ADVERTISEMENT

ಮತದಾನಕ್ಕೆ ಒಂದೇ ದಿನ ಬಾಕಿ...

ಜಿಲ್ಲೆಯ 9 ಕ್ಷೇತ್ರಗಳ ಕಣದಲ್ಲಿ ಇದ್ದಾರೆ 94 ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 11 ಮೇ 2018, 6:32 IST
Last Updated 11 ಮೇ 2018, 6:32 IST

ಕಲಬುರ್ಗಿ: ವಿಧಾನಸಭೆ ಚುನಾವಣೆಯ ಮತದಾನಕ್ಕೆ ಇನ್ನೊಂದೆ ದಿನ ಬಾಕಿ ಉಳಿದಿದೆ. ಬಿಸಿಲಿನಲ್ಲಿ ಬೆವರು ಸುರಿಸುತ್ತಿರುವ ಅಭ್ಯರ್ಥಿಗಳು ‘ಕೊನೆ ಕ್ಷಣದ ಕಸರತ್ತಿಗೆ’ ಮುಂದಾಗಿದ್ದಾರೆ.

ಮೇ 12ರಂದು ಬೆಳಿಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದ್ದು, ಜಿಲ್ಲಾ ಆಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮತದಾನಕ್ಕೆ ನಿಯೋಜನೆ ಗೊಂಡಿರುವ ಸಿಬ್ಬಂದಿ ಮೇ 11ರ ಬೆಳಿಗ್ಗೆ 6 ಗಂಟೆಗೆ ಆಯಾ ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಆಡಳಿತ ವ್ಯವಸ್ಥೆ ಮಾಡಿರುವ ಬಸ್‌ಗಳ ಮೂಲಕ ಸಂಜೆಯ ವೇಳೆಗೆ ಮತಗಟ್ಟೆಗಳನ್ನು ತಲುಪಲಿದ್ದಾರೆ. ಅವರು ತಮ್ಮೊಟ್ಟಿಗೆ ಮತಯಂತ್ರ ಮತ್ತು ಬೂತ್‌ ಮಟ್ಟದ ಮತದಾರರ ಪಟ್ಟಿಯನ್ನೂ ತೆಗೆದುಕೊಂಡು ಹೋಗಲಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ 2,384 ಮತಗಟ್ಟೆಗಳಿವೆ. ಮತಗಟ್ಟೆಗಳಲ್ಲಿ ಮೂಲಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಜಿಲ್ಲೆಗೆ ₹2.75 ಕೋಟಿ ಅನುದಾನ ನೀಡಿದೆ. ಈ ಎಲ್ಲ ಮತಗಟ್ಟೆಗಳಲ್ಲಿ ನೀರು, ಶೌಚಾಲಯ, ವಿದ್ಯುತ್‌ ದೀಪದ ವ್ಯವಸ್ಥೆ ಮಾಡಲಾಗಿದೆ. ಅಂಗವಿಕಲರಿಗೆ ರ‍್ಯಾಂಪ್‌ ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ಪ್ರತಿ ಮತಗಟ್ಟೆಗೆ ಒಂದು ಗಾಲಿಕುರ್ಚಿಯ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದ್ದಾರೆ.

ಸರದಿಯಲ್ಲಿ ನಿಲ್ಲುವ ಮತದಾರರಿಗೆ ನೆರಳಿನ ವ್ಯವಸ್ಥೆ ಮಾಡಲಾಗುತ್ತಿದೆ. ಈ ಎಲ್ಲ ಕೆಲಸಗಳು ಭರದಿಂದ ಸಾಗಿವೆ.

ವಿದ್ಯುನ್ಮಾನ ಮತಯಂತ್ರಗಳ ಬ್ಯಾಲೆಟ್‌ ಯೂನಿಟ್‌ನಲ್ಲಿ ಅಭ್ಯರ್ಥಿಗಳ ಭಾವಚಿತ್ರಗಳನ್ನೂ ಅಂಟಿಸಲಾಗುತ್ತಿದೆ. ಅಭ್ಯರ್ಥಿಗಳ ಹೆಸರಿನೊಂದಿಗೆ ಅವರ ಭಾವಚಿತ್ರ, ಪಕ್ಷದ ಚಿಹ್ನೆಯೂ ಅಲ್ಲಿರುವುದರಿಂದ ಮತದಾರರಿಗೆ ಗೊಂದಲ ಆಗುವುದಿಲ್ಲ.

ಅಂತಿಮ ದಿನದ ಅಬ್ಬರ: ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ 6ರ ವರೆಗೆ ಅವಕಾಶ ಇತ್ತು. ಮತದಾರರ ಗಮನ ಸೆಳೆಯಲು ಬಹುತೇಕ ಅಭ್ಯರ್ಥಿಗಳು ರೋಡ್‌ ಷೋ ನಡೆಸಿದರು. ಕಲಬುರ್ಗಿ ನಗರ ಮತ್ತು ಪಟ್ಟಣಗಳಲ್ಲಿ ಬೈಕ್‌ ರ‍್ಯಾಲಿ, ಮೆರವಣಿಗೆ ನಡೆದವು.

ಕೊನೆಯ ದಿನವೂ ಬಿಜೆಪಿ ಮುಖಂಡರು ಜಿಲ್ಲೆಗೆ ಲಗ್ಗೆ ಇಟ್ಟಿದ್ದರು. ಕಲಬುರ್ಗಿಯಲ್ಲಿ ಬೆಳಿಗ್ಗೆ 9.15ಕ್ಕೆ ಬಿಜೆಪಿ ಮುಖಂಡ ಶಹಾನವಾಜ್‌ ಹುಸೇನ್‌ ಪತ್ರಿಕಾಗೋಷ್ಠಿ ನಡೆಸಿದರೆ, ಮಧ್ಯಾಹ್ನದ ಸರದಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರದ್ದಾಗಿತ್ತು.

ದೂರು ನೀಡಲು ಸಹಾಯವಾಣಿ

ಚುನಾವಣಾ ಅಕ್ರಮಗಳಿಗೆ ದೂರು ನೀಡಲು ಸಾರ್ವಜನಿಕರು ಸಹಾಯವಾಣಿ ಸಂಖ್ಯೆ: 1077, 1950ಗೆ ಕರೆ ಮಾಡಬಹುದು. ಇಲ್ಲವೆ ವಾಟ್ಸ್‌ಆ್ಯಪ್‌ ಸಂಖ್ಯೆ: 94486 34567 ಮೂಲಕ ದೂರು ನೀಡಬಹುದು.

ಮತದಾರರು

10,73,499 .....ಪುರುಷ
10,43,391 .....ಮಹಿಳೆಯರು
358 ..............ತೃತೀಯ ಲಿಂಗಿ
21,17,248 .....ಒಟ್ಟು ಮತದಾರರು

ಮತದಾನಕ್ಕೆ ಈ ದಾಖಲೆ ಇದ್ದರೆ ಸಾಕು

ಭಾವಚಿತ್ರ ಇರುವ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಮತದಾರರು ಚುನಾವಣಾ ಆಯೋಗ ತಿಳಿಸಿದ 12 ಪರ್ಯಾಯ ದಾಖಲೆಗಳಲ್ಲಿ ಒಂದನ್ನು ತೋರಿಸಿ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶಕುಮಾರ್‌ ತಿಳಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಈ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಹಾಜರುಪಡಿಸಿ ಮತದಾನ ಮಾಡಬಹುದು.

ಪಾಸ್‌ಪೋರ್ಟ್‌. ವಾಹನ ಚಾಲನಾ ಪರವಾನಗಿ. ಕೇಂದ್ರ/ರಾಜ್ಯ ಸರ್ಕಾರದ ಹಾಗೂ ಅರೆ ಸರ್ಕಾರಿ, ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ತಮ್ಮ ಸಿಬ್ಬಂದಿಗೆ ನೀಡಿರುವ ಭಾವಚಿತ್ರ ಇರುವ ಗುರುತಿನ ಚೀಟಿ.

ಬ್ಯಾಂಕ್‌/ ಅಂಚೆ ಕಚೇರಿಯಿಂದ ಭಾವಚಿತ್ರದೊಂದಿಗೆ ನೀಡಿರುವ ಪಾಸ್‌ಬುಕ್‌. ಪ್ಯಾನ್‌ ಕಾರ್ಡ್‌. ಎನ್‌ಪಿಆರ್‌ ಅಡಿ ಆರ್‌ಜಿಐ ನೀಡಿರುವ ಸ್ಮಾರ್ಟ್‌ ಕಾರ್ಡ್‌. ನರೇಗಾ ಜಾಬ್‌ ಕಾರ್ಡ್. ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್. ಭಾವಚಿತ್ರ ಇರುವ ಪಿಂಚಣಿ ದಾಖಲೆ. ಚುನಾವಣಾ ಆಯೋಗದಿಂದ ನೀಡುವ ದೃಢೀಕೃತ ಫೋಟೊ ವೋಟರ್‌ ಸ್ಲಿಪ್‌. ಸಂಸದರು, ವಿಧಾನಸಭಾ, ವಿಧಾನ ಪರಿಷತ್ತಿನ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ. ಆಧಾರ್‌ ಕಾರ್ಡ್‌.

ಅರೆಸೇನಾ ಪಡೆ, ಪೊಲೀಸ್‌ ಕಣ್ಗಾವಲು

ಚುನಾವಣೆಗೆ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೇಂದ್ರ ಸರ್ಕಾರ ಅರೆ ಸೇನಾ ಪಡೆಯ 23 ತುಕಡಿಗಳನ್ನು ಕಳಿಸಿದೆ. ಕೆಎಸ್‌ಆರ್‌ಪಿಯ ಐದು ತುಕಡಿಗಳನ್ನೂ ನಿಯೋಜಿಸಲಾಗಿದೆ.

ಆಂಧ್ರಪ್ರದೇಶದಿಂದ 385 ಪೊಲೀಸ್‌ ಸಿಬ್ಬಂದಿ,  ತೆಲಂಗಾಣದಿಂದ 500 ಹಾಗೂ ಜಿಲ್ಲೆಯ 774 ಗೃಹರಕ್ಷಕರು, ಜಿಲ್ಲೆಯ 70 ಜನ ಪೊಲೀಸ್‌ ಅಧಿಕಾರಿಗಳು ಹಾಗೂ 3 ಸಾವಿರ ಸಿಬ್ಬಂದಿ ಅವರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಒಟ್ಟಾರೆ 6 ಸಾವಿರ ಭದ್ರತಾ ಸಿಬ್ಬಂದಿ ಇದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ್‌ ಹೇಳಿದ್ದಾರೆ.

ದೂರು ನೀಡಲು ಸಹಾಯವಾಣಿ

ಚುನಾವಣಾ ಅಕ್ರಮಗಳಿಗೆ ದೂರು ನೀಡಲು ಸಾರ್ವಜನಿಕರು ಸಹಾಯವಾಣಿ ಸಂಖ್ಯೆ: 1077, 1950ಗೆ ಕರೆ ಮಾಡಬಹುದು. ಇಲ್ಲವೆ ವಾಟ್ಸ್‌ಆ್ಯಪ್‌ ಸಂಖ್ಯೆ: 94486 34567 ಮೂಲಕ ದೂರು ನೀಡಬಹುದು.

**
ವಿದ್ಯುನ್ಮಾನ ಮತಯಂತ್ರಗಳನ್ನು ಪರಿಶೀಲಿಸಿದ್ದು, ಅವೆಲ್ಲವೂ ಸುಸ್ಥಿತಿಯಲ್ಲಿವೆ. ಶೇ 20ರಷ್ಟು ಹೆಚ್ಚುವರಿ ಮತಯಂತ್ರಗಳನ್ನು ಕಾಯ್ದಿರಿಸಲಾಗಿದೆ
– ಆರ್‌.ವೆಂಕಟೇಶಕುಮಾರ್‌, ಜಿಲ್ಲಾ ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.