ADVERTISEMENT

ಸಂಪುಟ ಸಭೆಯ ಟಿಪ್ಪಣಿ ಹೊತ್ತಿಸಿದ ಕಿಡಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 6:42 IST
Last Updated 14 ಮಾರ್ಚ್ 2018, 6:42 IST
ಬಸವರಾಜ ರಾಯರಡ್ಡಿ ಹಾಗೂ ಡಾ.ಶರಣಪ್ರಕಾಶ ಪಾಟೀಲ
ಬಸವರಾಜ ರಾಯರಡ್ಡಿ ಹಾಗೂ ಡಾ.ಶರಣಪ್ರಕಾಶ ಪಾಟೀಲ   

ಕಲಬುರ್ಗಿ: ಹೈದರಾಬಾದ್‌ ಕರ್ನಾಟಕ ಪ್ರದೇಶದ 371 (ಜೆ) ಮೀಸಲಾತಿ ವ್ಯಾಪ್ತಿಗೆ ಗದಗ ಜಿಲ್ಲೆ ರೋಣ ತಾಲ್ಲೂಕಿನ ಕೆಲ ಹಳ್ಳಿಗಳ ಸೇರ್ಪಡೆ ವಿಷಯವಾಗಿ ಸಚಿವ ಸಂಪುಟ ಸಭೆಗೆ ಮಂಡಿಸಿದ ಟಿಪ್ಪಣಿ ಈ ಭಾಗದಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ.

‘ಹೈದರಾಬಾದ್‌ ಕರ್ನಾಟಕ ಪ್ರದೇಶದ 371 (ಜೆ) ವ್ಯಾಪ್ತಿಗೆ ಅನ್ಯ ಜಿಲ್ಲೆಯ ಹಳ್ಳಿಗಳ ಸೇರ್ಪಡೆ ಮಾಡಿಲ್ಲ, ಮಾಡುವುದೂ ಇಲ್ಲ’ ಎಂಬುದು ಎಚ್‌ಕೆಆರ್‌ಡಿಬಿ ಅಧ್ಯಕ್ಷ, ಉನ್ನತ ಶಿಕ್ಷಣ ಬಸವರಾಜ ರಾಯರಡ್ಡಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಸಮಜಾಯಿಷಿ.

‘ಹರಪನಹಳ್ಳಿ ಮತ್ತು ಗದಗ ಜಿಲ್ಲೆ ರೋಣ, ಮುಂಡರಗಿ ತಾಲ್ಲೂಕಿನ ಆರು ಹಳ್ಳಿಗಳನ್ನು 371 (ಜೆ) ವ್ಯಾಪ್ತಿಗೆ ಸೇರಿಸಬೇಕು ಎಂಬ ಎರಡು ಅರ್ಜಿಗಳು ಎಚ್‌.ಕೆ. ಪಾಟೀಲ ನೇತೃತ್ವದ ಸಂಪುಟ ಉಪ ಸಮಿತಿಗೆ ಸಲ್ಲಿಕೆಯಾಗಿದ್ದವು. ಆ ಅರ್ಜಿಗಳನ್ನು ಉಪ ಸಮಿತಿಯು ಸಂಪುಟ ಸಭೆಗೆ ಕಳಿಸಿತ್ತು. ಹರಪನಹಳ್ಳಿ ಹಿಂದೆ ಈ ಭಾಗದಲ್ಲೇ ಇತ್ತು. ಹೀಗಾಗಿ ಅದಕ್ಕೆ ಒಪ್ಪಿಗೆ ಸೂಚಿಸಲಾಯಿತು. ಇನ್ನೊಂದು ಪ್ರಸ್ತಾವ ತಿರಸ್ಕರಿಸಲಾಗಿದೆ. ಶಾಂತಗಿರಿ ಮತ್ತು ಇಟಗಿ ಗ್ರಾಮಗಳು ಹಿಂದೆ ಯಲಬುರ್ಗಾ ತಾಲ್ಲೂಕಿನಲ್ಲಿದ್ದವು. ಆದರೂ, ನಾನು ಒಪ್ಪಿಲ್ಲ. ಈ ವಿಷಯದಲ್ಲಿ ಗೊಂದಲ ಬೇಡ’ ಎಂಬುದು ರಾಯರಡ್ಡಿ ಮನವಿ.

ADVERTISEMENT

ಸಚಿವ ಸಂಪುಟದ ಟಿಪ್ಪಣಿಯಲ್ಲಿ ಏನಿದೆ?: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರ ಸಹಿ ಇರುವ (ಸಿ.251/2018) ಸಚಿವ ಸಂಪುಟ ಟಿಪ್ಪಣಿಯಲ್ಲಿ ಹೀಗಿದೆ:

ಹರಪನಹಳ್ಳಿ ತಾಲ್ಲೂಕು ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿತ್ತು. ಜಿಲ್ಲೆಗಳ ಪುನರ್‌ ವಿಂಗಡಣೆ ಸಂದರ್ಭದಲ್ಲಿ ಅದನ್ನು ದಾವಣಗೆರೆ ಜಿಲ್ಲೆಗೆ ಸೇರಿಸಲಾಯಿತು. ಈ ತಾಲ್ಲೂಕನ್ನು ಹಿಂದೆ ಇದ್ದಂತೆ ಮತ್ತೆ ಬಳ್ಳಾರಿ ಜಿಲ್ಲೆಗೆ ಸೇರಿಸಿ 371 (ಜೆ) ಸೌಲಭ್ಯವನ್ನು ಈ ತಾಲ್ಲೂಕಿಗೂ ವಿಸ್ತರಿಸಬೇಕು ಎಂದು ಹಲವಾರು ಮನವಿ ಸಲ್ಲಿಕೆಯಾಗಿವೆ. 23.02.2018ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು. ಉಪ ಸಮಿತಿಯ ಶಿಫಾರಸಿನೊಂದಿಗೆ ಸಚಿವ ಸಂಪುಟದ ಅನುಮೋದನೆ ಕೋರುವಂತೆ ನಿರ್ಣಯಿಸಲಾಗಿದೆ. ಇದಕ್ಕೆ ಕಂದಾಯ ಇಲಾಖೆಯೂ ಸಹಮತ ವ್ಯಕ್ತಪಡಿಸಿದೆ.

ಭಾಷಾವಾರು ಪ್ರಾಂತ್ಯ ವಿಂಗಡಣೆ ಮುನ್ನಾ ದಿನಗಳಲ್ಲಿ ಹೈದರಾಬಾದ್‌ ಪ್ರಾಂತ್ಯದಲ್ಲಿ ಇದ್ದು, ನಂತರ ಗದಗ ಜಿಲ್ಲೆಯ ವ್ಯಾಪ್ತಿಯಡಿ ಬಂದಿರುವ ಹಳ್ಳಿಗಳಿಗೆ ಸಂಬಂಧಿಸಿದಂತೆ 371 (ಜೆ) ಸೌಲಭ್ಯ ಒದಗಿಸುವ ಬಗ್ಗೆಯೂ ವಿವರವಾಗಿ ಚರ್ಚಿಸಲಾಯಿತು. ಈ ಹಳ್ಳಿಗಳಿಗೂ ಸಹ 371 (ಜೆ) ಸೌಲಭ್ಯ ಒದಗಿಸಲು ಸಚಿವ ಸಂಪುಟಕ್ಕೆ ಶಿಫಾರಸು ಮಾಡಲು ನಿರ್ಣಯಿಸಲಾಗಿದೆ.

ಸಚಿವ ಸಂಪುಟದ ಅನು ಮೋದನೆಯ ತರುವಾಯ ‘ಕಂದಾಯ ಇಲಾಖೆಯು, ಭಾಷಾವಾರು ಪ್ರಾಂತ್ಯ ವಿಂಗಡಣೆ ಮುನ್ನಾ ದಿನಗಳಲ್ಲಿ ಹೈದರಾಬಾದ್‌ ಪ್ರಾಂತ್ಯದಡಿಯಲ್ಲಿದ್ದು, ಈಗ ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಹಳ್ಳಿಗಳನ್ನು ಗುರುತಿಸಬೇಕು. ಹೈದರಾಬಾದ್‌ ಕರ್ನಾಟಕ ಪ್ರದೇಶದ ಜಿಲ್ಲೆಗಳ ವ್ಯಾಪ್ತಿಯಡಿಯಲ್ಲಿ ಬರು ವಂತೆಯೂ ಸಹ ಸೂಕ್ತ ಆದೇಶ ಹೊರಡಿಸುವುದು ಎಂದು ಆ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

*
ಹರಪನಹಳ್ಳಿ ತಾಲ್ಲೂಕು ಸೇರ್ಪಡೆಗೆ ಮಾತ್ರ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ರೋಣ ತಾಲ್ಲೂಕಿನ ಹಳ್ಳಿಗಳ ಸೇರ್ಪಡೆ ಬೇಡಿಕೆಯನ್ನು ಸಂಪುಟ ಸಭೆ ತಿರಸ್ಕರಿಸಿದೆ.
–ಬಸವರಾಜ ರಾಯರಡ್ಡಿ, ಸಚಿವ

*
ಹರಪನಹಳ್ಳಿ ತಾಲ್ಲೂಕು ಮಾತ್ರ ಸೇರ್ಪಡೆ ಮಾಡುವ ಮತ್ತು ಉಳಿದ ಬೇಡಿಕೆ ತಿರಸ್ಕರಿಸಿರುವ ಕುರಿತು ಸರ್ಕಾರಿ ಆದೇಶ ನೀಡಿ ಗೊಂದಲ ಪರಿಹರಿಸುತ್ತೇವೆ.
ಡಾ.ಶರಣಪ್ರಕಾಶ ಪಾಟೀಲ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.