ADVERTISEMENT

‘ವಿದ್ಯಾರ್ಥಿನಿ ಕೊಲೆ: ಸಿಬಿಐಗೆ ವಹಿಸಿ’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 7:01 IST
Last Updated 23 ಡಿಸೆಂಬರ್ 2017, 7:01 IST

ಕಲಬುರ್ಗಿ: ವಿಜಯಪುರದಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್‌ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉತ್ತರ ವಲಯದ ಮುಖಂಡರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಘೋಷಣೆ ಕೂಗಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ, ಕಿರುಕುಳ ನಡೆಯುತ್ತಿದೆ. ದಲಿತರಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲದಂತಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ನಾಲ್ಕು ಜನ ಆರೋಪಿಗಳನ್ನು ಬಂಧಿಸಿ, ಉಗ್ರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಎಸ್‌ಸಿ, ಎಸ್‌ಟಿ ಉತ್ತರ ವಲಯದ ಅಧ್ಯಕ್ಷ ಅರವಿಂದ ರಂಜೇರಿ, ಮುಖಂಡರಾದ ದೇವೀಂದ್ರ ಹಸನಾಪುರ, ದಿನೇಶ ಬಿ.ಔರಾದಕರ್, ಪ್ರವೀಣ ಎಲ್.ಜಾಧವ್, ಸಂಗಮನಾಥ, ಸುರೇಶ ಎಲ್.ಮಾರಿಹಾಳ ಇದ್ದರು.

ADVERTISEMENT

ಕರ್ನಾಟಕ ದಲಿತ ಜನ ಜಾಗೃತಿ ವೇದಿಕೆ: ‘ವಿಜಯಪುರದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು ಮತ್ತು ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ದಲಿತ ಜನ ಜಾಗೃತಿ ವೇದಿಕೆಯು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

‘ಆರೋಪಿಗಳನ್ನು ಗಡಿಪಾರು ಮಾಡಬೇಕು. ವಿದ್ಯಾರ್ಥಿನಿ ಪೋಷಕರಿಗೆ ಸರ್ಕಾರಿ ಉದ್ಯೋಗ ಕೊಟ್ಟು, ₹55 ಲಕ್ಷ ಸಹಾಯಧನ ನೀಡಬೇಕು. ವಿಜಯಪುರದ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿತು.

ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಶರ್ಮಾ, ಜಿಲ್ಲಾ ಘಟಕದ ಅಧ್ಯಕ್ಷ ನಾಗೀಂದ್ರ ಜೋಗನ್‌, ಮಾಪಣ್ಣ ಎಸ್‌.ತಳಕೇರಿ, ನಾಗೇಶ ಎಸ್‌.ಬದರೆ, ರೇವಣಸಿದ್ದಪ್ಪ ಪಾಳಾ, ಲಾಲಸಿಂಗ್‌ ಎಂ., ಭೀಮರಾವ ಸಾಗರ ಇದ್ದರು.

ದಲಿತ ಸಂಘರ್ಷ ಸಮಿತಿ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಲಕ್ಷ್ಮಿನಾರಾಯಣ ಬಣ) ನಗರ ಘಟಕ ಖಂಡಿಸಿದೆ.

‘ಆರೋಪಿಗಳನ್ನು ಬಂಧಿಸಿ, ಶಾಲಾ ಆಡಳಿತ ಮಂಡಳಿಯನ್ನು ತನಿಖೆಗೆ ಒಳಪಡಿಸಬೇಕು. ಮೃತಳ ಕುಟುಂಬದ ಸದಸ್ಯರಿಗೆ  ₹50 ಲಕ್ಷ ಧನಸಹಾಯ ನೀಡಿ, ಉದ್ಯೋಗ ನೀಡಬೇಕು’ ಎಂದು ಸಂಚಾಲಕರಾದ ಶಿವಕುಮಾರ ಆಜಾದಪುರ, ಸಾತಪ್ಪ ತೆಗನೂರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.