ADVERTISEMENT

ರೈಲ್ವೆ ಸೇವೆ ವಿಸ್ತರಣೆಗೆ ಎಚ್‌ಕೆಸಿಸಿಐ ವಿರೋಧ

​ಪ್ರಜಾವಾಣಿ ವಾರ್ತೆ
Published 10 ಮೇ 2018, 10:43 IST
Last Updated 10 ಮೇ 2018, 10:43 IST

ಕಲಬುರ್ಗಿ: ಸೋಲಾಪುರ– ಯಶವಂತಪುರ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ನ (ರೈಲು ಸಂಖ್ಯೆ–22133/22134) ಸೇವೆಯನ್ನು ಹಾಸನದವರೆಗೆ ವಿಸ್ತರಿಸಬಾರದು ಎಂದು ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ಮನವಿ ಮಾಡಿದೆ.

ರೈಲ್ವೆ ಸಚಿವ ಪಿಯುಶ್ ಗೋಯಲ್ ಮತ್ತು ರೈಲ್ವೆ ಮಂಡಳಿ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಸಂಸ್ಥೆಯ ಅಧ್ಯಕ್ಷ ಅಮರನಾಥ ಸಿ.ಪಾಟೀಲ ಮತ್ತು ಗೌರವ ಕಾರ್ಯದರ್ಶಿ ಶಶಿಕಾಂತ ಬಿ. ಪಾಟೀಲ, ‘ಸೇವೆ ವಿಸ್ತರಣೆಯಿಂದ ಹೈದರಾಬಾದ್ ಕರ್ನಾಟಕ ಪ್ರದೇಶದ ಪ್ರಯಾಣಿಕರಿಗೆ ಬೇರೆ ಬೇರೆ ಸ್ವರೂಪದಲ್ಲಿ ತೊಂದರೆಯಾಗುತ್ತದೆ’ ಎಂದು ವಿವರಿಸಿದ್ದಾರೆ.

‘ಪ್ರಯಾಣಿಕರಿಗೆ ಮುಂಚಿತವಾಗಿ ಸೀಟು ಕಾಯ್ದಿರಿಸುವ ವಿಷಯದಲ್ಲಿ ಸಮಸ್ಯೆಯಾಗುತ್ತದೆ. ಸೋಲಾಪುರದಿಂದ ಹಾಸನದವರೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗುವುದರಿಂದ ಹೈ–ಕ ಪ್ರಯಾಣಿಕರಿಗೆ ಸುಲಭವಾಗಿ ಸೀಟು ಕಾಯ್ದಿರಿಸಲು ಸಾಧ್ಯವಾಗುವುದಿಲ್ಲ’ ಎಂದಿದ್ದಾರೆ.

ADVERTISEMENT

‘ರೈಲು ಸೇವೆ ವಿಸ್ತರಣಾ ಯೋಜನೆ ಕೈ ಬಿಡದಿದ್ದಲ್ಲಿ, ಅದೇ ರೈಲನ್ನು ಸೋಲಾಪುರದಿಂದ ಕಲಬುರ್ಗಿಯವರೆಗೆ ಫಾಸ್ಟ್‌ ಪ್ಯಾಸೆಂಜರ್ ಮತ್ತು ಕಲಬುರ್ಗಿಯಿಂದ ಬೆಂಗಳೂರುವರೆಗೆ ಸೂಪರ್‌ಫಾಸ್ಟ್ ಪ್ಯಾಸೆಂಜರ್ ಮಾದರಿಯಲ್ಲಿ ಸಂಚರಿಸುವಂತೆ ಮಾಡಬೇಕು. ಈ ರೀತಿಯ ವ್ಯವಸ್ಥೆ ಚೆನ್ನೈ ಮತ್ತು ಬೆಂಗಳೂರು ವಲಯದಲ್ಲಿ ಈಗಾಗಲೇ ಜಾರಿಯಲ್ಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.