ADVERTISEMENT

ರಸ್ತೆ ಬದಿಯಲ್ಲಿ ನಿರುಪಯುಕ್ತ ಕಲ್ಲುಗಳ ರಾಶಿ

ಚಿಂಚೋಳಿ– ತಾಂಡೂರು ಅಂತರ ರಾಜ್ಯ ರಸ್ತೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 8:37 IST
Last Updated 22 ಮೇ 2018, 8:37 IST
ಚಿಂಚೋಳಿ ತಾಂಡೂರು ರಸ್ತೆಯಲ್ಲಿ ನಿರುಪಯುಕ್ತ ಕಲ್ಲುಗಳನ್ನು ಸುರಿದಿರುವುದು
ಚಿಂಚೋಳಿ ತಾಂಡೂರು ರಸ್ತೆಯಲ್ಲಿ ನಿರುಪಯುಕ್ತ ಕಲ್ಲುಗಳನ್ನು ಸುರಿದಿರುವುದು   

ಚಿಂಚೋಳಿ: ತಾಲ್ಲೂಕಿನ ಚಿಂಚೋಳಿ– ತಾಂಡೂರು ಅಂತರ ರಾಜ್ಯ ರಸ್ತೆಯ ಎರಡು ಬದಿಗಳಲ್ಲಿ ನಿರುಪಯುಕ್ತ ಕಲ್ಲುಗಳು ಸುರಿಯಲಾಗುತ್ತಿದೆ.

ಮಿರಿಯಾಣದಿಂದ ಕಲ್ಲೂರುವರೆಗೆ ರಸ್ತೆ ಬದಿಯಲ್ಲಿ ಸುಣ್ಣದ ಕಲ್ಲಿನ ಚೂರುಗಳು, ನಿರುಪಯುಕ್ತ ಕಲ್ಲುಗಳು ಮತ್ತು ಕಲ್ಲು ಪಾಲೀಶ್‌ ಮಾಡಿದ ತ್ಯಾಜ್ಯ ಸುರಿಯಲಾಗಿದೆ.

ಇಲ್ಲಿನ ಸುಣ್ಣದ ಕಲ್ಲಿನ ಗಣಿಗಳಿಂದ ಹೇರಳವಾಗಿ ಕಲ್ಲು ತೆಗೆದು ನೆರೆಯ ತೆಲಂಗಾಣ ರಾಜ್ಯದ ತಾಂಡೂರಿಗೆ ಪೂರೈಸಲಾಗುತ್ತಿದೆ. ಜತೆಗೆ ಮಿರಿಯಾಣ ಮತ್ತು ಕಲ್ಲೂರು ಗ್ರಾಮದ ಸುಣ್ಣದ ಕಲ್ಲುಗಳ ಪಾಲೀಶ್‌ ಘಟಕಗಳಲ್ಲಿ ಪಾಲೀಶ್‌ ಮಾಡಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಆದರೆ ಈ ಪಾಲೀಶ್‌ ಘಟಕಗಳಲ್ಲಿನ ತ್ಯಾಜ್ಯ ಸುರಿಯಲು ಸೂಕ್ತ ಸ್ಥಳ ಇಲ್ಲದ ಕಾರಣ ಅವುಗಳನ್ನು ತಂದು ರಸ್ತೆಗೆ ಸುರಿಯುತ್ತಿರುವುದು ಕಂಡು ಬಂದಿದೆ.

ADVERTISEMENT

ಮಳೆಗಾಲದಲ್ಲಿ ಸುರಿದ ನೀರು ಡಾಂಬರ್‌ ರಸ್ತೆಯಿಂದ ಹೊರ ಹೋಗದಂತೆ ಕಲ್ಲು, ಮಣ್ಣು ಹಾಕಿದ್ದರಿಂದ ರಸ್ತೆ ಹಾಳಾಗುವ ಅಪಾಯ ಎದುರಾಗಿದೆ. ಇದರ ಜತೆಗೆ ಯಾವುದಾದರೂ ವಾಹನ ರಸ್ತೆಯಲ್ಲಿ ಕೆಟ್ಟರೆ ಅದನ್ನು ಡಾಂಬರ್‌ ರಸ್ತೆಯಿಂದ ಕೆಳಗಿಳಿಸಿ ರಸ್ತೆಯ ಬದಿಗೆ ನಿಲ್ಲಿಸಲು ಅವಕಾಶವಿಲ್ಲದ ರೀತಿಯಲ್ಲಿ ಕಲ್ಲು ಹಾಕಿರುವುದರಿಂದ ವಾಹನ ಚಾಲಕರು ತೊಂದರೆ ಎದುರಿಸುವಂತಾಗಿದೆ.

ಇಲ್ಲಿ ರಸ್ತೆ ಪಕ್ಕದಲ್ಲಿ ಕೇವಲ ಕಲ್ಲುಗಳ ಸಾಲು ಮಾತ್ರ ಗೋಚರಿಸುತ್ತದೆ. ಕಲ್ಲುಗಳನ್ನು ಪಾಲೀಶ್ ಮಾಡಿದ ನೀರನ್ನು ಕೂಡ ರಸ್ತೆಗೆ ಸುರಿಯಲಾಗುತ್ತಿದೆ. ಇದರಿಂದ ನೀರು ಒಣಗುತ್ತದೆ. ಆದರೆ ಸುಣ್ಣ ಅಲ್ಲಿಯೇ ಗಟ್ಟಿಯಾಗಿ ಚರಂಡಿ ತುಂಬಿಕೊಳ್ಳುತ್ತಿದೆ. ಡಾಂಬರ್‌ ರಸ್ತೆಯ ಎರಡು ಬದಿಗಳಲ್ಲಿ ಕಲ್ಲು, ಮಣ್ಣು ಸುರಿದಿದ್ದರಿಂದ ಚರಂಡಿಯೂ ಮುಚ್ಚಿದೆ.

ನಿರುಪಯುಕ್ತ ಕಲ್ಲುಗಳನ್ನು ರಸ್ತೆಗೆ ಸುರಿಯದಂತೆ ಕ್ರಮಕೈಗೊಳ್ಳ ಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವೀರಣ್ಣ ಕುಣಿಕೇರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.