ADVERTISEMENT

ಬೆಳೆಗೆ ಜೀವಕಳೆ ತುಂಬಲು ಬೇಕು ಮಳೆ

ಜಿಲ್ಲೆಯಲ್ಲಿ ಶೇ 50ರಷ್ಟು ಮಳೆಯ ಕೊರತೆ; ರೈತರಲ್ಲಿ ಮನೆ ಮಾಡಿದ ಆತಂಕ

ಗಣೇಶ ಚಂದನಶಿವ
Published 13 ಜುಲೈ 2017, 6:19 IST
Last Updated 13 ಜುಲೈ 2017, 6:19 IST
ಬೆಳೆಗೆ ಜೀವಕಳೆ ತುಂಬಲು ಬೇಕು ಮಳೆ
ಬೆಳೆಗೆ ಜೀವಕಳೆ ತುಂಬಲು ಬೇಕು ಮಳೆ   

ಕಲಬುರ್ಗಿ: ಆರಂಭದಲ್ಲಿ ಅಬ್ಬರಿಸಿದ್ದ ಮುಂಗಾರು ಮಳೆ ಆನಂತರ ಬಿಡುವು ಪಡೆದಿದೆ. ‘ಉತ್ತಮ ಮುಂಗಾರು’ ನಿರೀಕ್ಷೆಯಲ್ಲಿ ರೈತರು ಬಿತ್ತನೆ ಕೈಗೊಂಡಿದ್ದು, ಜಿಲ್ಲೆಯ ಶೇ 65ರಷ್ಟು ಪ್ರದೇಶದಲ್ಲಿ ಈಗಾಗಲೇ ಬಿತ್ತನೆಯಾಗಿದೆ. ಉಳಿದ ರೈತರಲ್ಲಿ ಬಹುತೇಕರು ಬಿತ್ತನೆಯಲ್ಲಿ ನಿರತರಾಗಿದ್ದು, ಇನ್ನು ಕೆಲವರು ಭೂಮಿ ಹದಮಾಡಿಟ್ಟುಕೊಂಡು ಮಳೆಗಾಗಿ ಎದುರು ನೋಡುತ್ತಿದ್ದಾರೆ.

ಈಗಾಗಲೇ ಬಿತ್ತಿರುವ ತೊಗರಿ, ಉದ್ದು, ಹೆಸರು, ಹತ್ತಿ ಬೆಳೆ ಚೆನ್ನಾಗಿ ಬೆಳೆದಿದೆ. ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಮಳೆ ಇಲ್ಲ. ಗಾಳಿಯ ವೇಗ ಹೆಚ್ಚಿದ್ದು, ತೇವಾಂಶ ಕಡಿಮೆಯಾಗುತ್ತಿದೆ. ಹೀಗಾಗಿ ಬೆಳೆ ಬಾಡುವ ಸ್ಥಿತಿಗೆ ತಲುಪುತ್ತಿವೆ. ರೈತರು ಎಡೆ ಹೊಡೆಯುವ ಮೂಲಕ ಕಳೆ ತೆಗೆಯುವ, ಭೂಮಿ ಬಿರುಕು ಬಿಡುವುದನ್ನು ತಪ್ಪಿಸಿ ಬೆಳೆ ರಕ್ಷಿಸಿಕೊಳ್ಳುವ ಯತ್ನದಲ್ಲಿದ್ದಾರೆ. 

‘20 ದಿನಗಳಿಂದ ಮಳೆ ಆಗಿಲ್ಲ. ಜುಲೈ ತಿಂಗಳಲ್ಲಿ ಶೇ 50ರಷ್ಟು ಮಳೆಯ ಕೊರತೆ ಇದೆ. ಎಲ್ಲ ಬೆಳೆಗಳಿಗೂ ಸದ್ಯ ಮಳೆಯ ಅವಶ್ಯವಿ ದೆ. 8–10 ದಿನಗಳಲ್ಲಿ ಮಳೆ ಆಗದಿದ್ದರೆ ಬೆಳೆಗೆ ತೊಂದರೆಯಾಗಲಿದೆ’ ಎನ್ನುವುದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ ಅವರ ವಿವರಣೆ.

ADVERTISEMENT

‘ತೊಗರಿ ಬೆಳೆ ಚೆನ್ನಾಗಿದೆ. ಈಗ ಉತ್ತಮ ಮಳೆಯಾದರೆ ಈ ವರ್ಷವೂ ತೊಗರಿಯ ಬಂಪರ್‌ ಬೆಳೆ ಬರಲಿದೆ’ ಎನ್ನುತ್ತಾರೆ ಅವರು.

‘ಈ ತಿಂಗಳ ಅಂತ್ಯದವರೆಗೂ ತೊಗರಿ, ಸೂರ್ಯಕಾಂತಿ ಮತ್ತಿತರ ಬೆಳೆ ಬಿತ್ತನೆ ಮಾಡಲು ಅವಕಾಶ ಇದೆ. ಆದರೆ, ಈಗ ಮಳೆಯ ಕೊರತೆಯೇ ದೊಡ್ಡ ಸಮಸ್ಯೆಯಾಗಿದೆ. ಹಸಿ ಮಳೆಯಾದರೆ ಬಿತ್ತನೆ ಮಾಡಬಹುದು. ಇಲ್ಲದಿದ್ದರೆ ಈ ವರ್ಷವೂ ನಮ್ಮ ಪಾಲಿಗೆ ಸಂಕಷ್ಟವೇ ಗತಿ’ ಎನ್ನುತ್ತಾರೆ ಫರಹತಾಬಾದ್‌ ಗ್ರಾಮದ ರೈತ ಶರಣಪ್ಪ ಅವರು.

ಬಿತ್ತನೆ: ಮುಂಗಾರು ಹಂಗಾಮಿನ ಜಿಲ್ಲೆಯ ಬಿತ್ತನೆ ಕ್ಷೇತ್ರ 5,59,785 ಹೆಕ್ಟೇರ್. 3 ಲಕ್ಷ ಹೆಕ್ಟರ್‌ ಪ್ರದೇಶದಲ್ಲಿ ಬೆಳೆಕಾಳು ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಆ ಪೈಕಿ ತೊಗರಿ 2.30 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ, ಉದ್ದು 30 ಸಾವಿರ, ಹೆಸರು 40 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ತೃಣಧಾನ್ಯಗಳಾದ ಸಜ್ಜೆ, ಹೈಬ್ರಿಡ್‌ ಜೋಳ, ಮೆಕ್ಕೆಜೋಳ, ಭತ್ತ 10,500 ಹೆಕ್ಟೇರ್‌ನಲ್ಲಿ, ಸೋಯಾಬಿನ್‌, ಸೂರ್ಯ ಕಾಂತಿ, ಎಳ್ಳು, ಶೇಂಗಾ, ಗುರೆಳ್ಳು ಮತ್ತಿತರ ಎಣ್ಣೆಕಾಳು ಬೆಳೆ 20,500 ಹೆಕ್ಟೇರ್‌ನಲ್ಲಿ ಹಾಗೂ ವಾಣಿಜ್ಯ ಬೆಳೆಗಳಾದ ಹೈಬ್ರಿಡ್‌ ಹತ್ತಿ 21,033 ಹೆಕ್ಟೇರ್‌ನಲ್ಲಿ ಬಿತ್ತನೆ, ಕಬ್ಬು 20 ಸಾವಿರ ಹೆಕ್ಟೇರ್‌ನಲ್ಲಿ ನಾಟಿ ಮಾಡಲಾಗಿದೆ.

***

ಜಿಲ್ಲೆಯಲ್ಲಿ ಜುಲೈನಲ್ಲಿ ಶೇ 50ರಷ್ಟು ಮಳೆಯ ಕೊರತೆ ಇದೆ.  ಜಿಲ್ಲೆಗೆ ಸದ್ಯ ಉತ್ತಮ ಮಳೆಯಾಗದಿದ್ದರೆ ಬೆಳೆಗೆ ತೊಂದರೆಯಾಗಲಿದೆ.
ಜಿಲಾನಿ ಮೊಕಾಶಿ, ಜಂಟಿ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.