ADVERTISEMENT

ಪ್ರಾಂಶುಪಾಲರ ನಿವಾಸದಿಂದ ₹45.71ಲಕ್ಷ ನಗದು ವಶ

ಕೆಪಿಎಸ್‌ಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 9:04 IST
Last Updated 27 ಮಾರ್ಚ್ 2018, 9:04 IST
ಡಾ.ರೆಹನಾ ಬೇಗಂ
ಡಾ.ರೆಹನಾ ಬೇಗಂ   

ಕಲಬುರ್ಗಿ: ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ)ದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ, ಇಲ್ಲಿನ ನ್ಯಾಷನಲ್ ಬಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರೆಹನಾ ಬೇಗಂ ಅವರ ಮನೆಯಿಂದ ಪೊಲೀಸರು ಸೋಮವಾರ ₹45.71 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

‘ಪ್ರಕರಣದ ಎರಡನೇ ಆರೋಪಿ ತಮ್ಜದ್ ಪಟೇಲ್, ಮೈಮುದ್‌ ನದಾಫ್‌ ಎಂಬುವರು ಈ ಹಣವನ್ನು ಡಾ.ರೆಹನಾ ಬೇಗಂ ಅವರಿಗೆ ನೀಡಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ತಿಳಿಸಿದ್ದಾರೆ.

‘ಪರೀಕ್ಷೆಯಲ್ಲಿ ಹೆಚ್ಚು ಅಂಕ ಕೊಡಿಸುವ ಆಮಿಷವೊಡ್ಡಿ ತಮ್ಜದ್ ಪಟೇಲ್ ಸೇರಿದಂತೆ ಅನೇಕರು ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ಹಣದಲ್ಲಿ ನಿರ್ದಿಷ್ಟ ಭಾಗವನ್ನು ರೆಹನಾ ಬೇಗಂ ಅವರಿಗೆ ನೀಡಿದ್ದರು. ಹೀಗಾಗಿ ಅವರು ತಮ್ಮ ಕಾಲೇಜಿನಲ್ಲಿ ಅಕ್ರಮ ನಡೆಸಲು ನೆರವಾಗಿದ್ದರು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಪ್ರಕರಣದಲ್ಲಿ ದೊಡ್ಡ ಮೊತ್ತದ ನಗದು ವರ್ಗಾವಣೆ ಆಗಿರುವ ಸಾಧ್ಯತೆ ಇದೆ. ವಶಕ್ಕೆ ಪಡೆದ ಹಣದ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ ನೀಡಲಾಗುವುದು’ ಎಂದು ಸಹಾಯಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಜೆ.ಲೋಕೇಶ್‌ ತಿಳಿಸಿದರು.

‘ಈ ಜಾಲದ ಕೆಲವರು ಕಲಬುರ್ಗಿ, ಅಫಜಲಪುರ, ವಿಜಯಪುರ ಮತ್ತು ಬೆಂಗಳೂರಿನಿಂದ ಕಾರ್ಯ ನಿರ್ವಹಿಸುತ್ತಿದ್ದರು. ಕೆಪಿಎಸ್‌ಸಿ ಪರೀಕ್ಷಾ ಕೇಂದ್ರಗಳನ್ನು ಹೊಂದಿದ್ದ ನಗರದ ನ್ಯಾಷನಲ್ ಕಾಲೇಜು ಮತ್ತು ಗ್ಲೋಬಲ್ ಕಾಲೇಜುಗಳ ಪ್ರಾಂಶುಪಾಲರ ನೆರವಿನಿಂದ ಪ್ರಶ್ನೆ ಪತ್ರಿಕೆಗಳನ್ನು ವಾಟ್ಸ್‌ಆ್ಯಪ್ ಮೂಲಕ ಪಡೆಯುತ್ತಿದ್ದರು. ಇವರೆಲ್ಲ ಪರೀಕ್ಷೆ ಆರಂಭವಾದ 15–20 ನಿಮಿಷಗಳಲ್ಲಿ ಉತ್ತರಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ಮೈಕ್ರೊ ಇಯರ್‌ ಫೋನ್‌ ಮೂಲಕ ಅಭ್ಯರ್ಥಿಗಳಿಗೆ ಉತ್ತರ ತಲುಪಿಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ’ ಎಂದರು.

ಪ್ರಕರಣದಲ್ಲಿ 13 ಜನ ಭಾಗಿಯಾಗಿದ್ದು, ಅವರೆಲ್ಲರನ್ನೂ ಬಂಧಿಸಲಾಗಿದೆ. ಡಾ.ರೆಹನಾ ಬೇಗಂ ಮತ್ತು ಗ್ಲೋಬಲ್ ಬಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಹುಮೇರಾ ಬೇಗಂ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.