ADVERTISEMENT

ರಸ್ತೆ ,ಕುಡಿಯುವ ನೀರಿಗಾಗಿ ಪರದಾಟ

ಚಿಂಚೋಳಿ– ಹಳ್ಯಾಳ ಕುಡಿಯುವ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 8:53 IST
Last Updated 18 ಏಪ್ರಿಲ್ 2018, 8:53 IST
ಅಫಜಲಪುರ ತಾಲ್ಲೂಕಿನ ಚಿಂಚೋಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಮುಂದೆ ಕಾದು ನಿಂತಿರುವ ಗ್ರಾಮಸ್ಥರು
ಅಫಜಲಪುರ ತಾಲ್ಲೂಕಿನ ಚಿಂಚೋಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಮುಂದೆ ಕಾದು ನಿಂತಿರುವ ಗ್ರಾಮಸ್ಥರು   

ಅಫಜಲಪುರ: ತಾಲ್ಲೂಕಿನ ಚಿಂಚೋಳಿ– ಹಳ್ಯಾಳ ಗ್ರಾಮಗಳಿಗೆ ಸಂಚರಿಸುವ ರಸ್ತೆ ಹದಗೆಟ್ಟಿದೆ. ಕೊಳವೆಬಾವಿಯೂ ಬತ್ತಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.

ಅಫಜಲಪುರ– ದುಧನಿ ರಾಷ್ಟ್ರೀಯ ಹೆದ್ದಾರಿಯ ಕೂಡು ರಸ್ತೆಯಿಂದ ಸಂಚರಿಸುವ ಹಳ್ಯಾಳ ಚಿಂಚೋಳಿ ಗ್ರಾಮಗಳ ರಸ್ತೆ ಈ ಹಿಂದೆ ಪಿಎಂಜಿಎಸ್‌ವೈ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ, ನಂತರ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಹಳ್ಯಾಳ ಗ್ರಾಮಕ್ಕೆ 3 ಕಿ.ಮೀ ಕೂಡು ರಸ್ತೆ ಮತ್ತು ಹಳ್ಯಾಳದಿಂದ ಚಿಂಚೋಳಿಗೆ 3 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ ಎಂದು ಗ್ರಾಮಸ್ಥರು ಹೇಳಿದರು.

ಚಿಂಚೋಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ 3 ವರ್ಷದ ಹಿಂದೆ ಕೊಳವೆ ಬಾವಿ ಕೊರೆಯಲಾಗಿತ್ತು. ಆದರೆ, ಅಂತರ್ಜಲ ಮಟ್ಟ ಕಡಿಮೆ ಆಗುತ್ತಿರುವುದರಿಂದ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ. ಜನ ತೋಟ ಗಳಿಂದ ನೀರು ತರು ವಂತಾಗಿದೆ.

ADVERTISEMENT

ಗ್ರಾಮ ದಲ್ಲಿ ಕೊಳವೆಬಾವಿ ಕೊರೆದು ಪೈಪಲೈನ್ ಅಳವಡಿಸಿ ಟ್ಯಾಂಕ್‌ಗೆ ನೀರು ಪೂರೈಕೆ ಮಾಡಲು ₹23 ಲಕ್ಷ ವೆಚ್ಚದಲ್ಲಿ ಟೆಂಡರ್ ಕಾಮಗಾರಿ ನಡೆದಿದೆ. ಆ ಕೆಲಸ ಇನ್ನೂ ಮುಗಿದಿಲ್ಲ.ತಾಲ್ಲೂಕು ಆಡಳಿತ ತಕ್ಷಣ ಚಿಂಚೋಳಿ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರು ಪೂರೈಕೆ ಮಾಡಬೇಕು.

‘ರಸ್ತೆ ತುಂಬ ಹದಗೆಟ್ಟಿದ್ದು, ತಾತ್ಕಾಲಿಕವಾಗಿಯಾದರೂ ದುರಸ್ತಿ ಮಾಡಬೇಕು’ ಎಂದು ಜಿ.ಪಂ ಮಾಜಿ ಸದಸ್ಯ ಸಿದ್ಧಾರ್ಥ ಬಸರಿಗಿಡದ ಆಗ್ರಹಿಸಿದರು.

ಅಧಿಕಾರಿಗಳು ಚುನಾವಣೆ ಕೆಲಸದಲ್ಲಿ ತೊಡಗಿದ್ದಾರೆ. ಇದರಿಂದ ಗ್ರಾಮಗಳ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಕಚೇರಿ ಆರಂಭಿಸಲಾಗಿದ್ದು, ಅದು ಯಾವಾಗಲೂ ಬೀಗ ಹಾಕಿರುತ್ತದೆ. ಹೀಗಾಗಿ ಜನರಿಗೆ ಅಧಿಕಾರಿಗಳು ದೊರೆಯುತ್ತಿಲ್ಲ ಎಂದು ತಿಳಿಸಿದರು.

**

ಚಿಂಚೋಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ಜನ ತೋಟಗಳಿಂದ ನೀರು ತರುವಂತಾಗಿದೆ. ಕೊಳವೆಬಾವಿ ಬತ್ತಿ ಹೋಗಿವೆ. ತಾಲ್ಲೂಕು ಆಡಳಿತ ಸ್ಪಂದಿಸಬೇಕು – ಸಿದ್ದಾರ್ಥ ಬಸರಿಗಿಡದ,ಜಿ.ಪಂ ಮಾಜಿ ಸದಸ್ಯ.

**

– ಶಿವಾನಂದ ಹಸರಗುಂಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.