ADVERTISEMENT

ಯಾರ ಮತಕ್ಕೆ ಯಾರು ಲಗ್ಗೆ; ಇದೇ ಇಲ್ಲಿಯ ಜಿಜ್ಞಾಸೆ

ಅಫಜಲಪುರ ವಿಧಾನಸಭಾ ಕ್ಷೇತ್ರ: ‘ಪಳಗಿದ ಕಲಿ’ಗಳ ಜಿದ್ದಾಜಿದ್ದಿ ರಾಜಕೀಯ

ಗಣೇಶ ಚಂದನಶಿವ
Published 10 ಮೇ 2018, 10:54 IST
Last Updated 10 ಮೇ 2018, 10:54 IST
ಮಾಲೀಕಯ್ಯ ಗುತ್ತೇದಾರ
ಮಾಲೀಕಯ್ಯ ಗುತ್ತೇದಾರ   

ಕಲಬುರ್ಗಿ: ಪಳಗಿದ ಕಲಿಗಳ ಜಿದ್ದಾಜಿದ್ದಿಯಿಂದಾಗಿ ಅಫಜಲಪುರ ಕ್ಷೇತ್ರದ ರಾಜಕೀಯ ಕಣ ರಂಗೇರಿದೆ. ಅಭಿವೃದ್ಧಿ ವಿಷಯ ಗೌಣವಾಗಿದ್ದು, ಜಾತಿ ಮತ್ತು ಪಕ್ಷ ರಾಜಕೀಯ ಜೊತೆಗೆ ಸ್ವಪ್ರತಿಷ್ಠೆ ಮುನ್ನಲೆಗೆ ಬಂದಿದೆ.

ಸಾಂಪ್ರದಾಯಿಕ ಎದುರಾಳಿಗಳಾದ ಮಾಲೀಕಯ್ಯ ಗುತ್ತೇದಾರ ಮತ್ತು ಎಂ.ವೈ.ಪಾಟೀಲ ಅವರು ಮತ್ತೆ ಪಕ್ಷ ಬದಲಿಸಿ ಪರಸ್ಪರ ತೊಡೆ ತಟ್ಟಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ರಾಜೇಂದ್ರಕುಮಾರ್‌ ಪಾಟೀಲ ರೇವೂರ ಸಹ ಸದ್ದು ಮಾಡುತ್ತಿದ್ದಾರೆ.

ಖಲೀಫ್‌ ಬರ್ಮಾ (ಡಾ.ಅಂಬೇಡ್ಕರ್‌ ಪೀಪಲ್ಸ್‌ ಪಾರ್ಟಿ), ರಾಜು ರಾಮಚಂದ್ರ ( ಎಐಎಂಇಪಿ), ದಿಗಂಬರ ಸಂಗಪ್ಪ, ಮಲ್ಲಿಕಾರ್ಜುನ ಶರಣಪ್ಪ ವಾಲಿ (ಇಬ್ಬರೂ ಪಕ್ಷೇತರ) ಕಣದಲ್ಲಿದ್ದಾರೆ.

ADVERTISEMENT

ಈ ಕ್ಷೇತ್ರದ ರಾಜಕೀಯ ‘ಲಿಂಗಾಯತ’ ಮತ್ತು ‘ಇತರರು’ ಸುತ್ತ ಗಿರಕಿ ಹೊಡೆಯುತ್ತಿತ್ತು. ‘ಲಿಂಗಾಯತ ನಾಯಕ’ ಎಂದು ಕರೆಯಲ್ಪಡುವ ಎಂ.ವೈ.ಪಾಟೀಲ ಮತ್ತೆ ಕಾಂಗ್ರೆಸ್‌ ತೆಕ್ಕೆಗೆ ಮರಳಿದ್ದು, ‘ಹಿಂದುಳಿದ ಮತ್ತು ಅಲ್ಪಸಂಖ್ಯಾತರ ನಾಯಕ’ ಎಂಬ ಬಿರುದಾಂಕಿತ ಮಾಲೀಕಯ್ಯ ಗುತ್ತೇದಾರ ಇದೇ ಮೊದಲ ಬಾರಿ ಬಿಜೆಪಿ ಸೇರಿದ್ದಾರೆ.

‘ಇಲ್ಲಿ ಇವರಿಬ್ಬರ ಮೇಲೆ ಆಯಾ ವರ್ಗದ ಮತದಾರರು ಪ್ರೀತಿ ಹೊಂದಿದ್ದರೂ ಸಹ, ಪಕ್ಷ ಮತ್ತು ಜಾತಿ ರಾಜಕೀಯ ಅವರನ್ನು ಕಟ್ಟಿಹಾಕುತ್ತಿದೆ’ ಎಂಬ ಚರ್ಚೆ ಬಲು ಜೋರಾಗಿ ಕೇಳಿಬರುತ್ತಿದೆ.

‘ಆರು ಬಾರಿ ಗೆದ್ದಿರುವ ಮಾಲೀಕಯ್ಯ ಕ್ಷೇತ್ರದ ಮತದಾರರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಅವರ ಕಷ್ಟ–ಸುಖದಲ್ಲಿ ಭಾಗಿಯಾಗುತ್ತಾರೆ. ಮೊಬೈಲ್‌ ಕರೆಯನ್ನು ಅವರೇ ಸ್ವೀಕರಿಸಿ, ಸಮಸ್ಯೆ ಕೇಳುತ್ತಾರೆ’ ಎಂಬ ಮೆಚ್ಚುಗೆಯ ಮಾತುಗಳೂ ಮತದಾರರಿಂದ ಕೇಳಿಬರುತ್ತವೆ.

‘ಹಿಂದೆ ಅವರು ಪಕ್ಷಾಂತರ ಮಾಡಿದ್ದರೂ ಆ ಪಕ್ಷಗಳಿಗೆ ‘ಕೋಮುವಾದಿ’ ಎಂಬ ಹಣೆಪಟ್ಟಿ ಇರಲಿಲ್ಲ. ಅವರು ಯಾವ ಪಕ್ಷಕ್ಕೆ ಹೋದರೂ ಅವರ ಮತಬ್ಯಾಂಕ್‌ ಅವರೊಟ್ಟಿಗೆ ಇರುತ್ತಿತ್ತು. ಬಿಜೆಪಿ ಕಾರಣಕ್ಕಾಗಿ ಅಲ್ಪಸಂಖ್ಯಾತರು ಹಾಗೂ ಖರ್ಗೆ ಅವರೊಂದಿಗೆ ಸಮರ ಸಾರಿರುವುದರಿಂದ ದಲಿತರ ಮತಗಳನ್ನು ಅವರು ಹೇಗೆ ಹಿಡಿದಿಟ್ಟುಕೊಳ್ಳುತ್ತಾರೆ ಎಂಬುದೇ ಈಗಿನ ಪ್ರಶ್ನೆ’ ಎಂದು ಹಿರಿಯರೊಬ್ಬರು ಹೇಳುತ್ತಾರೆ.

‘ಎಂ.ವೈ.ಪಾಟೀಲರು ಹಿಂದೆ ಮೂರು ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ಬಾರಿ ಕಾಂಗ್ರೆಸ್‌ ಮತಬ್ಯಾಂಕ್‌ ಅವರಿಗೆ ಅನಾಯಾಸವಾಗಿ ಒಲಿಯುವ ಸಾಧ್ಯತೆ ಇದೆ. ಆದರೆ, ಯಡಿಯೂರಪ್ಪ ಅವರ ಕಾರಣದಿಂದ ಲಿಂಗಾಯತ ಮತಗಳ ವಿಭಜನೆಯ ಆತಂಕವೂ ಇದೆ’ ಎಂದು ಕೆಲವರು ಹೇಳುತ್ತಾರೆ.

‘ಅವರಿಗೆ ವಯಸ್ಸಾಗಿದ್ದು, ತಮ್ಮ ಸಂಕಷ್ಟದ ಸಮಯದಲ್ಲಿ ನೆರವಿಗೆ ಬರುವುದಿಲ್ಲ ಎಂಬ ಬೇಸರವೂ ಮತದಾರರಲ್ಲಿ ಇದೆ’ ಎಂದು ಹಲವರು ಹೇಳುತ್ತಾರೆ.

ಇನ್ನು ಜೆಡಿಎಸ್‌ ಅಭ್ಯರ್ಥಿ ಲಿಂಗಾಯತ ಆದಿ ಸಮುದಾಯಕ್ಕೆ ಸೇರಿದ್ದು, ಜಾತಿ ಮತಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಇವರು ಯಾರ ಮತಬುಟ್ಟಿಗೆ ಕೈಹಾಕಲಿದ್ದಾರೆ ಎಂಬುದರ ಮೇಲೆ ಕ್ಷೇತ್ರದ ಫಲಿತಾಂಶ ನಿರ್ಧಾರವಾಗಲಿದೆ’ ಎನ್ನುತ್ತಾರೆ ಅಲ್ಲಿಯ ಹಿರಿಯರು.

‘ಒಬ್ಬರ ಮತಬುಟ್ಟಿಗೆ ಇನ್ನೊಬ್ಬರು ಕೈಹಾಕಿದ್ದಾರೆ. ಯಾರು ಯಾರ ಮತಗಳನ್ನು ಸೆಳೆಯಲಿದ್ದಾರೆ ಎಂಬ ಚಿತ್ರಣ ಇನ್ನೂ ಸ್ಪಷ್ಟವಾಗಿಲ್ಲ’ ಎಂದೂ ಅವರು ಮುಗುಮ್ಮಾಗಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.