ADVERTISEMENT

ವರ್ಷಕ್ಕೊಮ್ಮೆ ಬಂದು ಹೋಗುವ ಶಾಸಕನಲ್ಲ

ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 9:58 IST
Last Updated 17 ಮಾರ್ಚ್ 2018, 9:58 IST

ಚಿಂಚೋಳಿ: ‘ನಾನು ವರ್ಷಕ್ಕೊಮ್ಮೆ ಬಂದು ಹೋಗುವ ಶಾಸಕನಲ್ಲ. ಸದಾ ಜನರ ಜನರ ಸಮಸ್ಯೆಗೆ ಸ್ಪಂದಿಸುತ್ತ ಜನರ ಮಧ್ಯೆಯಿದ್ದು ಅಭಿವೃದ್ಧಿಯ ಬದ್ಧತೆ ಮತ್ತು ಬಡವರ ಪರ ಕಾಳಜಿಯಿಂದ ಕೆಲಸ ಮಾಡಿದ್ದೇನೆ’ ಎಂದು ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ್‌ ಹೇಳಿದರು.

ತಾಲ್ಲೂಕಿನ ಕೋಡ್ಲಿಯ ಕಂಟೆಪ್ಪ ಮಾಸ್ತರ್‌ ರಂಗ ಮಂದಿರದಲ್ಲಿ ಶುಕ್ರವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾನು ನಿತ್ಯ ಓಡಾಡುವುದನ್ನು ನೋಡುವ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್‌ ಚಾಲಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಎಲ್ಲಾ ಕಡೆ ಓಡಾಡುತ್ತ ಜನರಿಗಾಗಿ ಸಮಯ ನೀಡುತ್ತಿರುವುದನ್ನು ಅವರು ಶ್ಲಾಘಿಸುತ್ತಿದ್ದಾರೆ. ರಸ್ತೆಗಳು ಸುಧಾರಣೆ ಕಂಡಿವೆ. ದ್ವೇಷದ ರಾಜಕಾರಣ ಮಾಡಲು ಹೋಗಿಲ್ಲ. ರಾಜ್ಯ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದರು.

ADVERTISEMENT

‘ರಾಜ್ಯ ಸರ್ಕಾರ ಬಿಪಿಎಲ್‌ ಪಡಿತರ ಚೀಟಿ ವಿತರಣೆಗೆ ಕ್ರಾಂತಿಕಾರಕ ಹೆಜ್ಜೆ ಇಟ್ಟಿದೆ. ಆದಾಯ ಪ್ರಮಾಣ ಪತ್ರ ಮತ್ತು ಆಧಾರ್‌ ಕಾರ್ಡ್‌ ಲಗತ್ತಿಸಿ ಅರ್ಜಿ ಸಲ್ಲಿಸಿದರೆ ನಿಮಿಷದಲ್ಲಿ ಪಡಿತರ ಚೀಟಿ ದೊರೆಯುತ್ತದೆ’ ಎಂದರು.

ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರವಿರಾಜ ಕೊರವಿ ಮಾತನಾಡಿ, ‘ಅಂಬೇಡ್ಕರ್‌ ರಚಿಸಿದ ಸಂವಿಧಾನದಿಂದಲೇ ಸಂಸತ್ತಿಗೆ ಆಯ್ಕೆ ಆದವರು ಅದೇ ಸಂವಿಧಾನ ವಿರೋಧಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ’ ಎಂದು ಹೇಳಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಪ್ಪಣ್ಣ ಸಿರಸಗಿ, ಶಿವಶರಣಪ್ಪ ಸಜ್ಜನಶೆಟ್ಟಿ, ಅಣವೀರಯ್ಯ ಸ್ವಾಮಿ, ಅಣ್ಣಾರಾವ್‌ ಅರಳಿ, ಭರತ ಬುಳ್ಳಾ, ಶಬ್ಬೀರಮಿಯಾ ಸೌದಾಗರ, ಬಸವರಾಜ ಕೋಲಕುಂದಿ, ಮಲ್ಲಪ್ಪ ಚಿಂತಕುಂಟಾ, ಅಣ್ಣಾರಾವ್‌ ನಾಟಿಕಾರ, ಖಾಜಾ ಪಟೇಲ್‌ ಇದ್ದರು. ಗ್ರಾ.ಪಂ ಅಧ್ಯಕ್ಷೆ ಮಲ್ಲಮ್ಮ ಮರೆಪ್ಪ ದೊಡ್ಡಮನಿ ಇದ್ದರು. ಅಲೀಮ ನಾಯಕೋಡಿ ಸ್ವಾಗತಿಸಿದರು. ಶಿವು ಸುಲೇಪೇಟ ನಿರೂಪಿಸಿದರು. ತುಳಸಿರಾಮ ಮಂತಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.