ADVERTISEMENT

ಬಳಕೆಗೆ ಬಾರದ ವಸತಿ ಗೃಹ

ಹೈ.ಕ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿದ ಕಟ್ಟಡ

​ಪ್ರಜಾವಾಣಿ ವಾರ್ತೆ
Published 28 ಮೇ 2018, 7:14 IST
Last Updated 28 ಮೇ 2018, 7:14 IST
ಚಿಂಚೋಳಿಯ ಚಂದಾಪುರದಲ್ಲಿ ನಿರ್ಮಿಸಿರುವ ವಸತಿ ಗೃಹ ಕಟ್ಟಡದ ಕೊಠಡಿಗಳಿಗೆ ಪ್ಲಾಸ್ಟರ್‌ ಮಾಡಿಲ್ಲದಿರುವುದು
ಚಿಂಚೋಳಿಯ ಚಂದಾಪುರದಲ್ಲಿ ನಿರ್ಮಿಸಿರುವ ವಸತಿ ಗೃಹ ಕಟ್ಟಡದ ಕೊಠಡಿಗಳಿಗೆ ಪ್ಲಾಸ್ಟರ್‌ ಮಾಡಿಲ್ಲದಿರುವುದು   

ಚಿಂಚೋಳಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಚಂದಾಪುರದಲ್ಲಿ ನಿರ್ಮಿಸಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ಗೃಹ ಕಟ್ಟಡ ಹೊರಗಡೆ ಸುಣ್ಣ ಬಣ್ಣ ಬಳಿದುಕೊಂಡು ಅಂದವಾಗಿ ಕಂಡರೆ, ಒಳಗಡೆ ಪ್ಲಾಸ್ಟರ್‌, ಸುಣ್ಣ ಬಣ್ಣ ಕಾಣದೆ ಬಿಕೋ ಎನ್ನುತ್ತಿದೆ.

ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2013– 14ನೇ ಸಾಲಿನ ₹50 ಲಕ್ಷ ಅನುದಾನದಲ್ಲಿ ನಿರ್ಮಿಸಿದ ಈ ಕಟ್ಟಡ ಅಪೂರ್ಣವಾಗಿದೆ.

ಕಟ್ಟಡದ ಹೊರ ಗೋಡೆಗಳಿಗೆ ಪ್ಲಾಸ್ಟರ್‌ ಮಾಡಲಾಗಿದೆ. ಜತೆಗೆ ಬಣ್ಣ ಬಳಿದು ಕಟ್ಟಡಕ್ಕೆ ಬಳಸಿದ ಅನುದಾನ, ನಿರ್ಮಿಸಿದ ಗುತ್ತಿಗೆದಾರ ಮತ್ತು ಉಸ್ತುವಾರಿ ಇಲಾಖೆಯ ವಿವರಣೆಯುಳ್ಳ ನಾಮಫಲಕ ಬರೆಯಲಾಗಿದೆ.  ಕಟ್ಟಡದ ಒಳಗಡೆ ಪ್ಲಾಸ್ಟರ್ ಮತ್ತು ಬಣ್ಣ ಹಾಗೂ ನೆಲಹಾಸು ಕೈಗೊಳ್ಳಬೇಕಿದೆ. ಕಟ್ಟಡದ ಗುಣಮಟ್ಟವೂ ಸರಿಯಾಗಿಲ್ಲ ಎಂದು ದೂರುತ್ತಾರೆ ಭೀಮಾ ಮಿಷನ್‌ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ.

ADVERTISEMENT

ಇಲ್ಲಿ ಕೇವಲ ಭೌತಿಕ ಕಾಮಗಾರಿ ನಡೆಸಿದ್ದು ಕಾಣುತ್ತದೆ. ಹೊರಗಡೆ ಪ್ಲಾಸ್ಟರ್‌ಗೆ ಬದಲಾಗಿ ಕೊಠಡಿಗಳಿಗೆ ಪ್ಲಾಸ್ಟರ್‌ ಬಳಿದರೆ ಕಟ್ಟಡ ಬಳಕೆಗೆ ಬರುತ್ತಿತ್ತು ಎಂಬುದು ಅವರ ಅನಿಸಿಕೆ.

8 ಕೊಠಡಿ ಹೊಂದಿರುವ ಈ ಕಟ್ಟಡದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳ ಮಂಚಗಳನ್ನು ಇಡಲಾಗಿದೆ. ಅಲ್ಲಲ್ಲಿ ಕಡ್ಡದ ಗೋಡೆ ಬಿರುಕು ಬಿಟ್ಟಿದ್ದು ಕಾಣಿಸುತ್ತಿದೆ. 2013– 14ನೇ ಸಾಲಿನಲ್ಲಿ ಮಂಜೂರಾದ ಅನುದಾನದಲ್ಲಿ 2016ರ ಮೇ 14ರಂದು ಕಾಮಗಾರಿ ಪ್ರಾರಂಭಿಸಿದ ಗುತ್ತಿಗೆದಾರರು 2017ರ ಮಾರ್ಚ್‌ 23ರಂದು ಪೂರ್ಣಗೊಳಿಸಿದ್ದಾರೆ.

ಕಟ್ಟಡ ಪೂರ್ಣಗೊಳ್ಳಬೇಕಾದರೆ ₹75 ಲಕ್ಷ ಅನುದಾನದ ಅಗತ್ಯವಿತ್ತು. ಆದರೆ ಲಭ್ಯವಿದ್ದ ₹50 ಲಕ್ಷ ಅನುದಾನದಿಂದ ಕಟ್ಟಡ ನಿರ್ಮಿಸಲಾಗಿದೆ. ಪೂರ್ಣಗೊಳಿಸಲು ಇನ್ನೂ ₹25 ಲಕ್ಷ ಅನುದಾನಕ್ಕೆ ಕೋರಿಕೆ ಸಲ್ಲಿಸಿದ್ದೇವೆ ಎಂದು ಎಇಇ ಅಶೋಕ ತಳವಾಡೆ ತಿಳಿಸಿದ್ದಾರೆ.

ಇದರ ಪಕ್ಕದಲ್ಲಿಯೇ ಬಾಲಕಿಯರ ವಸತಿ ನಿಲಯ ನಿರ್ಮಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳ ವಸತಿ ಗೃಹ ಮತ್ತು  ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯ ಕಟ್ಟಡಗಳಿವೆ. ಆದರೆ ಒಂದು ಕಟ್ಟಡ ಮಾತ್ರ ಬಳಕೆ ಯಲ್ಲಿದ್ದು, ಉಳಿದ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡರೂ ಇನ್ನೂ ಬಳಕೆ ಮಾಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.