ್‌ ಮತ್ತು ಆಟೊಗಳಿಗೆ ₹300 ಹಾಗೂ ನಾಲ್ಕು ಚಕ್ರ ವಾಹನಗಳಿಗೆ ₹400 ದಂಡ ವಿಧಿಸಲಾಗುತ್ತಿದೆ. ನಿಯಮ ಉಲ್ಲಂಘನೆ ಮರುಕಳಿಸಿದರೆ ಎರಡು ಪಟ್ಟು ದಂಡ ವಿಧಿಸಲಾಗುತ್ತಿದೆ.

ADVERTISEMENT

ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್ ಅವರು ಈ ಹಿಂದೆ ಕಲಬುರ್ಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಅವರ ಅವಧಿಯಲ್ಲೇ ಒಂದು ಟೈಗರ್ ವಾಹನ ಖರೀದಿಸಲಾಗಿದೆ. ಸಂಚಾರ ಪೊಲೀಸರು ವಾಹನ ದಟ್ಟಣೆಯನ್ನು ಪರಿಗಣಿಸಿ ಟೈಗರ್‌ ವಾಹನವನ್ನು ಬಳಕೆ ಮಾಡುತ್ತಿದ್ದಾರೆ.

ಸಮ–ಬೆಸ ನಿಯಮ ಮತ್ತೆ ಜಾರಿ: ‘ಸಂಚಾರ ದಟ್ಟಣೆ ಹಾಗೂ ಎಲ್ಲೆಂದರಲ್ಲಿ ಬೈಕ್ ನಿಲುಗಡೆ ಮಾಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ವರ್ಷದ ಹಿಂದೆಯೇ ಸಮ–ಬೆಸ ನಿಯಮ ಜಾರಿಗೊಳಿಸಲಾಗಿತ್ತು. ಸಮ ದಿನಗಳಾದ 2,4,6,8 ನೇ ತಾರೀಖಿನಂದು ರಸ್ತೆಯ ಬಲ ಭಾಗದಲ್ಲಿ ಹಾಗೂ ಬೆಸ ದಿನಗಳಾದ 1,3,5,7ನೇ ತಾರೀಖಿನಂದು ರಸ್ತೆಯ ಎಡ ಭಾಗದಲ್ಲಿ ಬೈಕ್‌ಗಳನ್ನು ನಿಲುಗಡೆ ಮಾಡುವಂತೆ ಸೂಚನಾ ಫಲಕಗಳನ್ನು ಅಳವಡಿಸಲಾಗಿತ್ತು. ಆದರೆ ದಿನಕಳೆದಂತೆ ಅದು ಮತ್ತೆ ಯಥಾಸ್ಥಿತಿಗೆ ಬಂದಿತ್ತು.

ಈಗ ಮತ್ತೆ ಕಟ್ಟುನಿಟ್ಟಾಗಿ ಸಮ–ಬೆಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ನಿರಂತರವಾಗಿ ನಿಗಾ ವಹಿಸಲಾಗುತ್ತಿದೆ’ ಎಂದು ಸಂಚಾರ ಪೊಲೀಸ್ ಠಾಣೆ ಮೂಲಗಳು ಹೇಳುತ್ತವೆ.

‘ಕೇಂದ್ರ ಬಸ್ ನಿಲ್ದಾಣ ಮುಂಭಾಗ, ರಾಷ್ಟ್ರಪತಿ ಚೌಕ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ವೃತ್ತ, ಸೂಪರ್ ಮಾರ್ಕೆಟ್, ನೆಹರೂ ಗಂಜ್ ಪ್ರದೇಶ ಸೇರಿ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಸಮ–ಬೆಸ ನಿಯಮ ಜಾರಿಯಲ್ಲಿದೆ. ನಿಯಮ ಉಲ್ಲಂಘಿಸುವವರಿಗೆ ‘ಟೈಗರ್‌’ ಮೂಲಕ ದಂಡ ವಿಧಿಸಲಾಗುತ್ತಿದೆ’ ಎಂಬುದು ಮೂಲಗಳ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.