ADVERTISEMENT

ಶಾಲೆ, ಜಿಲ್ಲೆಗೆ ಹೆಮ್ಮೆ ತಂದ ಸಾಧಕ; ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 6:41 IST
Last Updated 14 ಜೂನ್ 2017, 6:41 IST
ಕಲಬುರ್ಗಿಯ ನೊಬೆಲ್‌ ನರ್ಸರಿ ಮತ್ತು ಪ್ರೈಮರಿ ಶಾಲೆಯಲ್ಲಿ ಮಂಗಳವಾರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 25ನೇ ರ್‌್ಯಾಂಕ್ ಗಳಿಸಿದ ಶೇಖ್ ತನ್ವೀರ್‌ ಆಸೀಫ್‌ ಅವರನ್ನು ಸನ್ಮಾನಿಸಲಾಯಿತು
ಕಲಬುರ್ಗಿಯ ನೊಬೆಲ್‌ ನರ್ಸರಿ ಮತ್ತು ಪ್ರೈಮರಿ ಶಾಲೆಯಲ್ಲಿ ಮಂಗಳವಾರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 25ನೇ ರ್‌್ಯಾಂಕ್ ಗಳಿಸಿದ ಶೇಖ್ ತನ್ವೀರ್‌ ಆಸೀಫ್‌ ಅವರನ್ನು ಸನ್ಮಾನಿಸಲಾಯಿತು   

ಕಲಬುರ್ಗಿ: ಅಲ್ಲಿ ನೆರೆದ ಪ್ರತಿಯೊಬ್ಬರ ಮೊಗದಲ್ಲೂ ಹೆಮ್ಮೆಯ ಭಾವ, ವಿಶಿಷ್ಟ ಸಾಧನೆ ತೋರಿದ ವ್ಯಕ್ತಿ ನೋಡಿ ಮಾತನಾಡಿಸುವ ತವಕ. ಕುಟುಂಬದಲ್ಲೇ ಒಬ್ಬರು ಎತ್ತರಕ್ಕೇರಿ ಗುರಿ ಮುಟ್ಟಿದಷ್ಟು ಸಂಭ್ರಮ, ಇಡೀ ಆವರಣದಲ್ಲಿ ಹಬ್ಬದ ವಾತಾವರಣ.

ನಗರದ ನೊಬೆಲ್ ನರ್ಸರಿ ಮತ್ತು ಪ್ರೈಮರಿ ಶಾಲೆಯಲ್ಲಿ ಮಂಗಳವಾರ ಅಕ್ಷರಶಃ ಸಂತಸ ಆವರಿಸಿಕೊಂಡಿತ್ತು. ಶಾಲೆಯ ಸಿಬ್ಬಂದಿ ಮತ್ತು ಮಕ್ಕಳಲ್ಲಿ ಈ ರೀತಿ ಹೆಮ್ಮೆ ಮೂಡಿಸಲು ಕಾರಣ­ರಾದವರು ಶೇಖ್ ತನ್ವೀರ್‌ ಆಸೀಫ್. ಯುಪಿಎಸ್‌ಸಿ ಪರೀಕ್ಷೆಯಲ್ಲಿ 25ನೇ ರ್‌್ಯಾಂಕ್‌ ಗಳಿಸಿದ ಕಾರಣ  ಶಾಲೆ ಆಡಳಿತ ಮಂಡಳಿಯು ಅವರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ತನ್ವೀರ್‌ ಆಸೀಫ್‌ ಅವರನ್ನು ಶಾಲೆಯ ಹಾಲಿ ಮತ್ತು ನಿವೃತ್ತ ಸಿಬ್ಬಂದಿ­ಯಲ್ಲದೇ ವಿದ್ಯಾರ್ಥಿಗಳ ಪೋಷಕರು ಅಭಿನಂದಿಸಿದರು. ಸಾಧನೆಯನ್ನು ಶ್ಲಾಘಿಸಿದ್ದು ಅಲ್ಲದೇ ಅವರಿಂದ ವಿದ್ಯಾ ರ್ಥಿಗಳು ಮಾರ್ಗದರ್ಶನ ಪಡೆದರು. ಶಿಕ್ಷಕರು ಮತ್ತು ಶಿಕ್ಷಕಿಯರು ತನ್ವೀರ್‌ ಅವರಿಗೆ ಪಾಠ ಮಾಡಿದ್ದನ್ನು ಸ್ಮರಿಸಿ ಕೊಂಡರು. ಅವರ ಆಶಯ, ಕನಸುಗಳು ಈಡೇರಲಿಯೆಂದು ಹಾರೈಸಿದರು.

ADVERTISEMENT

‘ತರಗತಿಗಳಿಗೆ ತಪ್ಪದೇ ಹಾಜರಾಗು­ತ್ತಿದ್ದ ತನ್ವೀರ್‌ ಈ ಮಟ್ಟದ ಸಾಧನೆ ಮಾಡಿದ್ದು ಎಲ್ಲರಿಗೂ ಹೆಮ್ಮೆ ತರಿಸಿದೆ. ಚಿಕ್ಕವಯಸ್ಸಿನಲ್ಲೇ ಏಕಾಗ್ರತೆ ಮತ್ತು ತನ್ಮಯತೆ ರೂಢಿಸಿಕೊಂಡ ಅವರು ಬಹುತೇಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದರು. ನಿರ್ದಿಷ್ಟ ಗುರಿ ತಲುಪುವವರೆಗೆ ಅವರು ಪಟ್ಟ ಶ್ರಮ ಎಲ್ಲರಿಗೂ ಮಾದರಿ’ ಎಂದು ಪ್ರಾಂಶುಪಾಲರಾದ ನುಜ್ಹತ್‌ ಸಲಾಹುದ್ದೀನ್ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಫಾತಿಮಾ ಬಿ. ಮಾತನಾಡಿ, ‘ಸಂಕಷ್ಟಗಳ ಮಧ್ಯೆಯೂ ಆತ್ಮವಿಶ್ವಾಸ­ದಿಂದ ಮುನ್ನಡೆದರೆ ಯಾವುದೂ ಕೂಡ ಕಷ್ಟವಾಗದು ಎಂಬುದನ್ನು ತನ್ವೀರ್‌ ತೋರಿಸಿಕೊಟ್ಟಿದ್ದಾರೆ. ಹಿಂದುಳಿದ ಪ್ರದೇಶದಲ್ಲೂ ಪ್ರತಿಭೆಗಳಿದ್ದು, ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಬೇಕಿದೆ ಎಂಬುದಕ್ಕೆ ತನ್ವೀರ್‌ ಉದಾ ಹರ­ಣೆಯಾಗಿದ್ದಾರೆ’ ಎಂದರು.

‘ಅಲ್ಪಸಂಖ್ಯಾತ ಸಮುದಾಯದ ಪ್ರತಿಭೆಗಳಿಗೆಂದೇ ರಾಜ್ಯ ಸರ್ಕಾರದಿಂದ ಹಲವು ಯೋಜನೆಗಳಿವೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ನೆರವು ಸಿಗುತ್ತದೆ. ಕಷ್ಟಪಟ್ಟು ಸಾಧನೆ ಮಾಡುವವರಿಗೆ ವಿಪುಲ ಅವಕಾಶಗಳಿವೆ. ಯಾವುದಕ್ಕೂ ಎದೆಗುಂದ ಬಾರದು’ ಎಂದರು.

ಶೇಖ್ ತನ್ವೀರ್ ಆಸೀಫ್ ಮತ್ತು ಅವರ ತಾಯಿ ಜೈನಬ್ ಫಾತಿಮಾ ಅವರನ್ನು ಸನ್ಮಾನಿಸಲಾಯಿತು.ಎಂ. ಆರ್‌.ಟ್ರಸ್ಟ್‌ ಕಾರ್ಯದರ್ಶಿ ಮುಖಾಷಫ್ ಸಿತಾರಾ, ಖಜಾಂಚಿ ಮಹಮ್ಮದ್ ಮಿಸ ಬಾಹುದ್ದೀನ್ ಪಾಶಾ, ಟ್ರಸ್ಟಿ ಮಹಮ್ಮದ್ ಮಿರಾಜುದ್ದೀನ್, ಉಪಪ್ರಾಂಶುಪಾಲ ನಸ್ರೀನ್ ಫರ್ಜಾನಾ ಇದ್ದರು.

ತಾಯಿಯೇ ಸ್ಫೂರ್ತಿ...
‘ಶಾಲೆಯಲ್ಲಿ ಶೇ 70ಕ್ಕೂ ಹೆಚ್ಚು ಅಂಕ ಗಳಿಸಲಿಲ್ಲ. ಸದಾ ಮಾತ­ನಾಡಿ, ಕೀಟಲೆ ಮಾಡುತ್ತಿದ್ದೆ. ಐಎಎಸ್‌ ಅಧಿಕಾರಿಯಾಗುವ ಕನಸು ಕಂಡಿರಲಿಲ್ಲ. ಆದರೆ ತಾಯಿಯ ಮಾರ್ಗದರ್ಶನ, ನಿರಂತರ ಅಧ್ಯಯನ ಮತ್ತು ಪರಿಶ್ರಮದಿಂದ ಹೆಚ್ಚಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ 25ನೇ ರ್‌್ಯಾಂಕ್‌ ಗಳಿಸಲು ಸಾಧ್ಯವಾಯಿತು’ ಎಂದು ಶೇಖ್ ತನ್ವೀರ್ ಆಸೀಫ್ ತಿಳಿಸಿದರು.

‘ಶಾಲೆಯಲ್ಲಿ ಪ್ರತಿ ತಿಂಗಳು ಶುಲ್ಕ ಕಟ್ಟುವ, ಕುಟುಂಬ ನಿರ್ವಹಿಸುವ ಮತ್ತು ಬದುಕು ಕಟ್ಟಿಕೊಳ್ಳುವ ಸಂಕಷ್ಟ ಹೇಳಿಕೊಳ್ಳುತ್ತಿದ್ದ ತಾಯಿಯ ಕನಸನ್ನು ನನಸು ಮಾಡಬೇಕೆಂದು ಪಣತೊಟ್ಟೆ. ಬದುಕಿನುದ್ದಕ್ಕೂ ಹಲವು ಅಡತಡೆಗಳು ಎದುರಾ ದವು. ಆದರೆ ಗುರಿ ಮುಟ್ಟುವವರೆಗೆ ಯಾವುದೇ ಕಾರಣಕ್ಕೂ ವಿರಮಿಸಲು ಬಯಸಲಿಲ್ಲ’ ಎಂದರು.

‘ಯುಪಿಎಸ್‌ಸಿ ಪರೀಕ್ಷೆ ಎದುರಿ ಸುವುದು ಆರಂಭದಲ್ಲಿ ಬೃಹತ್‌ ಪರ್ವತದಂತೆ ಕಾಣಿಸಿತು. ಎಷ್ಟೇ ಕಠಿಣವಾದರೂ ಹಿನ್ನಡೆ ಆಗಬಾ ರದೆಂದು ನಿಶ್ಚಯಿಸಿದ ನಾನು ದಿನಕ್ಕೆ 10 ಗಂಟೆಗೂ ಹೆಚ್ಚು ಹೊತ್ತು ಅಧ್ಯಯನ ಮಾಡಿದೆ. ದೆಹಲಿಯಲ್ಲಿ ತರಬೇತಿ, ತಜ್ಞರ ಮಾರ್ಗದರ್ಶನ ಪಡೆದೆ. ಒಂದೊಂದು ಕ್ಷಣವೂ ನನಗೆ ಅಮೂಲ್ಯ’ ಎಂದು ವಿವರಿಸಿದರು.

‘ನೊಬೆಲ್‌ ಶಾಲೆಯಲ್ಲಿ ಎಲ್‌ಕೆಜಿಯಿಂದ ಓದಿದ ನನಗೆ ಪ್ರತಿಯೊಬ್ಬ ಶಿಕ್ಷಕ, ಶಿಕ್ಷಕಿಯರು ಹಲವು ಹಂತಗಳಲ್ಲಿ ನೆರವಾದರು. ಶಿಕ್ಷಕಿಯರಾದ ಲಕ್ಷ್ಮಿ, ಮಧುಮತಿ, ನೂರಿನಾ, ಅನುರಾಧಾ, ಜಾಯ್ಸ್, ಶಶಿಕಲಾ ಮುಂತಾದವರನ್ನು ಎಂದಿಗೂ ಮರೆಯುವುದಿಲ್ಲ. ಅವ ರಿಂದ ಹಲವಾರು ವಿಷಯಗಳನ್ನು ಕಲಿತಿದ್ದೇನೆ’ ಎಂದು ಸ್ಮರಿಸಿದರು.

‘ಕಠಿಣ ಪರಿಶ್ರಮ, ಶ್ರದ್ಧೆ ಮತ್ತು ಬದ್ಧತೆಯಿದ್ದಲ್ಲಿ ಯಾರು ಬೇಕಾದರೂ ಐಎಎಸ್ ಅಧಿಕಾರಿ ಆಗಬಹುದು. ಕಠಿಣ ಸವಾಲು ಎಂಬ ಭಾವನೆಯಲ್ಲಿ ಯಾರೂ ಹಿಂಜರಿಯಬಾರದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೊದ ಲನೇ ಯತ್ನದಲ್ಲೇ ಯಶಸ್ವಿಯಾಗ ಲಿಕ್ಕಿಲ್ಲ. ಆದರೆ ನಿರಂತರ ಪ್ರಯತ್ನ ದಿಂದ ಖಂಡಿತ ಯಶಸ್ಸು ಸಿಗುತ್ತದೆ’ ಎಂದು ಸಂದೇಶ ನೀಡಿದರು.

* * 

ಎಂಜಿನಿಯರ್‌ ಅಥವಾ ವೈದ್ಯಕೀಯ ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಬಹುದು. ಆಸಕ್ತಿ ಮತ್ತು ಪ್ರತಿಭೆ ಅನುಸಾರ ಪ್ರೋತ್ಸಾಹ ದೊರೆಯಬೇಕು.
ಶೇಖ್ ತನ್ವೀರ್ ಆಸೀಫ್
ಯುಪಿಎಸ್‌ಸಿ 25ನೇ ಸಾಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.