ಗುಲ್ಬರ್ಗ: ಈಗೀಗ ಕೆಲವು ಕಡೆಗಳಲ್ಲಿ ನಿರ್ಮಾಣ ಹಂತದಲ್ಲಿರುವ ಸಿಮೆಂಟ್ ಕಾಂಕ್ರೀಟ್ ರಸ್ತೆಗಳನ್ನು ಹೊರತುಪಡಿಸಿದರೆ, ಗುಲ್ಬರ್ಗದ ಸಂತ್ರಾಸವಾಡಿ ಪ್ರದೇಶವೆಲ್ಲವೂ ಸಮಸ್ಯೆಗಳ ಸಂಗಮ. ಕಿರಿದಾದ ದಾರಿ, ದಾರಿಯುದ್ದಕ್ಕೂ ಪಾಲಿಕೆ ನೀರು ಪಡೆಯಲು ಅಗೆದ ದೊಡ್ಡ ಕಂದಕಗಳು, ಹರಡಿದ ತ್ಯಾಜ್ಯ, ದುರ್ವಾಸನೆ, ಚರಂಡಿಗಳ ನಿರ್ವಹಣೆಯಿಲ್ಲದೆ ಮನೆಗಳ ಮುಂದೆಲ್ಲ ರಾಡಿ ವಾತಾವರಣ; ಇವೆಲ್ಲವೂ ಕೂಡಿಕೊಂಡಿರೆ, ಅದು ಸಂತ್ರಾಸವಾಡಿ.
ಸಾರ್ವಜನಿಕ ಬೀದಿಗಳನ್ನು ಆಕ್ರಮಿಸಿಕೊಂಡು ಮರಗಳನ್ನು ನೆಟ್ಟಿರುವುದು, ಕಟ್ಟೆ ನಿರ್ಮಿಸಿಕೊಂಡಿರುವುದರಿಂದ ಗಾಜಿಪುರ, ಸಿದ್ದೇಶ್ವರ ನಗರದಲ್ಲಿ ಸಂಚರಿಸಲು ಕಷ್ಟಪಡಬೇಕಾದ ಸ್ಥಿತಿ ಇದೆ.
ನೀರಿನ ಬಿಲ್ ಕಟ್ಟುವವರಿಗಾಗಿ 24 ಗಂಟೆ ನೀರಿನ ಲಭ್ಯತೆ ಈ ಪ್ರದೇಶದ ಜನರ ಭಾಗ್ಯವಾದರೂ, ವರ್ಷದುದ್ದಕ್ಕೂ ಗಲೀಜು ನೀರು ಪೂರೈಕೆಯಾಗುತ್ತಿರುವುದು ಮಾತ್ರ ದೌರ್ಬಾಗ್ಯ. ಸಿದ್ಧೇಶ್ವರ ನಗರದಲ್ಲಿ ಕಸ ಹಾಕಲು ಕಂಟೇನರ್ ಇಡದೇ ಇರುವುದರಿಂದ ಬಡಾವಣೆಯ ಪ್ರತಿ ಮೂಲೆಗಳು ತಿಪ್ಪೆಯಾಗಿವೆ. ತಿಪ್ಪೆ ಹುಡುಕಿಕೊಂಡು ಬರುವ ನಾಯಿಗಳ ಹಿಂಡು ಸದಾ ಹಾಜರಿರುತ್ತದೆ. ಹೀಗಾಗಿ ಸಂಜೆ ಹೊತ್ತಿನಲ್ಲಿ ನಡೆದುಕೊಂಡು ಹೋಗುವುದು ದುಸ್ತರ. ಮಹಿಳೆಯರು, ಮಕ್ಕಳಂತೂ ಹೆದರಿಕೆಯಿಂದಲೇ ಹೆಜ್ಜೆ ಹಾಕಬೇಕಾದ ಸ್ಥಿತಿ ಇದೆ.
ತುಂಬಾ ಹಳೇ ಬಡಾವಣೆ ಇದಾಗಿರುವುದರಿಂದ ಈ ಪ್ರದೇಶದಲ್ಲಿ ಯಾವ ರಸ್ತೆಯು ನೇರವಾಗಿಲ್ಲ. ಬಡಾವಣೆಯ ಪ್ರವೇಶದಲ್ಲಿ ವಿಶಾಲವಾದ ರಸ್ತೆ ಸಿಗುತ್ತದೆ, ಒಂದಿಷ್ಟು ಮುಂದೆ ಸಾಗುತ್ತಿದ್ದಂತೆಯೆ ರಸ್ತೆಗೆ ಅಡ್ಡಲಾಗಿ ಕಟ್ಟಡ ಕಾಣಿಸಿಕೊಳ್ಳುತ್ತದೆ. ಯಾವ ರಸ್ತೆ ಎಲ್ಲಿಗೆ ತಲುಪುತ್ತದೆ ಎಂದು ಊಹಿಸಿಕೊಳ್ಳುವುದಕ್ಕೂ ಆಗುವುದಿಲ್ಲ. ಅಷ್ಟೊಂದು ಸಂದಿಗೊಂದಿಗಳ ಪ್ರದೇಶವಿದು. ಸಂದಿಗಳಲ್ಲಿ ಸಂಚರಿಸುವಾಗ ಸ್ವಲ್ಪ ಆಯ ತಪ್ಪಿದರೂ ಹೊಂಡಕ್ಕೆ ಬೀಳುವುದು ಗ್ಯಾರಂಟಿ. ನೀರು ಹಿಡಿದುಕೊಳ್ಳಲು ಮನೆಗಳ ಬಾಗಿಲಿಗೆ ಹೊಂದಿಕೊಂಡು ಜನರು ಕಂದಕಗಳನ್ನು ಹಾಕಿದ್ದಾರೆ.
ಇಂತಹ ಕಡೆಗಳಲ್ಲಿ ಮನೆಗೆ ನೀರು ಹಿಡಿದುಕೊಂಡ ಬಳಿಕವೂ ಸುಖಾಸುಮ್ಮನೆ ಹರಿದು ಚರಂಡಿ ಪಾಲಾಗುವುದು ತೀರಾ ಸಾಮಾನ್ಯವಾಗಿ ಕಣ್ಣಿಗೆ ಬೀಳುವ ಚಿತ್ರಣ. ಜನರು ವ್ಯವಸ್ಥಿತವಾಗಿ ನೀರು ಪಡೆಯುವಂತಾಗಲು ಸಾಕಷ್ಟು ಸಾರ್ವಜನಿಕ ನಲ್ಲಿಗಳನ್ನು ನಿರ್ಮಿಸಿಕೊಟ್ಟಿದ್ದರೆ, ಬಹುಶ ಈ ಸಮಸ್ಯೆ ಇರುವುದಿಲ್ಲ.
ಈ ಪ್ರದೇಶದ ಮುಖ್ಯರಸ್ತೆಗಳ ಸ್ಥಿತಿ ಆಯೋಮಯ. ಜಟಪಟ ಬಾಬೀ ದರ್ಗಾದಿಂದ ಸೂಪರ್ ಮಾರ್ಕೆಟ್‌ಗೆ ಸಂಪರ್ಕಿಸುವ ರಸ್ತೆಯಲ್ಲಿ ಬೈಕ್ ಓಡಿಸುವುದು ದೊಡ್ಡ ಸಾಹಸ. ರಸ್ತೆಯ ಅರ್ಧ ಭಾಗ ಕೊಚ್ಚಿಹೋಗಿದೆ. ಆಯತಪ್ಪಿ ಬೈಕ್ ಸವಾರರು ಜಾರಿ ಬೀಳುವುದನ್ನು ಇನ್ನೂ ತಪ್ಪಿಸಲು ಸಾಧ್ಯವಾಗುತ್ತಿಲ್ಲ.
ನಿವಾಸಿಗಳಿಗೆ ಸಂಕಟ ತಂದ ರುದ್ರಭೂಮಿ:
ಕಸದ ರಾಶಿ, ಅವ್ಯವಸ್ಥಿತ ರಸ್ತೆಗಳಿಗಿಂತ ಈ ಬಡಾವಣೆಯ ಜನರಿಗೆ ಇನ್ನೊಂದು ದೊಡ್ಡ ಸಮಸ್ಯೆಯೆಂದರೆ, ವಾಸದ ಮನೆಗಳ ನಡುವೆ ಇರುವ ರುದ್ರಭೂಮಿ. ಇದರಿಂದ ಸಹಿಸಲಸಾಧ್ಯ ಸಂಕಟವನ್ನು ಇಲ್ಲಿನ ಜನ ಅನುಭವಿಸುತ್ತಿದ್ದಾರೆ. `ದಿನ ಸಾಯುವವರಿಗೆ ಅಳುವವರ‌್ಯಾರು~ ಎನ್ನುವಂತೆ ದಿನಾಲೂ ಸಾವು, ನೋವು ನೋಡಿನೋಡಿ ಮನಸ್ಸು ಗಟ್ಟಿಮಾಡಿಕೊಳ್ಳಬೇಕಾದ ದುಃಸ್ಥಿತಿ ಇಲ್ಲಿನ ನಿವಾಸಿಗಳದ್ದಾಗಿದೆ.
ಶವ ಸುಡುವುದರಿಂದ ಹರಡುವ ಹೊಗೆ, ಅದರ ವಾಸನೆಯನ್ನು ಸಹಿಸಿಕೊಳ್ಳಲು ಸುತ್ತಮುತ್ತಲಿನ ಜನರು ಮನೆ ಬಾಗಿಲು, ಕಿಟಕಿಗಳನ್ನು ಭದ್ರಪಡಿಸಿಕೊಂಡು ಕುಳಿತುಕೊಳ್ಳಬೇಕು. ಶುದ್ಧಗಾಳಿ, ಶುದ್ಧನೀರು ಬರೀ ಕನಸಾಗಿಯೇ ಉಳಿದಿವೆ. ಇವೆರಡನ್ನು ಪಡೆಯಲು ಕೆಲವರು ಹಣ ಖರ್ಚು ಮಾಡುತ್ತಾರೆ. ಬಡವರೆ ಹೆಚ್ಚಾಗಿರುವ ಸಂತ್ರಾಸವಾಡಿಯಲ್ಲಿ ಎಲ್ಲರೂ ಹಣಕೊಟ್ಟು ನೀರು ಖರೀದಿಸುವುದು ಅಸಾಧ್ಯ.
ಕೊನೆಗೆ ಆಸ್ಪತ್ರೆಗೆ ಹಣ ಕಟ್ಟುವ ಸ್ಥಿತಿ ಅವರದ್ದಾಗಿದೆ. ಜನವಸತಿ ಪ್ರದೇಶದಿಂದ ಸ್ಮಶಾನ ಸ್ಥಳಾಂತರಿಸಬೇಕು ಎಂದು ಸಿದ್ಧೇಶ್ವರ ನಗರ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿಕೊಂಡಿದ್ದಾರೆ. ಆಶ್ವಾಸನೆ ಕೊಟ್ಟು ವರ್ಷಗಳು ಉರುಳುತ್ತಿವೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವಾಗುತ್ತಿಲ್ಲ. ವಿದ್ಯುತ್ ಚಿತಾಗಾರವಾಗಿದ್ದರೆ ಸಮಸ್ಯೆಯ ತೀವ್ರತೆ ಅಷ್ಟೊಂದು ಇರುತ್ತಿರಲಿಲ್ಲ. ಈಗಲಾದರೂ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಸಂತ್ರಾಸವಾಡಿಯ ಜನರ ಬವಣೆಗಳಿಗೆ ಕಿವಿಕೊಟ್ಟು, ಸೂಕ್ತ ವ್ಯವಸ್ಥೆಗೆ ಮುಂದಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.